ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಕುಟುಂಬಕ್ಕೆ ತಲಾ 3 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮೃತರಿಗೆ ಸಂತಾಪ ಸೂಚಿಸಿದ್ದು, ಗೂಳಿ ದಾಳಿಯಿಂದ ಸಾವನ್ನಪ್ಪಿದ ಪಾಲಮೇಡುವಿನ ಗೂಳಿ ಪಳಗಿಸುವ ಅರವಿಂದ್ ರಾಜ್ ಮತ್ತು ಪುದುಕೊಟ್ಟೈ ಜಿಲ್ಲೆಯ ವೀಕ್ಷಕ ಎಂ ಅರವಿಂದ್ ಅವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಪಾಲಮೇಡುವಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 9 ಹೋರಿಗಳನ್ನು ತಡೆದು ಐದನೇ ಸುತ್ತಿನಲ್ಲಿ ಮುಂಚೂಣಿಯಲ್ಲಿದ್ದ 26 ವರ್ಷದ ಯುವಕ ಅರವಿಂದ್ ರಾಜ್ ಅವರು ಗೂಳಿ ತಿವಿದು ಮೃತಪಟ್ಟಿದ್ದಾರೆ.
ಮೃತರ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ತಲಾ 3 ಲಕ್ಷ ರೂ.ಗಳನ್ನು ನೀಡುವಂತೆ ಆದೇಶಿಸಿದ್ದೇನೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಮತ್ತಷ್ಟು ಓದಿ: ಎಂಕೆ ಸ್ಟಾಲಿನ್ರ 70ನೇ ಹುಟ್ಟುಹಬ್ಬದಂದು ಚೆನ್ನೈನಲ್ಲಿ ಮೊದಲ ಬಾರಿಗೆ ನಡೆಯಲಿದೆ ಜಲ್ಲಿಕಟ್ಟು
ಜಿಲ್ಲೆಯ ಅವನಿಯಪುರಂನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪಳಗಿಸುವವರು ಮತ್ತು ಮಾಲೀಕರು ಸೇರಿದಂತೆ ಕನಿಷ್ಠ 75 ಜನ ಗಾಯಗೊಂಡಿದ್ದಾರೆ ಮತ್ತು ಪಾಲಮೇಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 34 ಮಂದಿ ಗಾಯಗೊಂಡಿದ್ದಾರೆ. ಮಧುರೈನ ಅವನಿಯಪುರಂನಲ್ಲಿ ಭಾನುವಾರ ನಡೆದ ಜಲ್ಲಿಕಟ್ಟು ಕಾರ್ಯಕ್ರಮದ ನಂತರ, 60 ಜನರು ಗಾಯಗೊಂಡಿದ್ದಾರೆ, ಅವರಲ್ಲಿ 20 ಮಂದಿ ಗಂಭೀರವಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿರುವ 40 ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಶ್ ಶೇಖರ್ ತಿಳಿಸಿದ್ದಾರೆ. ಸೋಮವಾರ ನಡೆದ ಪಾಲಮೇಡು ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಚಿನ್ನಪ್ಪಟ್ಟಿಯ ತಮಿಳರಸನ್, ಪಾಲಮೇಡುವಿನ ಮಣಿ, ಪಾಲಮೇಡುವಿನ ರಾಜಾ ಅವರು ಕ್ರಮವಾಗಿ ಗರಿಷ್ಠ 23, 19 ಮತ್ತು 15 ಗೂಳಿಗಳನ್ನು ಪಳಗಿಸಿ ಪ್ರಥಮ ಬಹುಮಾನ ಪಡೆದರು. ವಿಜೇತರು ಕಾರು, ದ್ವಿಚಕ್ರ ವಾಹನ, ಚಿನ್ನದ ನಾಣ್ಯಗಳು ಮತ್ತು ಬೆಳ್ಳಿಯ ಪಾತ್ರೆಗಳನ್ನು ಇತರ ಉಡುಗೊರೆಗಳನ್ನು ಪಡೆದರು.
ಪೊಂಗಲ್ ಹಬ್ಬದ ಅಂಗವಾಗಿ, ತಮಿಳುನಾಡಿನ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಜನವರಿ 15 ರಂದು ಮಧುರೈನ ಅವನಿಯಪುರಂನಲ್ಲಿ ಆರಂಭಗೊಂಡು ರಾಜ್ಯಾದ್ಯಂತ ನಡೆಯಿತು. ಜನವರಿ 16 ರಂದು ಪಾಲಮೇಡುವಿನಲ್ಲಿ ತಮಿಳುನಾಡು ಸಚಿವ ಪಿ ಮೂರ್ತಿ ಅವರು ಎರಡನೇ ದಿನದ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ 850 ಕ್ಕೂ ಹೆಚ್ಚು ಹೋರಿಗಳನ್ನು ಬಿಡಲಾಯಿತು ಮತ್ತು 345 ಗೂಳಿ ಪಳಗಿಸುವವರು ಭಾಗವಹಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ