ಅಭಿವ್ಯಕ್ತಿ​ ಸ್ವಾತಂತ್ರ್ಯದ ವಕ್ತಾರನಂತೆ ವರ್ತಿಸುತ್ತಿರುವ ಟ್ವಿಟರ್​ನಿಂದ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ: ರವಿಶಂಕರ್ ಪ್ರಸಾದ್

ಟ್ವಿಟರ್ ವರ್ತನೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಟ್ವಿಟರ್ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಅಭಿವ್ಯಕ್ತಿ​ ಸ್ವಾತಂತ್ರ್ಯದ ವಕ್ತಾರನಂತೆ ವರ್ತಿಸುತ್ತಿರುವ ಟ್ವಿಟರ್​ನಿಂದ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ: ರವಿಶಂಕರ್ ಪ್ರಸಾದ್
ರವಿಶಂಕರ್​ ಪ್ರಸಾದ್​
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 16, 2021 | 3:49 PM

ದೆಹಲಿ: ಕೇಂದ್ರ ಸರ್ಕಾರವು ಬುಧವಾರ ಟ್ವಿಟರ್​ ವರ್ತನೆ ಕುರಿತು ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದೆ. ಟ್ವಿಟರ್ ವರ್ತನೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಟ್ವಿಟರ್ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಟ್ವಿಟರ್​ ಭಾರತದಲ್ಲಿ ಈವರೆಗೆ ಅನುಭವಿಸಿದ್ದ ಸುರಕ್ಷೆಯನ್ನು ಕಳೆದುಕೊಳ್ಳಬಹುದು ಎಂಬ ವರದಿಗಳು ಪ್ರಕಟವಾದ ನಂತರ ರವಿಶಂಕರ್ ಪ್ರಸಾದ್ ಅವರ ಈ ಹೇಳಿಕೆ ಹೊರಬಿದ್ದಿದೆ. ಕಳೆದ ಫೆಬ್ರುವರಿಯಲ್ಲಿ ಪ್ರಕಟವಾಗಿದ್ದ ಹೊಸ ಐಟಿ ನಿಯಮಗಳಿಗೆ (2021) ಟ್ವಿಟರ್ ಬದ್ಧವಾಗಿಲ್ಲ ಎಂದು ಸಚಿವರು ಆಕ್ಷೇಪಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮ ಕಂಪನಿ ಎನ್ನುವ ಕಾರಣಕ್ಕೆ ಟ್ವಿಟರ್ ಅನುಭವಿಸುತ್ತಿದ್ದ ಹಲವು ಸವಲತ್ತುಗಳು ಮುಂದುವರೆಯುತ್ತವೆಯೇ ಇಲ್ಲವ ಎನ್ನುವ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳಿಗೆ ಬದ್ಧವಾಗಿರದಿದ್ದರೆ ಟ್ವಿಟರ್​ಗೆ ಇರುವ ಸಾಮಾಜಿಕ ಮಾಧ್ಯಮದ ಮಾನ್ಯತೆ (intermediary status) ಹೋಗಬಹುದು. ಭಾರತೀಯ ದಂಡಸಂಹಿತೆಯ ಎಲ್ಲ ನಿಯಮಗಳೂ ಟ್ವಿಟರ್​ಗೂ ಅನ್ವಯವಾಗುತ್ತವೆ ಎಂದು ಸರ್ಕಾರದ ಮೂಲಗಳನ್ನು ಉದ್ದೇಶಿಸಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿತ್ತು.

ಈ ಕುರಿತು ಹೇಳಿಕೆ ನೀಡಿದ್ದ ಟ್ವಿಟರ್ ವಕ್ತಾರರು, ‘ನಿಯಮಗಳ ಪಾಲನೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯು ಈಗಾಗಲೇ ಹಂಗಾಮಿ ಅಧಿಕಾರಿಯನ್ನು ನೇಮಿಸಿದೆ. ಅವರ ವಿವರವನ್ನು ಸಚಿವಾಲಯದೊಂದಿಗೆ ಶೀಘ್ರ ಹಂಚಿಕೊಳ್ಳಲಾಗುವುದು. ಸರ್ಕಾರ ರೂಪಿಸಿರುವ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲು ಟ್ವಿಟರ್​ ಗಮನನೀಡುತ್ತಿದೆ’ ಎಂದು ಹೇಳಿದ್ದರು. ಟ್ವಿಟರ್​ನಲ್ಲಿ ಈ ಬೆಳವಣಿಗೆಗಳ ಕುರಿತು ಥ್ರೆಡ್​ ಒಂದನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ರವಿಶಂಕರ್​ ಪ್ರಸಾದ್, ಟ್ವಿಟರ್​ಗೆ ಈವರೆಗೆ ನೀಡಿರುವ ರಿಯಾಯ್ತಿಗಳನ್ನು ಮುಂದುವರಿಸಬೇಕೆ ಎನ್ನುವ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಕಳೆದ ಮೇ 26ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪಾಲನೆಗೆ ಟ್ವಿಟರ್ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ನಿಯಮಗಳಿಗೆ ಬದ್ಧವಾಗುವ ಹಲವು ಅವಕಾಶಗಳನ್ನು ಟ್ವಿಟರ್​ಗೆ ನೀಡಲಾಯಿತು. ಆದರೆ ಅವರು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘಿಸಲು ಮುಂದಾದರು ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದವು ಅದು ಭೌಗೋಳಿಕವಾಗಿ ಎಷ್ಟು ವಿಶಾಲವಾಗಿದೆಯೋ ಅದರ ಸಂಸ್ಕೃತಿಯೂ ಅಷ್ಟೇ ವೈವಿಧ್ಯಮಯವಾಗಿದೆ. ಸುಳ್ಳುಸುದ್ದಿಯ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಹೊತ್ತಿಕೊಳ್ಳುವ ಸಣ್ಣದೊಂದು ಕಿಡಿಯು ದೊಡ್ಡ ಬೆಂಕಿಯಾಗಿ ಹರಡಬಹುದು. ಅದನ್ನು ತಡೆಯುವುದೂ ಸಹ ಹೊಸ ಮಾರ್ಗಸೂಚಿ ಜಾರಿ ತರುವುದರ ಹಿಂದಿದ್ದ ಉದ್ದೇಶಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ.

ಟ್ವಿಟರ್​ ಏಕಪಕ್ಷೀಯವಾಗಿ ಕೆಲವೊಂದಿಷ್ಟು ಟ್ವೀಟ್​ಗಳನ್ನು ‘ತಿರುಚಿದ್ದು’ (manipulated) ಎಂದು ಹೇಳುತ್ತದೆ. ಆದರೆ ಮತ್ತೊಂದು ವರ್ಗ ಮಾಡುವ ಇಂಥದ್ದೇ ಟ್ವೀಟ್​ಗಳ ಬಗ್ಗೆ ಸುಮ್ಮನಿರುತ್ತದೆ. ತನ್ನ ಮೂಗಿನ ನೇರಕ್ಕೆ ಇಂಥ ಹಣೆಪಟ್ಟಿ ಅಂಟಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಜೈ ಶ್ರೀರಾಮ್​ ಕೂಗಲು ಹೇಳಿ ಹಲ್ಲೆ ನಡೆಸಿದ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೊ ವೈರಲ್ ಆಗಿತ್ತು. ಆದರೆ ನಂತರದ ತನಿಖೆಯಲ್ಲಿ ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದವರೂ ಅದೇ ಸಮುದಾಯಕ್ಕೆ ಸೇರಿದವರು ಎಂಬ ಅಂಶ ತಿಳಿದುಬಂತು ಎಂದು ಪ್ರಸಾದ್ ನೆನಪಿಸಿಕೊಂಡಿದ್ದಾರೆ.

ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಟ್ವಿಟರ್ ನಿಷ್ಪಕ್ಷವಾತವಾಗಿ ವರ್ತಿಸುತ್ತಿಲ್ಲ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಟ್ವಿಟರ್​​ಗೆ ಹೆಚ್ಚು ಆಸಕ್ತಿಯಿದೆ. ಆದರೆ ಉತ್ತರ ಪ್ರದೇಶ ಸೇರಿದಂತೆ ಹಲವು ಪ್ರಕರಣಗಳಲ್ಲಿ ಟ್ವಿಟರ್​ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ.

ನಿಂದನೆ ಮತ್ತು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವುದರಿಂದ ಜನರನ್ನು ಕಾಪಾಡಲೆಂದು ರೂಪಿಸಿದ ಕಾನೂನುಗಳಿಗೆ ಬದ್ಧವಾಗಿರಲು ಟ್ವಿಟರ್​ನಂಥ ವೇದಿಕೆಗಳಿಗೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ ಅವರು, ಕಾನೂನು ಭಾರತೀಯ ಸಮಾಜದ ತಳಹದಿ. ವಾಕ್​ ಸ್ವಾತಂತ್ರ್ಯಕ್ಕೆ ನಮ್ಮ ದೇಶದಲ್ಲಿ ಸಂವಿಧಾನದ ಖಾತ್ರಿಯಿದೆ. ಇದನ್ನು ನಮ್ಮ ಸರ್ಕಾರವೂ ಜಿ7 ಸಭೆಯಲ್ಲಿ ಪುನರುಚ್ಚರಿಸಿದೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ತಾನೊಬ್ಬ ವಕ್ತಾರ ಎಂಬಂತೆ ಯಾವುದೇ ವಿದೇಶಿ ಕಂಪನಿ ವರ್ತಿಸಿದರೆ, ಭಾರತೀಯ ಕಾನೂನುಗಳಿಗೆ ಅಗೌರವ ತೋರಿಸಿದರೆ ಅಂಥವನ್ನು ಸಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

(IT Minister Ravishankar Prasad Astounding that Twitter defies Intermediary Guidelines)

ಇದನ್ನು ಓದಿ: Explainer: ಹಲವು ಟ್ವಿಟರ್​ ಖಾತೆಗಳ ಫಾಲೊವರ್ಸ್ ಸಂಖ್ಯೆ​ ಇಳಿಯುತ್ತಿದೆ ಏಕೆ?

ಇದನ್ನೂ ಓದಿ: Tulu Language: ತುಳು ಭಾಷೆಗೆ ಸೂಕ್ತ ಸ್ಥಾನಮಾನ; ಟ್ವಿಟರ್​ನಲ್ಲಿ ಜೋರಾಯ್ತು ತುಳು ಭಾಷಿಕರ ಹೋರಾಟ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada