Dimple Yadav: ಡಿಂಪಲ್ ಯಾದವ್ಗೆ ಗೆಲುವು; ಮೈನ್‌ಪುರಿ ಉಪಚುನಾವಣೆಯಲ್ಲಿ ಯಾದವ್ ಕುಟುಂಬ ಮತ್ತೆ ಮೇಲುಗೈ
Mainpuri Bypoll Result: ಮತಎಣಿಕೆಯಲ್ಲಿ ಆರಂಭದಿಂದಲೂ ಡಿಂಪಲ್ ಯಾದವ್ ನಿಚ್ಚಳ ಮೇಲುಗೈ ಸಾಧಿಸಿದರು. ಒಂದು ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವಣ ಮುನ್ನಡೆಯ ಅಂತರ ಒಂದು ಲಕ್ಷ ಮತಗಳಿಗೂ ಹೆಚ್ಚು ಇತ್ತು
ಲಖನೌ: ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Mainpuri Bypoll) ಯಾದವ್ ಕುಟುಂಬ ಮತ್ತೆ ಮೇಲುಗೈ ಸಾಧಿಸಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಭದ್ರಕೋಟೆಯಾಗಿರುವ ಈ ಕ್ಷೇತ್ರವು ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ (Mulaym Singh Yadav) ನಿಧನದಿಂದ ತೆರವಾಗಿತ್ತು. ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ (Dimpal Yadav) ಅವರನ್ನು ಸಮಾಜವಾದಿ ಪಕ್ಷವು ಕಣಕ್ಕಿಳಿಸಿತ್ತು. ಕ್ಷೇತ್ರದಲ್ಲಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯ ಮತ್ತು ಡಿಂಪಲ್ ಯಾದವ್ ನಡುವೆ ಜಿದ್ದಾಜಿದ್ದಿಯ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಮತಎಣಿಕೆಯಲ್ಲಿ ಆರಂಭದಿಂದಲೂ ಡಿಂಪಲ್ ಯಾದವ್ ನಿಚ್ಚಳ ಮೇಲುಗೈ ಸಾಧಿಸಿದರು. ಒಂದು ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ನಡುವಣ ಮುನ್ನಡೆಯ ಅಂತರ ಒಂದು ಲಕ್ಷ ಮತಗಳಿಗೂ ಹೆಚ್ಚು ಇತ್ತು. ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಳಿಸಿರಲಿಲ್ಲ.
ಹಲವು ವರ್ಷಗಳಿಂದ ಪಕ್ಷದ ಭದ್ರಕೋಟೆಯಾಗಿರುವ ಮೈನ್ಪುರಿಯಲ್ಲಿ ಗೆಲುವು ಸಾಧಿಸುವುದನ್ನು ಎಸ್‌ಪಿ ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿತ್ತು. ಇಲ್ಲಿ ಗೆಲುವು ಸಾಧಿಸಿದರೆ ಎಸ್‌ಪಿ ಪಕ್ಷದ ಆತ್ಮವಿಶ್ವಾಸಕ್ಕೆ ಹೊಡೆತ ಬೀಳುತ್ತದೆ ಎಂಬುದನ್ನು ಅರಿತಿದ್ದ ಬಿಜೆಪಿ ಜಿದ್ದಿನ ಪ್ರಚಾರದ ಮೂಲಕ ಗೆಲುವಿಗಾಗಿ ಪ್ರಯತ್ನ ನಡೆಸಿತು.
ಈ ಕ್ಷೇತ್ರದಿಂದ ಎಸ್‌ಪಿ ನಾಯಕರು ಯಾರನ್ನು ಕಣಕ್ಕೆ ಇಳಿಸಬಹುದು ಎಂಬ ಬಗ್ಗೆ ಕೆಲ ಸಮಯ ಚರ್ಚೆ ನಡೆದಿತ್ತು. ಈ ವೇಳೆ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ, ಮೈನ್‌ಪುರಿ ಕ್ಷೇತ್ರದ ಮಾಜಿ ಸಂಸದ ತೇಜ ಪ್ರತಾಪ್ ಯಾದವ್ ಅವರಿಗೆ ಎಸ್‌ಪಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವಂತೆ ಎಸ್‌ಪಿ ಪಕ್ಷವು ಮುಲಾಯಂ ಕುಟುಂಬದ ಸೊಸೆಗೆ ಟಿಕೆಟ್ ನೀಡಿತು. ಮಾವನ ಪರ ವ್ಯಕ್ತವಾದ ಸಹಾನುಭೂತಿ, ಪತಿ ಅಖಿಲೇಶ್ ಯಾದವ್ ಹೆಣೆದ ಕಾರ್ಯತಂತ್ರದ ಫಲವಾಗಿ ಡಿಂಪಲ್ ಯಾದವ್ ಇದೀಗ ಮುನ್ನಡೆ ಸಾಧಿಸಿದ್ದು, ಗೆಲುವಿನ ಸನಿಹಕ್ಕೆ ಬಂದಿದ್ದಾರೆ.
ಇದನ್ನೂ ಓದಿ: UP Assembly Poll: ಮುಲಾಯಂ ಸಿಂಗ್ ಯಾದವ್, ಜಯಾ ಬಚ್ಚನ್ ಸಮಾಜವಾದಿ ಪಕ್ಷದ ಸ್ಟಾರ್ ಪ್ರಚಾರಕರು; ಇನ್ನೂ ಯಾರೆಲ್ಲ ಇದ್ದಾರೆ?
ಡಿಂಪಲ್ ಯಾದವ್: ಯಾದವ್ ಕುಟುಂಬದ ಸೊಸೆ, ಸೇನಾಧಿಕಾರಿಯ ಪುತ್ರಿ
ಕನೌಜ್ ಕ್ಷೇತ್ರದ ಅಭ್ಯರ್ಥಿಯಾಗಿ ಡಿಂಪಲ್ ಯಾದವ್ ಈಗಾಗಲೇ ಎರಡು ಬಾರಿ ಜಯಗಳಿಸಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿ 15ನೇ ಜನವರಿ 1978ರಲ್ಲಿ ಜನಿಸಿದರು. ಡಿಂಪಲ್ ಯಾದವ್ ಅವರ ತಂದೆ ರಾಮಚಂದ್ರ ಸಿಂಗ್ ರಾವತ್ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ನಿವೃತ್ತರಾಗಿದ್ದರು. ಲಖನೌ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಪದವೀಧರರಾಗಿದ್ದಾರೆ. ಅಖಿಲೇಶ್ ಯಾದವ್ ಅವರನ್ನು ವಿದ್ಯಾರ್ಥಿಯಾಗಿದ್ದಲೇ ಭೇಟಿಯಾಗಿದ್ದರು, ಪರಸ್ಪರ ಇಷ್ಟಪಟ್ಟಿದ್ದರು. ಆದರೆ ಅಖಿಲೇಶ್ ಕುಟುಂಬ ಈ ಮದುವೆ ವಿರೋಧ ವ್ಯಕ್ತಪಡಿಸಿತ್ತು. ನಂತರ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ 24ನೇ ನವೆಂಬರ್ 1999ರಲ್ಲಿ ಈ ಜೋಡಿಯ ಮದುವೆ ನಡೆಯಿತು.
ಡಿಂಪಲ್ ಯಾದವ್ಗೆ ಗೆಲುವು
ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಅವರು ಗುರುವಾರ ಮೈನ್‌ಪುರಿ ಸಂಸದೀಯ ಉಪಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು 2,88,461 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.ಎಸ್‌ಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟ ಈ ಸ್ಥಾನವನ್ನು ಪಕ್ಷದ ಕುಲಪತಿ ಮುಲಾಯಂ ಸಿಂಗ್ ಯಾದವ್ ಹೊಂದಿದ್ದರು ಮತ್ತು ಅಕ್ಟೋಬರ್ 10 ರಂದು ಅವರ ನಿಧನದ ನಂತರ ಅದು ತೆರವಾಯಿತು. ಪತಿ ಮತ್ತು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಡಿಂಪಲ್ ಇಲ್ಲಿ ಚುನಾವಣಾ ಅಧಿಕಾರಿಯಿಂದ ಪ್ರಮಾಣಪತ್ರವನ್ನು ಪಡೆದರು. 2019 ರ ಲೋಕಸಭಾ ಚುನಾವಣೆಯಲ್ಲಿ, ಮುಲಾಯಂ ಸಿಂಗ್ ಯಾದವ್ ಅವರು ಮೈನ್‌ಪುರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೇಮ್ ಸಿಂಗ್ ಶಾಕ್ಯಾ ಅವರನ್ನು 94,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಎಸ್‌ಪಿ 2019ರ ಚುನಾವಣೆಯಲ್ಲಿ ಬಿಎಸ್‌ಪಿಯೊಂದಿಗೆ ಸ್ಪರ್ಧಿಸಿತ್ತು. ಡಿಂಪಲ್ ಯಾದವ್ ಅವರ ಮಾವಗಿಂತ ಹೆಚ್ಚು ಅಂತರವು ಮೈನ್‌ಪುರಿ ಜನರ ‘ನೇತಾಜಿ’ (ಮುಲಾಯಂ) ಮತ್ತು ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳ ಮೇಲಿನ ನಂಬಿಕೆಯನ್ನು ತೋರಿಸುತ್ತದೆ. ಬಿಜೆಪಿ ಅಭ್ಯರ್ಥಿ ಶಾಕ್ಯ ಅವರು ತಮ್ಮ ದೌಲ್‌ಪುರ ಬೂತ್‌ನಲ್ಲಿ 187 ಮತಗಳಿಂದ ಸೋತಿದ್ದಾರೆ. ಡಿಂಪಲ್ ಯಾದವ್ 6,18,120 (ಶೇ. 64.08) ಮತಗಳನ್ನು ಪಡೆದರೆ, ಶಾಕ್ಯಾ 3,29,659 (ಶೇ. 34.18) ಮತಗಳನ್ನು ಪಡೆದರು.
ಇದನ್ನೂ ಓದಿ: ಬಿಜೆಪಿ ಸೇರಿದ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್; ಯಾರೀಕೆ? ಇಲ್ಲಿದೆ ಮಾಹಿತಿ
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Thu, 8 December 22