ಕೋಲ್ಕತ್ತಾ ಆಸ್ಪತ್ರೆ ಮೇಲೆ ಗುಂಪು ದಾಳಿ ಬಳಿಕ ವೈದ್ಯರ ಮುಷ್ಕರ ಪುನರಾರಂಭ; ಪ್ರತಿಭಟನೆಗೆ ಬಿಜೆಪಿ ಕರೆ
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, 2000-2500 ಗೂಂಡಾಗಳು ತಡರಾತ್ರಿ ವೈದ್ಯಕೀಯ ಕಾಲೇಜಿಗೆ ನುಗ್ಗಿದರು, ವೈದ್ಯರಿಗೆ ಥಳಿಸಲಾಯಿತು ಮತ್ತು ಬೆದರಿಕೆ ಹಾಕಿದರು, ಪೊಲೀಸರು ಮೌನವಾಗಿದ್ದರು. ರಾಜ್ಯ ಸರ್ಕಾರವು ತನ್ನ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ಅವರಿಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಕೋಲ್ಕತ್ತಾ ಆಗಸ್ಟ್ 15: ಆಗಸ್ಟ್ 14 ರಂದು ಮಧ್ಯರಾತ್ರಿ ಆರ್ ಜಿ ಕರ್ ಮೆಡಿಕಲ್ ಕಾಲೇಜ್ (RG Kar Medical College)ಮೇಲೆ ಗುಂಪೊಂದು ದಾಳಿ ಮಾಡಿ ಧ್ವಂಸಗೊಳಿಸಿದ ನಂತರ ರಾಜ್ಯ ಪೊಲೀಸರು ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ (Sukanta Majumdar) ಸಿಡಿದೆದ್ದಿದ್ದಾರೆ. ಸುಮಾರು 2000-2500 ಜನರ ಗುಂಪೊಂದು ಆವರಣಕ್ಕೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿತು ಎಂದು ಮಜುಂದಾರ್ ಹೇಳಿದ್ದಾರೆ. ಏತನ್ಮಧ್ಯೆ, ಆ ಗುಂಪು ಕಾಲೇಜಿನ ಸೆಮಿನಾರ್ ಹಾಲ್‌ನಿಂದ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ದಾದಿಯರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, 2000-2500 ಗೂಂಡಾಗಳು ತಡರಾತ್ರಿ ವೈದ್ಯಕೀಯ ಕಾಲೇಜಿಗೆ ನುಗ್ಗಿದರು, ವೈದ್ಯರಿಗೆ ಥಳಿಸಲಾಯಿತು ಮತ್ತು ಬೆದರಿಕೆ ಹಾಕಿದರು, ಪೊಲೀಸರು ಮೌನವಾಗಿದ್ದರು. ರಾಜ್ಯ ಸರ್ಕಾರವು ತನ್ನ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ಅವರಿಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ. ಸಾಕ್ಷ್ಯ ನಾಶಪಡಿಸುವ ಯತ್ನ ನಡೆದಿದೆ. ನಾಳೆ ಆರ್.ಜಿ.ಕರ್ ಮೆಡಿಕಲ್ ಕಾಲೇಜಿಗೆ ತಲುಪಿ ಪ್ರತಿಭಟನೆ ನಡೆಸುತ್ತೇನೆ’’ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಹೇಯ ಘಟನೆ ನಡೆದ ಕಾಲೇಜಿನ ಭಾಗವನ್ನು ಜನಸಮೂಹ ಧ್ವಂಸಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಕೋಲ್ಕತ್ತಾ ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದು, ಜನ ದಾಳಿಯ ಸಮಯದಲ್ಲಿ ಅಪರಾಧದ ಸ್ಥಳಕ್ಕೆ ಹಾನಿಯಾಗಿಲ್ಲ ಎಂದಿದ್ದಾರೆ.
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯ ಹೊರಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಗುಂಪೊಂದು ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿ ಆವರಣಕ್ಕೆ ಪ್ರವೇಶಿಸಿತು ಎಂದು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಪಿಟಿಐಗೆ ತಿಳಿಸಿದರು.
ಮಧ್ಯರಾತ್ರಿ ದಾಳಿಯ ನಂತರ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಇಂಡಿಯಾ (ಫೋರ್ಡಾ) ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಮುಷ್ಕರವನ್ನು ಪುನರಾರಂಭಿಸುವುದಾಗಿ ಘೋಷಿಸಿತು. ಅವರ ಬೇಡಿಕೆಗಳನ್ನು ಪರಿಗಣಿಸಿ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಭರವಸೆ ನೀಡಿದ ನಂತರ ಸಂಘಟನೆಯು ವೈದ್ಯರ ಮುಷ್ಕರವನ್ನು ಹಿಂದೆ ತೆಗೆದುಕೊಂಡಿತು.
ಇದಕ್ಕೂ ಮೊದಲು, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ, “ಇಂದು ರಾತ್ರಿ ಆರ್‌ಜಿ ಕರ್‌ನಲ್ಲಿನ ಗೂಂಡಾಗಿರಿ ಮತ್ತು ವಿಧ್ವಂಸಕತೆ ಎಲ್ಲಾ ಸ್ವೀಕಾರಾರ್ಹ ಮಿತಿಗಳನ್ನು ಮೀರಿದೆ” ಎಂದು ಹೇಳಿದರು. ಮುಂದಿನ 24 ಗಂಟೆಗಳಲ್ಲಿ ವಿಧ್ವಂಸಕರನ್ನು ಬಂಧಿಸುವಂತೆ ಟಿಎಂಸಿ ನಾಯಕ ಕೋಲ್ಕತ್ತಾ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಸರ್ಕಾರವೇ ಹೊಣೆ: ಕೋಲ್ಕತ್ತಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ರಾಜ್ಯಪಾಲರ ಪ್ರತಿಕ್ರಿಯೆ
ಆಗಸ್ಟ್ 9 ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯರೊಬ್ಬರು ಶವವಾಗಿ ಪತ್ತೆಯಾಗಿದ್ದರು. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಈ ಘಟನೆಯು ವೈದ್ಯರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ