ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಜಾತಿ ತಾರತಮ್ಯದ ಬಗ್ಗೆ ಪ್ರೊಫೆಸರ್ ಬರೆದಿದ್ದ ಹಳೆಯ ಇ-ಮೇಲ್ ಬಹಿರಂಗ
ಐಐಟಿ ಬಾಂಬೆಯ ಸಾಹಿಲ್ ವಾಕೋಡ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ತಿರುವು: ಪ್ರೊ. ಸೂರ್ಯನಾರಾಯಣ ದೂಲ್ಲಾ ವಿರುದ್ಧ ಜಾತಿ ತಾರತಮ್ಯದ ಆರೋಪ ಕೇಳಿಬಂದಿದೆ. ಆದರೆ, ಇದೇ ಪ್ರೊಫೆಸರ್ ಈ ಹಿಂದೆ ಕ್ಯಾಂಪಸ್‌ನಲ್ಲಿ ತಾರತಮ್ಯ ತಡೆಯಲು ಕಳುಹಿಸಿದ್ದ ಇ-ಮೇಲ್ ಈಗ ಬಹಿರಂಗವಾಗಿದೆ. ಐಐಟಿ ಬಾಂಬೆ ತನ್ನ ಹಿಂದಿನ ಹೇಳಿಕೆಗೆ ಕ್ಷಮೆಯಾಚಿಸಿದ್ದು, ಪೊಲೀಸರು ಹಾಗೂ ವಿದ್ಯಾರ್ಥಿ ಸಂಘಟನೆಗಳು ತೀವ್ರ ತನಿಖೆ ಮತ್ತು ಹೋರಾಟ ನಡೆಸುತ್ತಿವೆ.

ಮುಂಬೈ, ಸಪ್ಟೆಂಬರ್ 24: ಐಐಟಿ ಬಾಂಬೆಯ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ರವೀಂದ್ರ ವಕೋಡ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಸಾಹಿಲ್ ಸಾವಿಗೆ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರ ಜಾತಿ ತಾರತಮ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿರುವ ಬೆನ್ನಲ್ಲೇ, 2024 ರಲ್ಲಿ ಇದೇ ಪ್ರೊಫೆಸರ್ ಕ್ಯಾಂಪಸ್‌ನಲ್ಲಿ ತಾರತಮ್ಯ ತಡೆಗಟ್ಟಲು ಕಳುಹಿಸಿದ್ದ ಮಹತ್ವದ ಅಧಿಕೃತ ಇ-ಮೇಲ್ ಒಂದು ಬೆಳಕಿಗೆ ಬಂದಿದೆ.
2024 ರ ಇ-ಮೇಲ್‌ನಲ್ಲಿ ಪ್ರೊ. ದೂಲ್ಲಾ ಹೇಳಿದ್ದೇನು?
ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ವಿದ್ಯಾರ್ಥಿ ವ್ಯವಹಾರಗಳ ಡೀನ್ ಆಗಿದ್ದಾಗ ಇಡೀ ಕ್ಯಾಂಪಸ್‌ಗೆ ಕಟ್ಟುನಿಟ್ಟಿನ ಸುತ್ತೋಲೆ ಕಳುಹಿಸಿದ್ದರು.
ರ‍್ಯಾಂಕ್ ಮತ್ತು ಕೆಟಗರಿ ಕೇಳುವುದು ನಿಷೇಧ: ವಿದ್ಯಾರ್ಥಿಗಳು ಪರಸ್ಪರ ಜೆಇಇ (JEE Advanced) ರ‍್ಯಾಂಕ್, ಗೇಟ್ (GATE) ಸ್ಕೋರ್ ಅಥವಾ ಪ್ರವೇಶ ವರ್ಗವನ್ನು (Admission Category) ಕೇಳಬಾರದು. ಕುತೂಹಲದಿಂದ ಕೇಳಿದರೂ ಇದು ಮೀಸಲಾತಿ ವರ್ಗದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹಾಗೂ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದರು.
ಸ್ನೇಹಕ್ಕೆ ಆದ್ಯತೆ: ಕ್ರೀಡೆ, ಸಂಗೀತ, ಸಿನಿಮಾ, ಹವ್ಯಾಸಗಳ ಮೂಲಕ ಸ್ನೇಹ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ಲಿಂಗ ಅಥವಾ ಲೈಂಗಿಕ ದೃಷ್ಟಿಕೋನವನ್ನು ಆಧರಿಸಿ ಅವಮಾನಿಸುವುದು, ಜೋಕ್ ಮಾಡುವುದು ಅಥವಾ ವಾಟ್ಸಾಪ್-ಫೇಸ್‌ಬುಕ್‌ನಲ್ಲಿ ಅಂತಹ ಸಂದೇಶಗಳನ್ನು ಹಂಚಿಕೊಳ್ಳುವುದು ಗಂಭೀರ ಅಪರಾಧ ಎಂದು ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದರು. ಇವರ ಅಧಿಕಾರಾವಧಿಯಲ್ಲಿ ಇಂತಹ ಮಾರ್ಗಸೂಚಿಗಳನ್ನು ಎರಡು ಬಾರಿ ಹೊರಡಿಸಲಾಗಿತ್ತು.
ಹಿಂದಿನ ಹೇಳಿಕೆಗೆ ಐಐಟಿ ಬಾಂಬೆ ಬಹಿರಂಗ ಕ್ಷಮೆ:
ಮತ್ತೊಂದೆಡೆ, ಸಾಹಿಲ್ ಸಾವನ್ನಪ್ಪಿದ ಬೆನ್ನಲ್ಲೇ ಸಂಸ್ಥೆಯು “ವಿದ್ಯಾರ್ಥಿ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಬಳಸಿ ಸಿಕ್ಕಿಬಿದ್ದಿದ್ದ” ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಪೂರ್ಣ ಪ್ರಮಾಣದ ತನಿಖೆ ಮುಗಿಯುವ ಮುನ್ನವೇ ಘಟನೆಯ ವಿವರಗಳನ್ನು ನಿರೂಪಿಸಿರುವುದು ತಪ್ಪು ಎಂದು ಒಪ್ಪಿಕೊಂಡಿರುವ ಐಐಟಿ ಬಾಂಬೆ ಆಡಳಿತ ಮಂಡಳಿ, ತನ್ನ ಹಿಂದಿನ ಹೇಳಿಕೆಗೆ ಗುರುವಾರ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಮತ್ತಷ್ಟು ಓದಿ: ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಕಡ್ಡಾಯ ರಜೆ ಮೇಲೆ ಹೊರ ನಡೆದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ
ಕ್ರೈಂ ಬ್ರಾಂಚ್ ತನಿಖೆ ತೀವ್ರ:
ಮುಂಬೈ ಅಪರಾಧ ವಿಭಾಗದ ಪೊಲೀಸರು ಪರೀಕ್ಷಾ ಹಾಲ್‌ನ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಸಾಹಿಲ್‌ನಿಂದ ಉತ್ತರ ಪತ್ರಿಕೆ ಹಾಗೂ ಮೊಬೈಲ್ ಪಡೆದು ಹೊರಕಳಿಸಿದ ನಂತರ, ಆತ ಹಾಸ್ಟೆಲ್ ಕೋಣೆಗೆ ಹೋಗುವವರೆಗಿನ ನಡವಳಿಕೆಗಳನ್ನು ಪತ್ತೆಹಚ್ಚಲಾಗುತ್ತಿದೆ. ಸಾಹಿಲ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಮೂವರು ಸಹಪಾಠಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಪ್ರೊಫೆಸರ್ ಬರೆದಿದ್ದ ಇ-ಮೇಲ್ ಮತ್ತು ಪೋಷಕರ ಜಾತಿನಿಂದನೆ ಆರೋಪಗಳೆರಡನ್ನೂ ಸಮಗ್ರವಾಗಿ ತನಿಖೆಗೆ ಒಳಪಡಿಸಲಾಗಿದೆ.
ಕ್ಯಾಂಪಸ್‌ನಲ್ಲಿ ‘ಎಪಿಪಿಎಸ್’ ಪ್ರತಿಭಟನೆ: ಐಐಟಿ ಬಾಂಬೆಯ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ತಾರತಮ್ಯ ವಿರೋಧಿ ನಿಯಮಗಳು ಕೇವಲ ಕಾಗದ ಮತ್ತು ಇಮೇಲ್‌ಗಳಿಗೆ ಸೀಮಿತವಾಗದೆ ವಾಸ್ತವದಲ್ಲಿ ಜಾರಿಯಾಗಬೇಕು ಎಂದು ಆಗ್ರಹಿಸುತ್ತಿವೆ.
ದರ್ಶನ್ ಸೋಲಂಕಿ ಪ್ರಕರಣದ ನೆನಪು: 2023 ರಲ್ಲಿ ಇದೇ ಐಐಟಿ ಬಾಂಬೆಯಲ್ಲಿ ದರ್ಶನ್ ಸೋಲಂಕಿ ಎಂಬ ಪ್ರಥಮ ವರ್ಷದ ವಿದ್ಯಾರ್ಥಿ ಜಾತಿ ತಾರತಮ್ಯದ ಕಾರಣದಿಂದ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕವೇ ಸಂಸ್ಥೆಯು ತಾರತಮ್ಯ ವಿರೋಧಿ ಮಾರ್ಗಸೂಚಿಗಳನ್ನು ಬಿಗಿಗೊಳಿಸಿತ್ತು.
ಪೊಲೀಸ್ ಕಣ್ಗಾವಲು: ಪ್ರೊಫೆಸರ್ ದೂಲ್ಲಾ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿರುವುದರಿಂದ, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ವರದಿಗಾಗಿ ಕಾಯಲಾಗುತ್ತಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿರುವುದರಿಂದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ವರದಿ ಕಾಯಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




