‘ಅಪ್ಪನ ಸಾವಿನ ಬಳಿಕ ಅಮ್ಮ ಪಟ್ಟ ಕಷ್ಟ ನಮಗಷ್ಟೇ ಗೊತ್ತು’; ಸೋನಿಯಾ ಗಾಂಧಿ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಬರಹ

ರಾಜೀವ್ ಗಾಂಧಿಯವರ ಜನ್ಮದಿನವಾದ ಇಂದು ತಮ್ಮ ತಾಯಿ ಸೋನಿಯಾ ಗಾಂಧಿಯವರ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ತಂದೆಯಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಮರಣದ ನಂತರ ಸೋನಿಯಾ ಗಾಂಧಿ ಜೀವನದ ಪ್ರತಿಯೊಂದು ಸವಾಲನ್ನು ಯಾವ ರೀತಿ ಧೈರ್ಯ ಮತ್ತು ಘನತೆಯಿಂದ ಎದುರಿಸಿದ್ದಾರೆ ಎಂಬುದನ್ನು ಮೆಲುಕು ಹಾಕಿದ್ದಾರೆ. ರಾಜೀವ್ ಗಾಂಧಿಯವರ 82ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಇಂದು ರಾಹುಲ್ ಗಾಂಧಿ ಈ ಪೋಸ್ಟ್ ಮಾಡಿದ್ದಾರೆ. ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ತಾಯಿಯ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತಾಗಿಯೂ ಅವರು ಪ್ರಸ್ತಾಪಿಸಿದ್ದಾರೆ.

ಅಪ್ಪನ ಸಾವಿನ ಬಳಿಕ ಅಮ್ಮ ಪಟ್ಟ ಕಷ್ಟ ನಮಗಷ್ಟೇ ಗೊತ್ತು; ಸೋನಿಯಾ ಗಾಂಧಿ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಬರಹ
Sonia Gandhi Rahul Gandhi Rajiv Gandhi
Image Credit source: TV9

Updated on: Aug 20, 2026 | 4:38 PM

ನವದೆಹಲಿ, ಆಗಸ್ಟ್ 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi Birth Anniversary) ಅವರ 82ನೇ ಜಯಂತಿಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ತಮ್ಮ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ತಾಯಿ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಖಾಸಗಿ ಜೀವನದ ಕಥೆಯನ್ನು ಮುಂಬರುವ ಆತ್ಮಚರಿತ್ರೆಯ ಮೂಲಕ ಲಕ್ಷಾಂತರ ಜನರಿಗೆ ತಿಳಿಸಲಿದ್ದಾರೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇಂದು ದೆಹಲಿಯ ವೀರ್ ಭೂಮಿಗೆ ಭೇಟಿ ನೀಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸೋನಿಯಾ ಗಾಂಧಿ ಅವರ ಜೀವನದ ಕಥೆಯನ್ನು ಒಳಗೊಂಡಿರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಎಂಬ ಪುಸ್ತಕವು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಮ್ಮ ತಾಯಿಯ ಧೈರ್ಯ ಮತ್ತು ತಂದೆಯ ಅಗಲಿಕೆಯ ನಂತರ ಅವರು ಎದುರಿಸಿದ ಕಷ್ಟಗಳನ್ನು ಮೆಲುಕು ಹಾಕಿದ್ದಾರೆ.


ರಾಹುಲ್ ಗಾಂಧಿ ಎಮೋಷನಲ್ ಪೋಸ್ಟ್:

ಎಕ್ಸ್​ ಜಾಲತಾಣದಲ್ಲಿ ತಮ್ಮ ತಾಯಿಯನ್ನು ಅತ್ಯಂತ ಪ್ರೀತಿಯಿಂದ “ಮಮ್ಮಾ” ಎಂದು ಉಲ್ಲೇಖಿಸಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸುಮಾರು 35 ವರ್ಷಗಳ ಹಿಂದೆ ತಮ್ಮ ತಂದೆ-ತಾಯಿಯನ್ನು ಕೊನೆಯ ಬಾರಿಗೆ ಒಟ್ಟಿಗೆ ನೋಡಿದ್ದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. “ಮಮ್ಮಾ… ಅಪ್ಪ ನಮ್ಮನ್ನು ಅಗಲಿ ಹೋದ ದಿನದಿಂದಲೂ, ಜೀವನದಲ್ಲಿ ಎದುರಾದ ಪ್ರತಿಯೊಂದು ಸವಾಲು ಮತ್ತು ಕಷ್ಟವನ್ನೂ ನೀವು ಅಚಲ ಧೈರ್ಯ ಹಾಗೂ ಘನತೆಯಿಂದ ಎದುರಿಸುವುದನ್ನು ನಾನು ನೋಡಿದ್ದೇನೆ. ಅಪ್ಪನ ಅಗಲಿಕೆಯ ನಂತರ ನಿಮ್ಮ ಜೀವನ ಎಷ್ಟು ಕಷ್ಟಕರವಾಗಿತ್ತು ಎಂಬುದು ನನಗೆ ಮತ್ತು ಪ್ರಿಯಾಂಕಾಗೆ ಮಾತ್ರ ಗೊತ್ತು” ಎಂದು ರಾಹುಲ್ ಗಾಂಧಿ ಸೋನಿಯಾ ಗಾಂಧಿಯ ಕುರಿತು ಬರೆದಿದ್ದಾರೆ.


ಇದನ್ನೂ ಓದಿ: ‘ಜಂತರ್ ಮಂತರ್‌ನಲ್ಲಿ ಯಾವ ಗುಂಡಿನ ದಾಳಿಯೂ ನಡೆದಿಲ್ಲ’; ರಾಹುಲ್ ಗಾಂಧಿಗೆ ಸಚಿವ ಜೆ.ಪಿ. ನಡ್ಡಾ ತಿರುಗೇಟು

“ನಿಮ್ಮಷ್ಟಕ್ಕೆ ನೀವಿರಲು ಬಯಸುವ ನಿಮ್ಮಂತಹ ವ್ಯಕ್ತಿಗೆ, ನಿಮ್ಮ ಸುಂದರವಾದ ಜೀವನದ ಕಥೆಯನ್ನು ಇಡೀ ಜಗತ್ತಿಗೆ ಹೇಳುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಆದರೆ, ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಜನರು ಈ ನಿಮ್ಮ ಕಥೆಯನ್ನು ಓದಲಿದ್ದಾರೆ ಎಂಬುದಕ್ಕೆ ನನಗೆ ಹೆಮ್ಮೆಯಿದೆ. ಇಂದು ನಿಮ್ಮ ಈ ಪುಸ್ತಕವನ್ನು ನೋಡಿ ಅಪ್ಪ ಮೇಲಿಂದಲೇ ಮುಗುಳ್ನಗುತ್ತಾ, ತಮ್ಮ ಸುಂದರ ಸೋನಿಯಾರನ್ನು ನೋಡಿ ಹೆಮ್ಮೆಪಡುತ್ತಿರಬಹುದು” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಸಂದೇಶ:

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಮ್ಮ ತಾಯಿಯ ಪುಸ್ತಕದ ಕುರಿತು ಬರೆದುಕೊಂಡಿದ್ದು, ತಮ್ಮ ತಾಯಿ ಭಾರತಕ್ಕೆ ಬಂದಾಗ ಅನುಭವಿಸಿದ ಸಾಂಸ್ಕೃತಿಕ ಬದಲಾವಣೆಗಳು, ಗಾಂಧಿ ಕುಟುಂಬದಲ್ಲಿ ಎದುರಿಸಿದ ದುರಂತಗಳು ಹಾಗೂ ಆ ಎಲ್ಲವನ್ನೂ ಮೀರಿ ನಿಂತ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅತ್ಯಂತ ಕಠಿಣ ಸಂದರ್ಭಗಳಲ್ಲೂ ಸೋನಿಯಾ ಗಾಂಧಿ ಕುಟುಂಬವನ್ನು ಮತ್ತು ಭಾರತ ದೇಶದ ಮೇಲಿನ ತಮ್ಮ ಪ್ರೀತಿಯನ್ನು ಕಾಯ್ದುಕೊಂಡ ರೀತಿಯನ್ನು ಅವರು ಸ್ಮರಿಸಿದ್ದಾರೆ.

ಇಂದು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, 54 ವರ್ಷದ ತಮ್ಮ ಹೆತ್ತವರ ಸಂಬಂಧವನ್ನು ತಮ್ಮ ಕಾಲದ ಶ್ರೇಷ್ಠ ಪ್ರೇಮಕಥೆಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಆ ಲವ್ ಸ್ಟೋರಿಯನ್ನು ನೋಡುವ ಅದೃಷ್ಟಶಾಲಿ ನಾವಾಗಿದ್ದೆವು ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲೇನಿದೆ?:

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಮದುವೆಯಾಗಿ ಇಟಲಿಯಿಂದ ಭಾರತಕ್ಕೆ ಬಂದು ನೆಲೆಸಿದ ಸೋನಿಯಾ ಗಾಂಧಿಯವರ ಆತ್ಮಚರಿತ್ರೆಯೇ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’. ಈ ಪುಸ್ತಕವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ‘ಅಲ್ಫ್ರೆಡ್ ಎ ನಾಫ್’ (ಪೆಂಗ್ವಿನ್ ರಾಂಡಮ್ ಹೌಸ್) ನವೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಇಟಲಿಯಲ್ಲಿ ಕಳೆದ ಸೋನಿಯಾ ಗಾಂಧಿ ಅವರ ಬಾಲ್ಯದ ದಿನಗಳು, ಭಾರತಕ್ಕೆ ಅವರ ಆಗಮನ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮ ಹಾಗೂ ವೈವಾಹಿಕ ಜೀವನದ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಸಂಜಯ್ ಗಾಂಧಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಯಂತಹ ಸಾಲು ಸಾಲು ಆಘಾತಕಾರಿ ದುರಂತಗಳು ಅವರ ಮೇಲೆ ಹೇಗೆ ಪ್ರಭಾವ ಬೀರಿದವು? 2004ರಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ ಐತಿಹಾಸಿಕ ನಿರ್ಧಾರದ ಹಿಂದಿನ ಸತ್ಯಾಸತ್ಯತೆಗಳ ಕುರಿತು ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ‘ವಂದೇ ಮಾತರಂ’ ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?

ಅಕ್ಟೋಬರ್ 1984ರಲ್ಲಿ ತಮ್ಮ ತಾಯಿ ಹಾಗೂ ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ರಾಜೀವ್ ಗಾಂಧಿ ತಮ್ಮ 40ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅವರು ಡಿಸೆಂಬರ್ 1989ರವರೆಗೆ ಪ್ರಧಾನಿ ಹುದ್ದೆಯಲ್ಲಿದ್ದರು. ಆಗಸ್ಟ್ 20, 1944ರಂದು ಜನಿಸಿದ ರಾಜೀವ್ ಗಾಂಧಿ ಅವರು ಮೇ 21, 1991ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಎಲ್‌ಟಿಟಿಇ (LTTE) ಆತ್ಮಹುತಿ ಬಾಂಬ್ ದಾಳಿಗೆ ಬಲಿಯಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us