ಪಹಲ್ಗಾಮ್ ದಾಳಿ: ಉಗ್ರ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ, ಲಷ್ಕರ್ ಉಗ್ರ ಹಫೀಜ್ ಸಯೀದ್ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಅಡಿಯಲ್ಲಿ, ಸಯೀದ್ ಗೈರುಹಾಜರಿಯಲ್ಲಿ ವಿಚಾರಣೆ ಎದುರಿಸಲಿದ್ದಾನೆ. ಈ ಹೊಸ ಕಾನೂನು ಭಯೋತ್ಪಾದಕರಿಗೆ ಭಾರತದ ನ್ಯಾಯಾಲಯಗಳಿಂದ ತಪ್ಪಿಸಿಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ, ಆಸ್ತಿ ಜಪ್ತಿ ಮತ್ತು ಕಠಿಣ ಶಿಕ್ಷೆಗೆ ಅವಕಾಶ ನೀಡುತ್ತದೆ.

ಶ್ರೀನಗರ, ಜುಲೈ 14:ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್(Pahalgam)ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅತ್ಯಂತ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟಿದೆ. ಈ ದಾಳಿಯ ಮುಖ್ಯ ಸೂತ್ರಧಾರಿ, ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಜಾಗತಿಕ ಉಗ್ರ ಹಫೀಜ್ ಸಯೀದ್ ವಿರುದ್ಧ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಮುಕ್ತ ದಿನಾಂಕದ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಈ ಉಗ್ರನನ್ನು ಭಾರತಕ್ಕೆ ಕರೆತರಲು ಇರುವ ಎಲ್ಲಾ ಅಂತಾರಾಷ್ಟ್ರೀಯ ರಾಜತಾಂತ್ರಿಕ ಮಾರ್ಗಗಳು ವಾಸ್ತವಿಕವಾಗಿ ಖಾಲಿಯಾಗಿವೆ ಎಂದು ಎನ್‌ಐಎ ಕೋರ್ಟ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಆತ ಭಾರತಕ್ಕೆ ಬರದಿದ್ದರೂ ಸಹ ಆತನ ಅನುಪಸ್ಥಿತಿಯಲ್ಲೇ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ.
ಏಪ್ರಿಲ್ 22, 2025 ರಂದು ಕಾಶ್ಮೀರದ ಸೌಂದರ್ಯವನ್ನು ಸವಿಯಲು ಭಾರತದ ವಿವಿಧ ಮೂಲೆಗಳಿಂದ ಬಂದಿದ್ದ ಅಮಾಯಕ ಪ್ರವಾಸಿಗರ ಮೇಲೆ ಲಷ್ಕರ್ ಉಗ್ರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಅಮಾನುಷ ದಾಳಿ ಇದಾಗಿದ್ದು, 26 ಜನ ಪ್ರವಾಸಿಗರನ್ನು ಹತ್ಯೆ ಮಾಡಲಾಗಿತ್ತು.
ಖುಷಿಯಿಂದ ಪ್ರವಾಸಕ್ಕೆ ಹೋಗಿದ್ದ ಇಡೀ ಕುಟುಂಬಗಳು ಹೆಣವಾಗಿ ಮರಳಿದಾಗ ಇಡೀ ದೇಶವೇ ಕಣ್ಣೀರು ಹಾಕಿತ್ತು. ಜುಲೈ 6 ರಂದು ಎನ್‌ಐಎ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ, ಈ ಇಡೀ ಭೀಕರ ರಕ್ತಪಾತದ ಸ್ಕೆಚ್ ಸಿದ್ಧವಾಗಿದ್ದು ಪಾಕಿಸ್ತಾನದ ನೆಲದಲ್ಲಿ ಮತ್ತು ಇದಕ್ಕೆ ಹಣ ಹಾಗೂ ತರಬೇತಿಯ ಕೃಪಾಪೋಷಿತ ನೆರವು ನೀಡಿದ್ದು ಇದೇ ಹಫೀಜ್ ಸಯೀದ್ ಎಂದು ಸಾಕ್ಷ್ಯ ಸಮೇತ ಸಾಬೀತುಪಡಿಸಿದೆ.
ಮತ್ತಷ್ಟು ಓದಿ: ಪಹಲ್ಗಾಮ್ ಕರಾಳ ನೆನಪಿಗೆ 1 ವರ್ಷ: ದಾಳಿಯಲ್ಲಿ ಪ್ರಾಣಬಿಟ್ಟ ಬೆಂಗಳೂರಿನ ಭರತ್ ತಂದೆಯ ನೋವಿನ ಮಾತು
ಏನಿದು ಹೊಸ ಕಾನೂನಿನ ಅಸ್ತ್ರ? ಹಫೀಜ್ ಸಯೀದ್ ಪಾಕಿಸ್ತಾನದ ರಕ್ಷಣೆಯಲ್ಲಿದ್ದುಕೊಂಡು ಭಾರತೀಯ ಕೋರ್ಟ್‌ಗಳ ಮುಂದೆ ಹಾಜರಾಗದೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾನೆ. ಆದರೆ ಭಾರತದ ಹೊಸ ಕಾನೂನಾದ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ’ (BNSS) ಅಡಿಯಲ್ಲಿ ಇದಕ್ಕೆ ಬಲವಾದ ಅಸ್ತ್ರ ಸಿಕ್ಕಿದೆ.
ಗೈರುಹಾಜರಿಯಲ್ಲಿ ವಿಚಾರಣೆ: ಹೊಸ ಕಾನೂನಿನ ಪ್ರಕಾರ, ಒಬ್ಬ ಆರೋಪಿಯು ಭಾರತದ ಹೊರಗಿದ್ದು, ಕೋರ್ಟ್ ಸಮನ್ಸ್ ಮತ್ತು ವಾರಂಟ್‌ಗಳಿಗೆ ಬೆಲೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದರೆ, ಆತನ ಭೌತಿಕ ಉಪಸ್ಥಿತಿಯಿಲ್ಲದೆಯೇ ನ್ಯಾಯಾಲಯವು ಆತನನ್ನು ‘ಘೋಷಿತ ಅಪರಾಧಿ’ ಎಂದು ಘೋಷಿಸಿ ತನಿಖೆ ಮತ್ತು ವಿಚಾರಣೆಯನ್ನು ಮುಂದುವರೆಸಬಹುದು.
ಆಸ್ತಿ ಜಪ್ತಿ ಮತ್ತು ಕಠಿಣ ಶಿಕ್ಷೆ: ಈ ವಿಚಾರಣೆಯ ಅಂತ್ಯದಲ್ಲಿ ಹಫೀಜ್ ಸಯೀದ್ ತಪ್ಪಿತಸ್ಥ ಎಂದು ಸಾಬೀತಾದರೆ , ಆತನಿಗೆ ಗರಿಷ್ಠ ಶಿಕ್ಷೆ ಪ್ರಕಟಿಸಿ, ಭಾರತದಲ್ಲಿರಬಹುದಾದ ಆತನ ಯಾವುದೇ ಬೆಂಬಲಿಗರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಭಾರತಕ್ಕೆ ಸಂಪೂರ್ಣ ಕಾನೂನು ಬಲ ಸಿಗಲಿದೆ.
ಉಳಿದ ಉಗ್ರರಿಗೂ ಸಿದ್ಧವಾಗಿದೆ ಮೃತ್ಯುಕೂಪ ಎನ್‌ಐಎ ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನ್ನ ಮೊದಲ ಆರೋಪಪಟ್ಟಿಯಲ್ಲಿ ಪಾಕಿಸ್ತಾನಿ ಉಗ್ರರಾದ ಸುಲೇಮಾನ್, ಜಿಬ್ರಾನ್, ಹಮ್ಜಾ ಅಫ್ಘಾನಿ, ಸಾಜಿದ್ ಸೈಫುಲ್ಲಾ ಜಾಟ್ ಮತ್ತು ಅವರಿಗೆ ಸ್ಥಳೀಯವಾಗಿ ಆಶ್ರಯ ನೀಡಿದ್ದ ಪಹಲ್ಗಾಮ್ ನಿವಾಸಿಗಳಾದ ಬಶೀರ್ ಹೈ ಅಹ್ಮದ್ ಮತ್ತು ಪರ್ವೇಜ್ ಅಹ್ಮದ್‌ನನ್ನು ಗುರುತಿಸಿದೆ.
ಗಡಿಯಾಚೆಗಿನ ಭಯೋತ್ಪಾದನೆಯ ಇಡೀ ನೆಟ್‌ವರ್ಕ್ ಅನ್ನು ಬೇರುಸಹಿತ ಕಿತ್ತೊಗೆಯಲು ಭಾರತೀಯ ಸೇನೆ ಮತ್ತು ಎನ್‌ಐಎ ಜಂಟಿ ಕಾರ್ಯಾಚರಣೆ ಮುಂದುವರೆಸಿವೆ. ಪಾಕಿಸ್ತಾನದ ಐಎಸ್‌ಐ (ISI) ನೆರಳಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿರುವ ಹಫೀಜ್ ಸಯೀದ್‌ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನಾತ್ಮಕವಾಗಿ ಮೂಲೆಗುಂಪು ಮಾಡಲು ಭಾರತ ಈ ಹೊಸ ಕಾನೂನಿನ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




