ಹೈದರಾಬಾದ್ನಲ್ಲಿ ದಾಂಡಿಯಾ ನೈಟ್ ವೇಳೆ ಭೀಕರ ದುರಂತ, ವಿದ್ಯುತ್ ದೀಪ ಅಳವಡಿಸಿದ್ದ ಸ್ಟ್ಯಾಂಡ್ ಬಿದ್ದು ವಿದ್ಯಾರ್ಥಿನಿ ಸಾವು, 15 ಮಂದಿಗೆ ಗಾಯ
ಹೈದರಾಬಾದ್‌ನ ಎಂವಿಎಸ್‌ಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವರಾತ್ರಿ ದಾಂಡಿಯಾ ವೇಳೆ ವಿದ್ಯುತ್ ದೀಪದ ಸ್ಟ್ಯಾಂಡ್ ಕುಸಿದು 18 ವರ್ಷದ ವಿದ್ಯಾರ್ಥಿನಿ ಸೋನಾ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯಿಂದ ಸಂಭವಿಸಿದ ಈ ದುರಂತಕ್ಕೆ ಕಾಲೇಜು ಆಡಳಿತದ ಸುರಕ್ಷತಾ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಹೈದರಾಬಾದ್, ಅಕ್ಟೋಬರ್ 18: ಹೈದರಾಬಾದ್ ಸಮೀಪದ ರಂಗಾರೆಡ್ಡಿ ಜಿಲ್ಲೆಯ ಪ್ರತಿಷ್ಠಿತ ಎಂಜಿನಿಯರಿಣಂಗ್ ಕಾಲೇಜಿನಲ್ಲಿ ನವರಾತ್ರಿ ದಾಂಡಿಯಾ ಸಂಭ್ರಮವು ಕ್ಷಣಾರ್ಧದಲ್ಲಿ ಕಣ್ಣೀರಾಗಿ ಬದಲಾಗಿದೆ. ನಾದರ್‌ಗುಲ್‌ನಲ್ಲಿರುವ ಎಂವಿಎಸ್‌ಆರ್ (MVSR) ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ದಾಂಡಿಯಾ ನೈಟ್ ವೇಳೆ, ವಿದ್ಯುತ್ ದೀಪ ಅಳವಡಿಸಿದ್ದ ಸ್ಟ್ಯಾಂಡ್ ಏಕಾಏಕಿ ಕುಸಿದು ಬಿದ್ದ ಪರಿಣಾಮ 18 ವರ್ಷದ ವಿದ್ಯಾರ್ಥಿನಿ ಸೋನಾ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದು, ನೃತ್ಯ ಮಾಡುತ್ತಿದ್ದರು.
ಆದಿಬಟ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಎಂವಿಎಸ್‌ಆರ್ ಕಾಲೇಜು ಮೈದಾನದಲ್ಲಿ ನವರಾತ್ರಿ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ರಂಗೇರಿತ್ತು. ಸಂಜೆ ಸುಮಾರು 7.30ರ ಸುಮಾರಿಗೆ ಏಕಾಏಕಿ ಬೀಸಿದ ಬಿರುಗಾಳಿಯ ರಭಸಕ್ಕೆ ದೀಪಗಳನ್ನು ಅಳವಡಿಸಲಾಗಿದ್ದ ಭಾರೀ ಆಯತಾಕಾರದ ಕಬ್ಬಿಣದ ಸ್ಟ್ಯಾಂಡ್ ಸಮತೋಲನ ಕಳೆದುಕೊಂಡು ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಪ್ಪಳಿಸಿತು.
ಚೌಕಟ್ಟಿನ ಕೆಳಗೆ ಸಿಲುಕಿದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸೋನಾ ಅವರ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವವಾಯಿತು. ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಳು. ಉಳಿದ 15 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹಾಗೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್ ಕಾಲ್ತುಳಿತ ದುರಂತ; ಇಂದು ಸಂಜೆ 7.40ಕ್ಕೆ ನಿಜಕ್ಕೂ ಆಗಿದ್ದೇನು?
ಶಂಷಾಬಾದ್ ಡಿಸಿಪಿ ಬಿ. ರಾಜೇಶ್ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, “ಕಾರ್ಯಕ್ರಮ ಕಾಲೇಜು ಆವರಣದೊಳಗೇ ನಡೆದಿದ್ದರೂ, 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಇಂತಹ ಬೃಹತ್ ಕಾರ್ಯಕ್ರಮದ ಬಗ್ಗೆ ಆಡಳಿತ ಮಂಡಳಿ ಕನಿಷ್ಠ ಸ್ಥಳೀಯ ಪೊಲೀಸರಿಗೆ ಮುನ್ಸೂಚನೆ ಅಥವಾ ಮಾಹಿತಿ ನೀಡಬೇಕಿತ್ತು. ಮೂಲಭೂತ ಸುರಕ್ಷತಾ ಕ್ರಮಗಳೇ ಇಲ್ಲದೆ ಮೆಟಲ್ ಸ್ಟ್ಯಾಂಡ್ ಅಳವಡಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭದ್ರತೆ ನಿಯೋಜನೆ:
ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಮುಂದೆ ಜಮಾಯಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ಯಾಂಪಸ್‌ನಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನಿರ್ಲಕ್ಷ್ಯದ ಆರೋಪದಡಿ ಈವೆಂಟ್ ಮ್ಯಾನೇಜ್‌ಮೆಂಟ್ ಮತ್ತು ಕಾಲೇಜು ಆಡಳಿತದ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.
🚨SHOCKING | 1 student named Sony killed, 14 others injured after a lighting structure collapses during a Dandiya event at MVSR Engineering College in Hyderabad https://t.co/wTeskF5hOn
— The Tatva (@thetatvaindia) October 17, 2026
ಸಿಎಂ ರೇವಂತ್ ರೆಡ್ಡಿ ಸಂತಾಪ ಮತ್ತು ಕ್ರಮದ ಭರವಸೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ವಿದ್ಯಾರ್ಥಿನಿ ಸೋನಾ ಅವರ ಸಾವಿಗೆ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ: ದುರಂತದಲ್ಲಿ ಗಾಯಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಾಲೇಜು ಮೈದಾನದಲ್ಲಿ ಸರಿಯಾದ ಸುರಕ್ಷತಾ ಮಾನದಂಡಗಳನ್ನು ಪಾಲಿಸದೆ ಅವಘಡಕ್ಕೆ ಕಾರಣರಾದ ಈವೆಂಟ್ ಆಯೋಜಕರು ಹಾಗೂ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಈ ಘಟನೆಯ ನಂತರ, ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಅಥವಾ ವಿದ್ಯಾರ್ಥಿ ಕೂಟಗಳಿಗೆ ಅಗ್ನಿಶಾಮಕ ಇಲಾಖೆ, ಸ್ಥಳೀಯ ಪೊಲೀಸ್ ಹಾಗೂ ರಚನಾತ್ಮಕ ಇಂಜಿನಿಯರ್‌ಗಳ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




