‘ಧುರಂಧರ್ ಅಲ್ಲದಿದ್ದರೂ ಧೂಳೆಬ್ಬಿಸಿದ್ದೀರಿ’; ಎಸ್‌ಆರ್‌ಸಿಸಿ ಶತಮಾನೋತ್ಸವದಲ್ಲಿ ಜೆನ್​-ಜಿ ಪದ ಬಳಸಿ ಹೊಗಳಿದ ಪ್ರಧಾನಿ ಮೋದಿ

ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಭಾಷಣದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಧುರಂಧರ್' ಪದವನ್ನು ಪ್ರಸ್ತಾಪಿಸುತ್ತಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇದೇ ವೇಳೆ ಅವರು ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ದಿವಂಗತ ಕೇಂದ್ರ ಸಚಿವ ಅರುಣ್ ಜೇಟ್ಲಿ, ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಮುಂತಾದ ಸಾಧಕರನ್ನು ನೆನಪಿಸಿಕೊಂಡರು. ಭಾಷಣದಲ್ಲಿ ಜೆನ್​-ಜಿ ಪದಗಳನ್ನು ಬಳಸುತ್ತಾ ನಗೆ ಚಟಾಕಿ ಹಾರಿಸಿದ ಪ್ರಧಾನಿ ಮೋದಿಯವರಿಗೆ ಭಾರೀ ಕರತಾಡನ ದೊರಕಿತು.

ಧುರಂಧರ್ ಅಲ್ಲದಿದ್ದರೂ ಧೂಳೆಬ್ಬಿಸಿದ್ದೀರಿ; ಎಸ್‌ಆರ್‌ಸಿಸಿ ಶತಮಾನೋತ್ಸವದಲ್ಲಿ ಜೆನ್​-ಜಿ ಪದ ಬಳಸಿ ಹೊಗಳಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ
Image Credit source: PTI

Updated on: Sep 05, 2026 | 8:59 PM

ನವದೆಹಲಿ, ಸೆಪ್ಟೆಂಬರ್ 5: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (ಎಸ್​ಆರ್​ಸಿಸಿ) ಸಂಸ್ಥೆಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಎಸ್‌ಆರ್‌ಸಿಸಿಯ ಭಾಗವಾಗಿದ್ದ ಹಲವು ತಲೆಮಾರುಗಳ ವಿದ್ಯಾರ್ಥಿಗಳು ಇಂದು ಇಲ್ಲಿ ಒಂದಾಗಿದ್ದಾರೆ. ಎಸ್‌ಆರ್‌ಸಿಸಿಯ ಶತಮಾನೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು” ಎಂದಿದ್ದಾರೆ. ಇದೇ ವೇಳೆ ಎಸ್‌ಆರ್‌ಸಿಸಿಯ ಹಳೆಯ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, “ನೀವು ಧುರಂಧರ್ ಅಲ್ಲದಿರಬಹುದು, ಆದರೆ ಧೂಮ್ ಎಬ್ಬಿಸಿದ್ದೀರಿ” ಎಂದು ಹೆಮ್ಮೆಯಿಂದ ಹೇಳಿದರು.

“ಯಾವುದಾದರೂ ವ್ಯಕ್ತಿ 100 ವರ್ಷ ಬದುಕಿದರೆ ಅವರನ್ನು ಅನುಭವದ ಸಾಗರ ಎಂದು ಪರಿಗಣಿಸಲಾಗುತ್ತದೆ. ಅದೇ ಒಂದು ಸಂಸ್ಥೆಯು 100 ವರ್ಷಗಳನ್ನು ಪೂರೈಸಿದಾಗ, ಅದು ಸಾಧನೆಗಳು ಮತ್ತು ಪ್ರೇರಣೆಯ ಸಾಗರವಾಗುತ್ತದೆ. ತನ್ನ 100 ವರ್ಷಗಳ ಪಯಣದಲ್ಲಿ ಎಸ್‌ಆರ್‌ಸಿಸಿ ಹಲವು ತಲೆಮಾರುಗಳನ್ನು ರೂಪಿಸಿದೆ ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ನೀಡಿದೆ. ಇಲ್ಲಿಗೆ ಬಂದವರು ವ್ಯಾಸಂಗ ಮಾಡಿ, ಇಲ್ಲಿಂದ ನಿರ್ಗಮಿಸಿ ಸುಸಂಸ್ಕೃತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ” ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಎಸ್‌ಆರ್‌ಸಿಸಿಯ ಹಳೆಯ ವಿದ್ಯಾರ್ಥಿಗಳು ಅತ್ಯಂತ ವಿಶೇಷವಾದವರು ಎಂದ ಪ್ರಧಾನಿ ಮೋದಿ, “ನಿಮ್ಮ ಭಾಷೆಯಲ್ಲೇ ಹೇಳಬೇಕೆಂದರೆ, ಇಲ್ಲಿಯ ಹಳೆಯ ವಿದ್ಯಾರ್ಥಿಗಳು ಅಸಲಿ ‘OG’ಗಳು. ಅವರು ಜಗತ್ತಿನಾದ್ಯಂತ ಎಸ್‌ಆರ್‌ಸಿಸಿಯ ಹೆಸರನ್ನು ಕೊಂಡೊಯ್ದಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಮ್ಮ ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿಯೇ ವ್ಯಾಸಂಗ ಮಾಡಿದ್ದರು. ಅವರೊಂದಿಗಿನ ಭೇಟಿಯ ವೇಳೆ ಅವರು ತಮ್ಮ ಎಸ್‌ಆರ್‌ಸಿಸಿ ದಿನಗಳ ಘಟನೆಯೊಂದನ್ನು ಹಂಚಿಕೊಳ್ಳುತ್ತಿದ್ದರು. ಕೆಲವು ಬಾರಿಯಂತೂ ಅವರು ಒಂದೇ ಘಟನೆಯನ್ನು ಮರಳಿ ಮರಳಿ ಹೇಳುತ್ತಿದ್ದಾಗ ನನಗೆ ಸುಸ್ತಾಗುತ್ತಿತ್ತು! ಇದೀಗ ನನ್ನ ತಂಡದ ಭಾಗವಾಗಿರುವ ಸಂಜೀವ್ ಸನ್ಯಾಲ್ ಕೂಡ ಎಸ್‌ಆರ್‌ಸಿಸಿಯ ಹಳೆಯ ವಿದ್ಯಾರ್ಥಿ. ನಮ್ಮ ಅನೇಕ ಇತರ ಸಹೋದ್ಯೋಗಿಗಳು ಇಲ್ಲೇ ವ್ಯಾಸಂಗ ಮಾಡಿದ್ದಾರೆ. ಎಸ್‌ಆರ್‌ಸಿಸಿ ಕೇವಲ ಅರ್ಥಶಾಸ್ತ್ರದ ಜಗತ್ತಿನ ಜನರನ್ನು ಮಾತ್ರ ನೀಡಿದೆ ಎಂದಲ್ಲ. ಕಲಾವಿದರು, ರಾಜಕಾರಣಿಗಳು, ವಕೀಲರು ಮತ್ತು ನ್ಯಾಯಾಧೀಶರವರೆಗೆ ಪ್ರತಿಯೊಂದು ರಂಗದ ಸಾಧಕರು ಇಲ್ಲಿಂದ ಹೊರಹೊಮ್ಮಿದ್ದಾರೆ” ಎಂದಿದ್ದಾರೆ.


ಇದನ್ನೂ ಓದಿ: ದೆಹಲಿ ಶ್ರೀರಾಮ್ ಕಾಲೇಜಿನ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ; ವಿಶೇಷ ನಾಣ್ಯ ಬಿಡುಗಡೆ

ಭಯೋತ್ಪಾದನೆ ಹರಡುವವರಿಗೆ ಹಿನ್ನಡೆ:

“ಇಂದು ಭಯೋತ್ಪಾದನೆ ಹರಡುವವರು ಹಿನ್ನಡೆ ಅನುಭವಿಸುತ್ತಿದ್ದಾರೆ. ಪಾಕಿಸ್ತಾನವೇನಾದರೂ ಆ ಸಾಹಸಕ್ಕೆ ಕೈಹಾಕಿದರೆ ಭಾರತದ ಸಶಸ್ತ್ರ ಪಡೆಗಳು ಅವರ ಜಾಗಕ್ಕೆ ನುಗ್ಗಿ ದಾಳಿ ನಡೆಸಲಿವೆ. ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಈಶಾನ್ಯ ರಾಜ್ಯಗಳವರೆಗೆ ಶಾಂತಿ ನೆಲೆಸಿದೆ. ಮಾವೋವಾದಿ ಭಯೋತ್ಪಾದನೆ ಮತ್ತು ನಕ್ಸಲಿಸಂನ ಬೆನ್ನೆಲುಬು ಮುರಿಯಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.


ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ; ರೈಲಿನೊಳಗೆ ಮಕ್ಕಳ ಜೊತೆ ಸಂವಾದ

ದೇಶದ ಆರ್ಥಿಕತೆಗೆ ಭದ್ರ ಬುನಾದಿ:

ವಿಕಸಿತ ಭಾರತ ನಿರ್ಮಾಣದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರದ ಪಾತ್ರ ದೊಡ್ಡದಾಗಿದೆ. ಎಸ್‌ಆರ್‌ಸಿಸಿ ನೀಡಿದ ಜಾಗತಿಕ ಮಟ್ಟದ ನಾಯಕರು ಹಾಗೂ ಉದ್ಯಮಿಗಳು ಭಾರತೀಯ ಆರ್ಥಿಕ ವ್ಯವಸ್ಥೆಗೆ ಅತ್ಯಂತ ಭವಿಷ್ಯದ ಬುನಾದಿ ಹಾಕಿದ್ದಾರೆ ಎಂದು ಮೋದಿ ಪ್ರಶಂಸಿಸಿದರು. ಕೇವಲ ಪಠ್ಯ ಆಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಈ ಸಂಸ್ಥೆಯು ಶೈಕ್ಷಣಿಕ ಶ್ರೇಷ್ಠತೆ, ನಾಯಕತ್ವ ಗುಣಗಳು ಹಾಗೂ ಸಮಾಜಮುಖಿ ವ್ಯಕ್ತಿತ್ವಗಳನ್ನು ರೂಪಿಸುವ ಪ್ರೇರಣಾ ಶಕ್ತಿಯಾಗಿ ಬೆಳೆದಿದೆ ಎಂದು ಮೋದಿ ಆಶಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Sat, 5 September 26

Loading...
Unable to load recommendations.
Follow Us