Mamata Banerjee: ರಾಷ್ಟ್ರಪತಿ ಕುರಿತು ಟಿಎಂಸಿ ಸಚಿವರ ಹೇಳಿಕೆಗೆ ಮಮತಾ ಬ್ಯಾನರ್ಜಿ ಕ್ಷಮೆಯಾಚನೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ಪಕ್ಷದ ಸಚಿವರ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಮಾಡುವುದು ತನ್ನ ಪಕ್ಷದ ಸಂಸ್ಕೃತಿಯಲ್ಲ ಎಂದು ಹೇಳಿದ್ದಾರೆ. ಸಚಿವರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ತಮ್ಮ ಪಕ್ಷದ ಸಚಿವರ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಮಾಡುವುದು ತನ್ನ ಪಕ್ಷದ ಸಂಸ್ಕೃತಿಯಲ್ಲ ಎಂದು ಹೇಳಿದ ಅವರು, ಸಚಿವ ಹೇಳಿಕೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅವರ ಪರವಾಗಿ ಪಕ್ಷವೂ ಕ್ಷಮೆಯಾಚಿಸುತ್ತದೆ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಸಚಿವ ಅಖಿಲ್ ಗಿರಿ ಅವರು ಭಾರತದ ರಾಷ್ಟ್ರಪತಿಗಳ ದ್ರೌಪದಿ ಮುರ್ಮು ಅವರ ಬಗ್ಗೆ ಅವಹೇಳನ ಹೇಳಿಕೆಗಳನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕರು ಇಂದು ಮಧ್ಯಾಹ್ನ ರಾಜಭವನಕ್ಕೆ ಮೆರವಣಿಗೆ ನಡೆಸಿದರು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ಹಾಡುಗಳನ್ನು ಹಾಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಅವಹೇಳನ ಮಾಡಿ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ (Akhil Giri) ಮಾತನಾಡಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಅಖಿಲ್ ಗಿರಿ ಅವರು ರಾಷ್ಟ್ರಪತಿಗಳನ್ನು ಅವಹೇಳನ ಮಾಡಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಪ್ರತಿಭಟನೆ ವ್ಯಕ್ತಪಡಿಸಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸೇರಿದಂತೆ ಅಲ್ಲಿನ ತೃಣಮೂಲ ಕಾಂಗ್ರೆಸ್ (Trinamool Congress) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನು ಓದಿ: ಮುರ್ಮು ಬಗ್ಗೆ ಮಮತಾ ಸಂಪುಟ ಸಚಿವ ಅಖಿಲ್ ಗಿರಿ ಅವಹೇಳನ; ವ್ಯಾಪಕ ವಿರೋಧ
ಸಚಿವ ಗಿರಿ ಗುರುವಾರ ನಂದಿಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ‘ಅವರು (ಸುವೇಂದು ಅಧಿಕಾರಿ) ನನ್ನನ್ನು ಚೆನ್ನಾಗಿ ಕಾಣುತ್ತಿಲ್ಲವೆಂದು ಟೀಕಿಸಿದ್ದಾರೆ. ಅವರೆಷ್ಟು ಚೆಂದ ಇದ್ದಾರೆ? ಜನ ಹೇಗೆ ಕಾಣಿಸುತ್ತಾರೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ಅಳೆಯಬಾರದು. ನಾವು ರಾಷ್ಟ್ರಪತಿಗಳ ಹುದ್ದೆಯನ್ನು ಗೌರವಿಸುತ್ತೇವೆ. ಆದರೆ ಅವರು ಹೇಗೆ ಕಾಣುತ್ತಾರೆ?’ ಎಂದು ಗಹಗಹಿಸಿ ನಗುತ್ತಾ ಹೇಳುತ್ತಿರುವುದು ವಿಡಿಯೊದಲ್ಲಿದೆ. ಸಚಿವರು ಈ ಮಾತು ಹೇಳುತ್ತಿದ್ದಂತೆಯೇ ಅಲ್ಲಿ ಸೇರಿದ್ದವರೆಲ್ಲ ಹಾಸ್ಯ ಮಾಡಿ ನಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಅಖಿಲ್ ಗಿರಿ ಹೇಳಿಕೆಯನ್ನು ಬಿಜೆಪಿ ಖಂಡಿಸಿತ್ತು. ಮಮತಾ ಬ್ಯಾನರ್ಜಿ ಅವರ ಸಂಪುಟದ ಸಚಿವ ರಾಷ್ಟ್ರಪತಿಯವರನ್ನು ಅವಮಾನಿಸಿದ್ದಾರೆ. ಮಮತಾ ಯಾವತ್ತೂ ಬುಡಕಟ್ಟು ವಿರೋಧಿ, ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಬೆಂಬಲಿಸಿರಲಿಲ್ಲ ಮತ್ತು ಈಗ ಈ ರೀತಿ ಅವಮಾನಿಸುತ್ತಿದ್ದಾರೆ. ಗಿರಿ ಅವರದು ನಾಚಿಕೆಗೇಡಿನ ಭಾಷಣ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ಇದೀಗ ಎಲ್ಲ ಕಡೆಯಿಂದ ವಿರೋಧಗಳು ಹೆಚ್ಚಾಗುತ್ತಿದಂತೆ ಮಮತಾ ಬ್ಯಾನರ್ಜಿ ಅವರು ಕ್ಷಮೆಯನ್ನು ಕೇಳಿದ್ದಾರೆ.
Published On - 5:35 pm, Mon, 14 November 22