ಕೆಲಸದಾಕೆಯ ಮೇಲೆ ಕಾರು ಹತ್ತಿಸಿ, ಆಸ್ಪತ್ರೆಗೆ ಕರೆದೊಯ್ದ, ಆಕೆ ಸತ್ತಿದ್ದಾಳೆಂದು ತಿಳಿಯುತ್ತಿದ್ದಂತೆ ಮತ್ತದೇ ಜಾಗದಲ್ಲಿ ಶವ ಎಸೆದು ಹೋದ ಮಹಿಳೆ
ಗುರುಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಥಾರ್ ಕಾರಿನಿಂದ ಮನೆಗೆಲಸದಾಕೆಗೆ ಡಿಕ್ಕಿ ಹೊಡೆದು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಕೆ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ, ಪೊಲೀಸರ ಭಯದಿಂದ ಚಾಲಕಿ ಶವವನ್ನು ಮತ್ತೆ ಅಪಘಾತ ಸ್ಥಳದಲ್ಲಿಯೇ ಎಸೆದು ಪರಾರಿಯಾಗಿದ್ದಾಳೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಅಮಾನವೀಯ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗುರುಗ್ರಾಮ, ಜುಲೈ 16: ಕೆಲವೊಮ್ಮೆ ಅಪಘಾತ(Accident)ಗಳು ಕಣ್ತಪ್ಪಿನಿಂದ ಆಗಿಬಿಡುತ್ತವೆ. ಕೆಲವೊಮ್ಮೆ ತಪ್ಪು ಚಾಲಕರದ್ದಾಗಿದ್ದರೆ ಇನ್ನೂ ಕೆಲವೊಮ್ಮೆ ಬೇರೆಯವರದ್ದಾಗಿರುತ್ತದೆ. ಆದರೆ ಯಾರಿಗೆ ಅಪಾಯವಾದರೂ ಕನಿಷ್ಠ ಮಾನವೀಯತೆ ಎಂಬುದು ಮನುಷ್ಯರಿಗಿರಬೇಕು. ಆದರೆ ಗುರುಗ್ರಾಮದಲ್ಲಿ ನಡೆದ ಘಟನೆ ಎಲ್ಲರ ರಕ್ತ ಕುದಿಯುವಂತೆ ಮಾಡುತ್ತದೆ.
ಮಹಿಳೆಯೊಬ್ಬರು ಕಾರು ರಿವರ್ಸ್ ತೆಗೆಯುವಾಗ ಅಲ್ಲೇ ಮಲಗಿದ್ದ ಮನೆಗೆಲಸದಾಕೆ ಮೇಲೆ ಥಾರ್ ಗಾಡಿ ಹತ್ತಿಸಿದ್ದಾರೆ. ನಂತರ ತನ್ನ ತಪ್ಪಿನ ಅರಿವಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆ ಮಹಿಳೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಹೇಳಿದ್ದನ್ನು ಕೇಳಿದ ಚಾಲಕಿ ಶವವನ್ನು ಮತ್ತೆ ಕಾರಿನಲ್ಲಿ ಹೊತ್ತು ತಂದು ಅಪಘಾತ ನಡೆದ ಸ್ಥಳದಲ್ಲಿ ಎಸೆದು ಅಲ್ಲಿಂದ ಪರಾರಿಯಾಗಿದ್ದಾಳೆ.
ಮೃತರನ್ನು ಉತ್ತರ ಪ್ರದೇಶದ ಮಹೋಬಾ ಮೂಲದ 57 ವರ್ಷದ ಗುಡ್ಡಿ ಎಂದು ಗುರುತಿಸಲಾಗಿದೆ. ಈ ಘಟನೆ ಗುರುಗ್ರಾಮದ ಸೆಕ್ಟರ್ 67 ರಲ್ಲಿರುವ ‘ಅನ್ಸಾಲ್ ವರ್ಸಾಲಿಯಾ ಸೊಸೈಟಿ’ಯಲ್ಲಿ ನಡೆದಿದೆ.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಚಲಿಸುತ್ತಿದ್ದ ಟ್ರಕ್ ಟೈರ್ ಸ್ಫೋಟ, ಮನೆಯೊಳಗೆ ನುಗ್ಗಿದ ಲಾರಿಗೆ, ಒಂದೇ ಕುಟುಂಬದ ಮೂವರು ಬಲಿ
ಸುಸ್ತಾಗಿ ಪಾರ್ಕಿಂಗ್‌ನಲ್ಲಿ ಮಲಗಿದ್ದೇ ತಪ್ಪಾಯ್ತಾ?
ಬಡತನದ ಬೇಗೆಯಿಂದಾಗಿ ಗುಡ್ಡಿ ಅವರು ಈ ಐಷಾರಾಮಿ ಅಪಾರ್ಟ್‌ಮೆಂಟ್‌ನ ಮನೆಗಳಲ್ಲಿ ಕಸಗುಡಿಸುವುದು, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ದಿನವಿಡೀ ದುಡಿದು ಸುಸ್ತಾಗಿದ್ದ ಗುಡ್ಡಿ, ಮಧ್ಯಾಹ್ನ ನೆಲಮಹಡಿಯ ಕಾರ್ ಪಾರ್ಕಿಂಗ್ ಪ್ರದೇಶದ ನೆರಳಿನಲ್ಲಿ ಸ್ವಲ್ಪ ಸಮಯ ಮಲಗಿದ್ದರು.
ಇದೇ ಕಟ್ಟಡದಲ್ಲಿ ವಾಸಿಸುವ ಮಹಿಳೆಯೊಬ್ಬರು ತನ್ನ ಥಾರ್ ಕಾರನ್ನು ಸ್ಟಾರ್ಟ್ ಮಾಡಿ, ಹಿಂದಕ್ಕೆ ಚಲಾಯಿಸುವಾಗ ಕೆಳಗೆ ಮಲಗಿದ್ದ ಗುಜ್ಜಾರನ್ನು ಗಮನಿಸದೇ ಆಕೆಯ ಮೇಲೆ ಕಾರಿನ ಚಕ್ರಗಳನ್ನು ಹರಿಸಿದ್ದಾರೆ. ಗುಡ್ಡಿ ರಕ್ತದ ಮಡುವಿನಲ್ಲಿ ಒದ್ದಾಡುವುದನ್ನು ಕಂಡು ಗಾಬರಿಯಾದ ಚಾಲಕಿ, ತಕ್ಷಣ ಆಕೆಯನ್ನು ಮತ್ತೊಂದು ವಾಹನದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ‘ಡೆಡ್’ ಎಂದ ತಕ್ಷಣ ಬದಲಾದ ಬುದ್ಧಿ
ಆಸ್ಪತ್ರೆಯಲ್ಲಿ ಗುಡ್ಡಿಯನ್ನು ಪರೀಕ್ಷಿಸಿದ ವೈದ್ಯರು, ಆಕೆ ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಇಲ್ಲಿಂದ ಚಾಲಕಿಯ ಅಸಲಿ ಕ್ರೌರ್ಯ ಆರಂಭವಾಯಿತು. ಆಸ್ಪತ್ರೆಯವರ ಕಾಟ, ಪೊಲೀಸರ ಎಫ್‌ಐಆರ್ ಹಾಗೂ ಜೈಲಿನ ಭಯಕ್ಕೆ ಬಿದ್ದ ಆಕೆ, ಮೃತದೇಹಕ್ಕೆ ಗೌರವ ನೀಡುವ ಸೌಜನ್ಯವನ್ನೂ ಮರೆತಳು. ಗುಡ್ಡಿಯ ಶವವನ್ನು ಮರಳಿ ತನ್ನ ಕಾರಿನಲ್ಲಿ ತಂದು, ಅಪಾರ್ಟ್‌ಮೆಂಟ್‌ನ ಯಾವ ಪಾರ್ಕಿಂಗ್ ಜಾಗದಲ್ಲಿ ಅಪಘಾತ ನಡೆದಿತ್ತೋ, ಅದೇ ಕಾಂಕ್ರೀಟ್ ನೆಲದ ಮೇಲೆ ಶವವನ್ನು ಎಸೆದು ಯಾರಿಗೂ ಮಾಹಿತಿ ನೀಡದೆ ತನ್ನ ಮನೆಗೆ ಹೋಗಿ ಅವಿತುಕೊಂಡಿದ್ದಾಳೆ.
ಭುಗಿಲೆದ್ದ ಆಕ್ರೋಶ, ಸಿಸಿಟಿವಿ ತನಿಖೆ ತೀವ್ರ
ಮೃತ ಗುಡ್ಡಿಯ ಸೋದರಳಿಯ ಪಾರ್ಕಿಂಗ್‌ಗೆ ಬಂದಾಗ ಅತ್ತೆಯ ಶವ ಅನಾಥವಾಗಿ ಬಿದ್ದಿರುವುದನ್ನು ಕಂಡು ಕಿರುಚಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ನೂರಾರು ನಿವಾಸಿಗಳು ಮತ್ತು ಮೃತರ ಸಂಬಂಧಿಕರು ಚಾಲಕಿಯ ಮನೆಯ ಮುಂದೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು.
ಮಾಹಿತಿ ಪಡೆದ ಸೆಕ್ಟರ್ 65 ರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಾವು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಏರಿಯಾದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದೇವೆ. ಅಪಘಾತದ ನೈಜತೆ ಹಾಗೂ ಸಾಕ್ಷ್ಯ ನಾಶಪಡಿಸಲು ಶವವನ್ನು ತಂದು ಬಿಸಾಡಿದ ಆಂಗಲ್‌ನಲ್ಲಿ ತನಿಖೆ ನಡೆಸಿ ಚಾಲಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




