Kerala Monkeypox: ಕೇರಳದಲ್ಲಿ ಭಾರತದಲ್ಲೇ ಮೊದಲ ಮಂಕಿಪಾಕ್ಸ್ ಕೇಸ್​ ಪತ್ತೆ; ಕರ್ನಾಟಕದಲ್ಲೂ ಹೆಚ್ಚಿದ ಆತಂಕ

| Updated By: ಸುಷ್ಮಾ ಚಕ್ರೆ

Updated on: Jul 14, 2022 | 10:04 AM

ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲೂ ಆತಂಕ ಹೆಚ್ಚಿಸಿದೆ.

Kerala Monkeypox: ಕೇರಳದಲ್ಲಿ ಭಾರತದಲ್ಲೇ ಮೊದಲ ಮಂಕಿಪಾಕ್ಸ್ ಕೇಸ್​ ಪತ್ತೆ; ಕರ್ನಾಟಕದಲ್ಲೂ ಹೆಚ್ಚಿದ ಆತಂಕ
ಮಂಕಿಪಾಕ್ಸ್​
Follow us on

ಕೊಚ್ಚಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಮಂಕಿಪಾಕ್ಸ್​ (Monkeypox) ಕೇಸ್ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಈಗಾಗಲೇ ಹಲವು ದೇಶಗಳಲ್ಲಿ ಮಾರಣಾಂತಿಕ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್​ ಇದೀಗ ನೆರೆಯ ರಾಜ್ಯವಾದ ಕೇರಳಕ್ಕೂ ಲಗ್ಗೆಯಿಟ್ಟಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಿಂದ 3 ದಿನಗಳ ಹಿಂದೆ ಕೇರಳಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಈ ರೋಗದ ಹರಡುವಿಕೆ ವೇಗವಾಗಿದ್ದರೂ ಅದರಿಂದ ಜೀವ ಕಳೆದುಕೊಳ್ಳುವ ಆತಂಕ ಕಡಿಮೆ ಎನ್ನಲಾಗಿದೆ.

ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲೂ ಆತಂಕ ಹೆಚ್ಚಿಸಿದೆ. ಆದರೆ, ಈ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಕೇರಳದ ಆರೋಗ್ಯ ಇಲಾಖೆ ಯುಎಇಯಿಂದ ಬಂದಿದ್ದ ವ್ಯಕ್ತಿಯ ರಕ್ತದ ಸ್ಯಾಂಪಲ್ ಅನ್ನು ಪುಣೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದೆ. ಇಂದು ಸಂಜೆಯೊಳಗೆ ಫಲಿತಾಂಶ ಲಭ್ಯವಾಗಲಿದ್ದು, ಅದು ಮಂಕಿಪಾಕ್ಸ್​ ಸೋಂಕು ಹೌದೋ, ಅಲ್ಲವೋ ಎಂಬುದು ಖಚಿತವಾಗಲಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಇದನ್ನೂ ಓದಿ
ಮಂಕಿಪಾಕ್ಸ್: ಯುರೋಪ್​​​ನಲ್ಲಿ ತುರ್ತು ಕ್ರಮ ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಕರೆ
Monkeypox: ಮಂಕಿಪಾಕ್ಸ್​ ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ
Monkeypox ಮಂಕಿಪಾಕ್ಸ್‌ ಎದುರಿಸಲು ಭಾರತ ಸಿದ್ಧ ಎಂದ ಐಸಿಎಂಆರ್; ಸಾಮೂಹಿಕ ಲಸಿಕೆ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
Monkeypox alert: ಆಫ್ರಿಕಾ, ಯುರೋಪ್ ಮತ್ತು ಅಮೇರಿಕನ್ ದೇಶಗಳಗಳಲ್ಲಿ ಮಂಕಿಪಾಕ್ಸ್ ಹೊಸ ಸಾಂಕ್ರಾಮಿಕ ರೋಗ ಪತ್ತೆ

ಇದನ್ನೂ ಓದಿ: Monkeypox: ಮಂಕಿಪಾಕ್ಸ್​ ರೋಗದ ಲಕ್ಷಣಗಳೇನು? ಯಾವಾಗ ಚಿಕಿತ್ಸೆ ಪಡೆಯಬೇಕು?

ಇದೀಗ ಕ್ವಾರಂಟೈನ್​ನಲ್ಲಿ ಇರಿಸಲಾಗಿರುವ ವ್ಯಕ್ತಿ ಮೂರು ದಿನಗಳ ಹಿಂದೆ ಯುಎಇಯಿಂದ ಕೇರಳ ತಲುಪಿದ್ದರು. ಅವರಿಗೆ ಮಂಕಿಪಾಕ್ಸ್​ ರೋಗದ ಲಕ್ಷಣಗಳು ಕಂಡುಬಂದ ನಂತರ ಅವರ ರಕ್ತದ ಮಾದರಿಗಳನ್ನು ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಇಂದು ಸಂಜೆ ವೇಳೆಗೆ ಅಂತಿಮ ಫಲಿತಾಂಶ ಕೈಸೇರಲಿದೆ. ಯುಎಇಯಿಂದ ಬಂದಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಪರೀಕ್ಷೆ ಮಾಡಿದಾಗ ಮಂಕಿಪಾಕ್ಸ್​ ಪಾಸಿಟಿವ್ ಬಂದಿದೆ. ಹೀಗಾಗಿ, ಆತನನ್ನು ಕೂಡ ಪ್ರತ್ಯೇಕವಾಗಿ ನಿಗಾದಲ್ಲಿ ಇರಿಸಲಾಗಿದೆ.

ಇಲ್ಲಿಯವರೆಗೆ, ಭಾರತದಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ವರದಿಯಾಗಿಲ್ಲ. ಜುಲೈ 11ರ ಹೊತ್ತಿಗೆ ಅಮೆರಿಕಾದಲ್ಲಿ ಮಂಕಿಪಾಕ್ಸ್​ನ ಸುಮಾರು 800 ಪ್ರಕರಣಗಳು ದಾಖಲಾಗಿತ್ತು. ಆದರೆ, ಜಾಗತಿಕವಾಗಿ 57 ದೇಶಗಳಲ್ಲಿ 8,200ಕ್ಕೂ ಹೆಚ್ಚು ಮಂಕಿಪಾಕ್ಸ್​ ಪ್ರಕರಣಗಳು ಪತ್ತೆಯಾಗಿದೆ.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?:

– ಇದು ಸಿಡುಬು ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು.

– ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ.

– ಇದು ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ಮೌಖಿಕ ದ್ರವಗಳ ಮೂಲಕವೂ ಹರಡಬಹುದು (ಚುಂಬನ; ಮೌಖಿಕ, ಗುದ, ಅಥವಾ ಯೋನಿ ಸಂಭೋಗ).

– ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳು ಅಥವಾ ಮೇಲ್ಮೈಗಳೊಂದಿಗಿನ ಸಂಪರ್ಕವು (ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳಂತಹವು) ಸಹ ಸೋಂಕು ಹರಡಲು ಕಾರಣವಾಗಬಹುದು.

ಮಂಕಿಪಾಕ್ಸ್‌ನ ಲಕ್ಷಣಗಳು?:

ಮಾನವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನ ಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಮಂಕಿಪಾಕ್ಸ್​ ಜ್ವರ, ತಲೆನೋವು, ಸ್ನಾಯು ನೋವು ಮತ್ತು ಬಳಲಿಕೆಯಿಂದ ಪ್ರಾರಂಭವಾಗುತ್ತದೆ. ಸಿಡುಬು ಮತ್ತು ಮಂಕಿಪಾಕ್ಸ್ ರೋಗಲಕ್ಷಣಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಕಾರಣವಾಗುತ್ತದೆ (ಲಿಂಫಡೆನೋಪತಿ), ಆದರೆ ಸಿಡುಬು ಇದನ್ನು ಮಾಡುವುದಿಲ್ಲ. ಮಂಕಿಪಾಕ್ಸ್‌ಗೆ ಅವಧಿಯು (ಸೋಂಕಿನಿಂದ ರೋಗಲಕ್ಷಣಗಳವರೆಗೆ) ಸಾಮಾನ್ಯವಾಗಿ 7-14 ದಿನಗಳು ಅಥವಾ 5-21 ದಿನಗಳವರೆಗೆ ಇರುತ್ತದೆ.

Published On - 9:52 am, Thu, 14 July 22