
ನವದೆಹಲಿ, ಜುಲೈ 22: ಐಪಿಎಲ್ (IPL) ಸಂಸ್ಥಾಪಕ ಲಲಿತ್ ಮೋದಿ (Lalit Modi) 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಭಾರತಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್ ಆಯೋಜನೆಗೆ ಸಂಬಂಧಿಸಿದ ಫೆಮಾ (FEMA) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ವಿಧಿಸಿದ್ದ ದಂಡ ಹಾಗೂ ಆರೋಪಗಳನ್ನು ಮೇಲ್ಮನವಿ ಪ್ರಾಧಿಕಾರ ರದ್ದುಗೊಳಿಸಿದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ. ಮೇಲ್ಮನವಿ ಪ್ರಾಧಿಕಾರದ ತೀರ್ಪಿನ ನಂತರ ಹರ್ಷ ವ್ಯಕ್ತಪಡಿಸಿರುವ ಲಲಿತ್ ಮೋದಿ, ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಕೊನೆಗೂ ಸತ್ಯ ಬಯಲಾಗಿದೆ ಎಂದಿದ್ದಾರೆ.
“ನನಗೆ ನಿನ್ನೆಯ ತೀರ್ಪಿನಿಂದ ತುಂಬಾ ಸಂತೋಷವಾಗಿದೆ. 16 ವರ್ಷಗಳಿಂದ ನಾನು ಸತತವಾಗಿ ಹೋರಾಟ ನಡೆಸಿದ್ದೇನೆ. ಮಾಧ್ಯಮಗಳಿಗೆ ಮತ್ತು ಪ್ರತಿಯೊಬ್ಬರಿಗೂ ನಾನು ಏನು ಹೇಳುತ್ತ ಬಂದಿದ್ದೆನೋ, ಕೊನೆಗೂ ಅದೇ ಸತ್ಯವೆಂದು ಸಾಬೀತಾಗಿದೆ. ಟ್ರಿಬ್ಯೂನಲ್ ನನ್ನ ಪರವಾಗಿ ತೀರ್ಪು ನೀಡಿರುವುದಕ್ಕೆ ನನಗೆ ಅತ್ಯಂತ ಸಂತಸವಾಗಿದೆ. ಐಪಿಎಲ್‌ನ ಒಳಿತನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಸ್ವಾರ್ಥವಿರಲಿಲ್ಲ. ಈಗ ಆ ಅಧ್ಯಾಯ ಮುಗಿದಿದೆ. ನಾನು ಜೀವನದಲ್ಲಿ ಮುನ್ನಡೆಯಲಿದ್ದು, ಭಾರತಕ್ಕೆ ಮರಳಲು ಕಾತರನಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ ತಂಡ ಖರೀದಿಸಲು ಮುಂದಾಗಿದ್ದ ದಾವೂದ್; ಪ್ಯಾಂಟ್‌ನಲ್ಲೇ ಮೂತ್ರ ಮಾಡಿಕೊಂಡಿದ್ದ ಲಲಿತ್ ಮೋದಿ
ಈ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತಾವು ಭಾರತಕ್ಕೆ ಮರಳುವುದಾಗಿ ಲಲಿತ್ ಮೋದಿ ತಿಳಿಸಿದ್ದಾರೆ. 2009ರಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆದ ಕಾರಣದಿಂದ ಐಪಿಎಲ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ರಿಸರ್ವ್ ಬ್ಯಾಂಕ್ (RBI) ಪೂರ್ವಾನುಮತಿ ಇಲ್ಲದೆ 243.45 ಕೋಟಿ ವಿದೇಶಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಇಡಿ (ED) ಲಲಿತ್ ಮೋದಿಗೆ ದಂಡ ವಿಧಿಸಿತ್ತು.
ತೀರ್ಪಿನಲ್ಲಿ ಏನಿದೆ?:
ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ನೇತೃತ್ವದ ಪೀಠವು ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲು ಮಾಡಿದ ವೆಚ್ಚವು ‘ಚಾಲ್ತಿ ಖಾತೆ ವಹಿವಾಟು’ (Current Account transaction) ಆಗಿದ್ದು, ಇದಕ್ಕೆ ಆರ್‌ಬಿಐನ ಪೂರ್ವಾಪರ ಅನುಮತಿ ಅಗತ್ಯವಿರಲಿಲ್ಲ ಎಂದು ಹೇಳಿದೆ. ಅಲ್ಲದೆ, ಬಿಸಿಸಿಐ (BCCI)ನ ಶಾಸನಬದ್ಧ ನಿಯಮಾವಳಿಗಳ ಉಲ್ಲಂಘನೆಗೆ ಲಲಿತ್ ಮೋದಿ ವೈಯಕ್ತಿಕವಾಗಿ ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಾಧಿಕಾರ, ಅವರ ಮೇಲಿದ್ದ ಭಾರಿ ಮೊತ್ತದ ದಂಡವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಇದನ್ನೂ ಓದಿ: ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?
2010ರಿಂದ ವಿದೇಶದಲ್ಲಿದ್ದ ಲಲಿತ್ ಮೋದಿ:
2010ರಲ್ಲಿ ಐಪಿಎಲ್ ಆಡಳಿತದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ನಂತರ ಲಲಿತ್ ಮೋದಿ ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಿದ್ದರು. ಇದೀಗ ಈ ತೀರ್ಪು ಅವರಿಗಿದ್ದ ಪ್ರಮುಖ ಕಾನೂನು ಅಡೆತಡೆಯನ್ನು ನಿವಾರಿಸಿದ್ದು, ದಶಕಗಳ ನಂತರ ಸ್ವದೇಶಕ್ಕೆ ಮರಳಲು ಅವರಿಗೆ ಹಾದಿ ಸುಗಮಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ