AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಪ್ ಧನ್ಖರ್ ಸೇಫ್ ಆಗಿದ್ದಾರಾ?; ಮಾಜಿ ಉಪರಾಷ್ಟ್ರಪತಿ ಎಲ್ಲಿದ್ದಾರೆಂದು ಅಮಿತ್ ಶಾಗೆ ಕಪಿಲ್ ಸಿಬಲ್ ಪ್ರಶ್ನೆ

ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನ್ಖರ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ರಾಜೀನಾಮೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದರೂ ಜಗದೀಪ್ ಅವರಾಗಲಿ, ಅವರ ಮನೆಯವರಾಗಲಿ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲವೆಂಬುದು ಆಶ್ಚರ್ಯ ತಂದಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೇ, ಜಗದೀಪ್ ಧನ್ಖರ್ ಅವರ ಸುರಕ್ಷತೆಯ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಜಗದೀಪ್ ಧನ್ಖರ್ ಸೇಫ್ ಆಗಿದ್ದಾರಾ?; ಮಾಜಿ ಉಪರಾಷ್ಟ್ರಪತಿ ಎಲ್ಲಿದ್ದಾರೆಂದು ಅಮಿತ್ ಶಾಗೆ ಕಪಿಲ್ ಸಿಬಲ್ ಪ್ರಶ್ನೆ
Kapil Sibal
ಸುಷ್ಮಾ ಚಕ್ರೆ
|

Updated on: Aug 09, 2025 | 5:19 PM

Share

ನವದೆಹಲಿ, ಆಗಸ್ಟ್ 9: ಅನಾರೋಗ್ಯದ ಕಾರಣ ನೀಡಿದ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಖರ್ (Jagdeep Dhankhar) ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ್ದರು. ಜುಲೈ 21ರಂದು ರಾಜೀನಾಮೆ ನೀಡಿದ ಬಳಿಕ ಅವರು ಹೊರಗೆ ಎಲ್ಲೂ ಕಾಣಿಸಿಕೊಂಡಿಲ್ಲ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ (Congress) ಅನುಮಾನ ವ್ಯಕ್ತಪಡಿಸಿದ್ದು, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಎಲ್ಲಿದ್ದಾರೆ? ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal)  ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಮನವಿ ಮಾಡಿದ್ದಾರೆ.

ಜಗದೀಪ್ ಧನ್ಖರ್ ದಿಢೀರನೆ ರಾಜೀನಾಮೆ ನೀಡುವುದರ ಹಿಂದೆ ಎನ್​ಡಿಎ ಸರ್ಕಾರದ ಕೈವಾಡವಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಬಿಜೆಪಿಯಾಗಲಿ ಅಥವಾ ಜಗದೀಪ್ ಧನ್ಖರ್ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಬೆನ್ನಲ್ಲೇ ರಾಜೀನಾಮೆಯ ಬಳಿಕ ಜಗದೀಪ್ ಧನ್ಖರ್ ಅಜ್ಞಾತರಾಗಿ ಉಳಿದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೇಂದ್ರ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಜಗದೀಪ್ ಧನ್ಖರ್ ಎಲ್ಲಿದ್ದಾರೆ? ಅವರು ಸುರಕ್ಷಿತರಾಗಿದ್ದಾರಾ? ಅವರು ಯಾಕೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ? ಎಂಬುದರ ಬಗ್ಗೆ ಮಾಹಿತಿ ಬೇಕಾಗಿದೆ. ಅವರು ದೇಶದ ಉಪರಾಷ್ಟ್ರಪತಿಗಳಾಗಿದ್ದವರು. ಅವರ ಬಗ್ಗೆ ತಿಳಿಯುವ ಹಕ್ಕು ಜನರಿಗೆ ಇದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಬೇಕು’ ಎಂದು ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.

ಅನಾರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಜಗದೀಪ್ ಧನ್ಖರ್ ಧಂಖರ್ ಜುಲೈ 21ರಂದು ರಾಜೀನಾಮೆ ನೀಡಿದ್ದರು. ಆದರೆ ವಿರೋಧ ಪಕ್ಷದ ನಾಯಕರು ಕೇಂದ್ರ ಸರ್ಕಾರ ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದೆ ಎಂದು ಆರೋಪಿಸಿದ್ದರು. “ಜುಲೈ 22ರಂದು ನಮ್ಮ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದರು. ಇಂದು ಆಗಸ್ಟ್ 9. ಆ ದಿನದಿಂದ ಇಲ್ಲಿಯವರೆಗೂ ಅವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿಲ್ಲ. ರಾಜೀನಾಮೆ ನೀಡಿದ ಮೊದಲ ದಿನ ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ವೈಯಕ್ತಿಕ ಕಾರ್ಯದರ್ಶಿ ಫೋನ್ ತೆಗೆದುಕೊಂಡು ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಆದರೆ, ಕೊನೆಗೂ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: ಆ. 12ರಂದು ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ; ಪ್ರಧಾನಿ ಮೋದಿ, ಜೆಪಿ ನಡ್ಡಾ ನಿರ್ಧಾರವೇ ಅಂತಿಮ

ಜಗದೀಪ್ ಧನ್ಖರ್ ಉಪರಾಷ್ಟ್ರಪತಿಯಾಗಿದ್ದವರು. ಅವರು ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಕೇಂದ್ರ ಸರ್ಕಾರವನ್ನು ಬೆಂಬಲಿಸಿದರು. ಆದರೆ ಈಗ ವಿರೋಧ ಪಕ್ಷಗಳು ಅವರನ್ನು ರಕ್ಷಿಸಬೇಕಾಗಿ ಬರುತ್ತಿದೆ ಎಂದು ಕಪಿಲ್ ಸಿಬಲ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ನಾವು ಏನು ಮಾಡಬೇಕು? ನಾವು ಹೇಬಿಯಸ್ ಕಾರ್ಪಸ್ ಸಲ್ಲಿಸಬೇಕೇ?” ಎಂದು ಅವರು ಪ್ರಶ್ನಿಸಿದ್ದಾರೆ. ಜಗದೀಪ್ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು ಅಮಿತ್ ಶಾ ಈ ಬಗ್ಗೆ ಹೇಳಿಕೆ ನೀಡಬೇಕೆಂದು ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.

“ಉಪರಾಷ್ಟ್ರಪತಿಗಳಾಗಿದ್ದ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಗೃಹ ಸಚಿವಾಲಯಕ್ಕೆ ತಿಳಿದಿರುತ್ತದೆ. ಅಮಿತ್ ಶಾ ಅವರು ಎಲ್ಲಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡಬೇಕು. ಏಕೆಂದರೆ ಅವರ ಆರೋಗ್ಯ ಕೂಡ ಚೆನ್ನಾಗಿಲ್ಲ. ಹೀಗಾಗಿ, ನಮಗೆ ಕಳವಳವಾಗುತ್ತಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆಯೇ? ಅವರ ಕುಟುಂಬದವರು ಕೂಡ ಯಾವ ಹೇಳಿಕೆಯನ್ನೂ ನೀಡಿಲ್ಲ. ನಿಜವಾದ ಸಮಸ್ಯೆ ಏನು ಎಂಬುದು ನಮಗೆ ತಿಳಿಯಬೇಕು. ನಾವು ಇತರ ದೇಶಗಳಲ್ಲಿ ಮಾತ್ರ ಇಂತಹ ವಿಷಯಗಳ ಬಗ್ಗೆ ಕೇಳಿದ್ದೇವೆ. ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದ್ದರಿಂದ ಅಂತಹ ವಿಷಯಗಳು ಸಾರ್ವಜನಿಕ ವಲಯದಲ್ಲಿರಬೇಕು” ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.

ಇದನ್ನೂ ಓದಿ: Jagdeep Dhankhar: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ

74 ವರ್ಷದ ಜಗದೀಪ್ ಧನ್ಖರ್ ಅವರು ಆಗಸ್ಟ್ 2022ರಲ್ಲಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿ 2027ರವರೆಗೆ ಇತ್ತು. ಅವರು ರಾಜ್ಯಸಭೆಯ ಅಧ್ಯಕ್ಷರೂ ಆಗಿದ್ದರು. ಆದರೆ,ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದಂದು ಅವರ ರಾಜೀನಾಮೆ ನೀಡಿದ್ದರು. ಜಗದೀಪ್ ಇತ್ತೀಚೆಗೆ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ಅನೇಕ ಸಂಸದರು ಜಗದೀಪ್ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದರು.

ಆಗಸ್ಟ್ 1ರಂದು ಭಾರತ ಚುನಾವಣಾ ಆಯೋಗ (ECI) ಉಪರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. 15ನೇ ಉಪರಾಷ್ಟ್ರಪತಿಯ ಆಯ್ಕೆಗೆ ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅದೇ ದಿನ ಫಲಿತಾಂಶವನ್ನು ಘೋಷಿಸಲಾಗುವುದು. ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ