ಸಿಜೆಪಿ ಪ್ರತಿಭಟನಾಕಾರ್ತಿಯ ತಂದೆಗೆ ಹೊಡೆದಿದ್ದ ಸ್ವತಂತ್ರ ಭಾರದ್ವಾಜ್ ಬಂಧನ; ಯಾರು ಈತ?

ದೆಹಲಿಯಲ್ಲಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ಬಲಪಂಥೀಯ ಇನ್​ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಆರೋಪಿಯನ್ನು 72 ಗಂಟೆಗಳ ಒಳಗೆ ಬಂಧಿಸುವುದಾಗಿ ದೆಹಲಿ ಪೊಲೀಸರು ಸಿಜೆಪಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಯಾರು ಈ ಸ್ವತಂತ್ರ ಭಾರದ್ವಾಜ್? ಈತ ಸುದ್ದಿಯಾಗಿರುವುದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

ಸಿಜೆಪಿ ಪ್ರತಿಭಟನಾಕಾರ್ತಿಯ ತಂದೆಗೆ ಹೊಡೆದಿದ್ದ ಸ್ವತಂತ್ರ ಭಾರದ್ವಾಜ್ ಬಂಧನ; ಯಾರು ಈತ?
ಸ್ವತಂತ್ರ ಭಾರದ್ವಾಜ್
Image Credit source: TV9

Updated on: Sep 04, 2026 | 7:37 PM

ನವದೆಹಲಿ, ಸೆಪ್ಟೆಂಬರ್ 4: ಜುಲೈ 20ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಜೆಪಿ ವಿದ್ಯಾರ್ಥಿ ನಾಯಕಿ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಕಾರ್ಯಕರ್ತ ಹಾಗೂ ಇನ್​ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್‌ನನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸಂಜಯ್ ಕುಮಾರ್ ಕುಟುಂಬಕ್ಕೆ ಬೆಂಬಲ ಸೂಚಿಸಿದ್ದರು. ಸಿಜೆಪಿ ಕಾರ್ಯಕರ್ತರು ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದರು.

ಸ್ವತಂತ್ರ ಭಾರದ್ವಾಜ್ ಯಾರು?:

ಸ್ವತಂತ್ರ ಭಾರದ್ವಾಜ್ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ‘ಕಟ್ಟಾ ಹಿಂದೂ’ ಎಂದು ಕರೆದುಕೊಳ್ಳುವ ಪ್ರಭಾವಿ ವ್ಯಕ್ತಿಯಾಗಿದ್ದಾನೆ. ಆತನ ವಿಡಿಯೋಗಳು ಹಾಗೂ ಪಾಡ್‌ಕಾಸ್ಟ್‌ಗಳು ತೀವ್ರಗಾಮಿ ಹಿಂದುತ್ವ ನಿಲುವುಗಳ ಕಾರಣದಿಂದ ಭಾರೀ ಚರ್ಚೆಗೊಳಗಾಗುತ್ತಿತ್ತು. ಇತ್ತೀಚೆಗೆ ವೈರಲ್ ಆದ ಪಾಡ್‌ಕಾಸ್ಟ್ ವಿಡಿಯೋ ಒಂದರಲ್ಲಿ ಸ್ವತಂತ್ರ ಭಾರದ್ವಾಜ್, ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನಾಕಾರ ಸಂಜಯ್ ಕುಮಾರ್ ಅವರ ತಲೆಯನ್ನು ಒಡೆದುಹಾಕಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಘಟನೆಯ ನಂತರ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಪ್ರಮುಖ ರಾಜಕಾರಣಿಗಳ ಬೆಂಬಲ ತನಗಿದೆ ಎಂದು ಹೇಳಿಕೊಂಡಿದ್ದರು. ಈ ವಿಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ‘ಸಿಜೆಪಿಯ ಬೇಡಿಕೆ ಈಡೇರಿಸುತ್ತೇವೆ’; ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ರದ್ದುಗೊಳಿಸಿದ್ದಕ್ಕೆ ಸರ್ಕಾರ ಸ್ವಾಗತ

ಸ್ವತಂತ್ರ ಭಾರದ್ವಾಜ್​ನನ್ನು ಬಂಧಿಸಬೇಕು ಎಂದು ಸಿಜೆಪಿ ನಾಯಕರು ಒತ್ತಾಯಿಸಿದ್ದರು. ಆತ ತನ್ನ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ) ಪ್ರಕರಣ ದಾಖಲಾಗಿದ್ದರೂ ಪ್ರಭಾವಿ ನಾಯಕರ ನೆರವಿನಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದಾಗಿ ಸ್ವತಂತ್ರ ಭಾರದ್ವಾಜ್ ತನ್ನ ಪಾಡ್​ಕಾಸ್ಟ್​ ವಿಡಿಯೋದಲ್ಲೇ ಜಂಭದಿಂದ ಹೇಳಿಕೊಂಡಿದ್ದರು. ಆದರೆ, ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, “ನಾನು ಹೇಳಿದ್ದ ರಾಜಕೀಯ ನಾಯಕರ ಹೆಸರುಗಳು ಕೇವಲ ವ್ಯಂಗ್ಯವಾಗಿ ನೀಡಿದ ಹೇಳಿಕೆಗಳು” ಎಂದು ಸ್ಪಷ್ಟನೆ ನೀಡಿದ್ದರು.


ಜಂತರ್ ಮಂತರ್ ಹಲ್ಲೆ ಪ್ರಕರಣ:

ಜುಲೈ 20ರಂದು ನೀಟ್-ಯುಜಿ ಪರೀಕ್ಷೆಯ ಅಕ್ರಮ ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕಿ ನಿಶು ಆಜಾದ್ ಅವರೊಂದಿಗೆ ಅವರ ತಂದೆ ಸಂಜಯ್ ಕುಮಾರ್ ಭಾಗವಹಿಸಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಸಂಜಯ್ ಕುಮಾರ್ ಅವರ ತಲೆಗೆ ತೀವ್ರ ಏಟು ಬಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿತ್ತು. ಈ ಹಲ್ಲೆಯನ್ನು ತಾನೇ ಮಾಡಿದ್ದಾಗಿ ಸ್ವತಂತ್ರ ಭಾರದ್ವಾಜ್ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ; ಸೆಪ್ಟೆಂಬರ್​ 5ರ ಪ್ರತಿಭಟನೆ ಕೈಬಿಟ್ಟ ಸಿಜೆಪಿ

ತನ್ನ ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ನೀಡಿದ್ದ ಸ್ವತಂತ್ರ ಭಾರದ್ವಾಜ್, “ನಾನು ಯಾವುದೇ ಉದ್ದೇಶಪೂರ್ವಕವಾಗಿ ದಾಳಿ ನಡೆಸಿಲ್ಲ. 10ರಿಂದ 15 ಜನರು ನನ್ನನ್ನು ಸುತ್ತುವರಿದಾಗ ಆತ್ಮರಕ್ಷಣೆಗಾಗಿ ಹೊಡೆದಿದ್ದೆ. ಈ ವೇಳೆ ಸಂಜಯ್ ಕುಮಾರ್ ಅವರ ತಲೆಗೆ ಏಟು ಬಿದ್ದಿತ್ತು” ಎಂದು ಹೇಳಿದ್ದರು.

ಸ್ವತಂತ್ರ ಭಾರದ್ವಾಜ್​ನನ್ನು ಹಿಡಿಯುವುದಾಗಿ ದೆಹಲಿ ಪೊಲೀಸರು 72 ಗಂಟೆಗಳ ಸಮಯ ಕೇಳಿದ್ದರು. ದೆಹಲಿ ಪೊಲೀಸರಿಗೆ ಪ್ರತಿಭಟನಾಕಾರರು ನೀಡಿದ್ದ 72 ಗಂಟೆಗಳ ಗಡುವಿನ ಬೆನ್ನಲ್ಲೇ, ನೈಥ್ಲಾ ಗ್ರಾಮದಿಂದ ಬುಲೆಟ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಸ್ವತಂತ್ರ ಭಾರದ್ವಾಜ್‌ನನ್ನು ಬುಲಂದ್‌ಶಹರ್‌ನಲ್ಲಿ ದೆಹಲಿ ಪೊಲೀಸ್ ಜಂಟಿ ಪಡೆಗಳು ವಶಕ್ಕೆ ಪಡೆದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us