AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್ಲಿಯಲ್ಲಿ ಜೂನ್ 8ರಂದು ಜನಬಂಧನ್ ಸಭೆ; 23 ವಿಪಕ್ಷಗಳು ಭಾಗಿ; ಡಿಎಂಕೆ ಔಟ್, ಟಿವಿಕೆ ಇನ್

23 oppostion parties to participate in Janbandhan meeting at Delhi: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' (I.N.D.I.A. bloc) ವತಿಯಿಂದ ಜೂನ್ 8ರಂದು ಜನಬಂಧನ್ ಸಭೆ ಆಯೋಜಿಸಲಾಗಿದೆ. ಇದರಲ್ಲಿ 23 ಪಕ್ಷಗಳು ಭಾಗಿಯಾಗಲಿವೆ. ಇಂಡಿಯಾದ ಪ್ರಮುಖ ಭಾಗವಾಗಿದ್ದ ಡಿಎಂಕೆ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಟಿವಿಕೆ ಭಾಗವಹಿಸಲಿದೆ.

ದಿಲ್ಲಿಯಲ್ಲಿ ಜೂನ್ 8ರಂದು ಜನಬಂಧನ್ ಸಭೆ; 23 ವಿಪಕ್ಷಗಳು ಭಾಗಿ; ಡಿಎಂಕೆ ಔಟ್, ಟಿವಿಕೆ ಇನ್
ಕಾಂಗ್ರೆಸ್ ಬಾವುಟದ ಸಾಂದರ್ಭಿಕ ಚಿತ್ರImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2026 | 6:59 PM

Share

ನವದೆಹಲಿ, ಜೂನ್ 7: ಇಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಾಳೆ ಸೋಮವಾರ (ಜೂನ್ 8) ಮಧ್ಯಾಹ್ನ 12 ಗಂಟೆಗೆ ‘ಇಂಡಿಯಾ’ (I.N.D.I.A. bloc) ಮೈತ್ರಿಕೂಟದ ಪ್ರಮುಖ ಸಭೆ ಆಯೋಜಿಸಲಾಗಿದೆ. ಇದನ್ನು ‘ಜನಬಂಧನ್’ (Janbandhan) ಸಭೆ ಎಂದು ಹೆಸರಿಸಲಾಗಿದೆ. ಈ ಬೃಹತ್ ಸಭೆಯಲ್ಲಿ ಭಾಗವಹಿಸುವುದಾಗಿ ಮೈತ್ರಿಕೂಟದ ಒಟ್ಟು 23 ರಾಜಕೀಯ ಪಕ್ಷಗಳು ಅಧಿಕೃತವಾಗಿ ಖಚಿತಪಡಿಸಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. 2023ರ ಡಿಸೆಂಬರ್ ನಂತರ ನಡೆಯುತ್ತಿರುವ ಈ ಮೈತ್ರಿಕೂಟದ ಮೊದಲ ಪ್ರಮುಖ ಸಭೆಯಾಗಿದ್ದು, ಮೈತ್ರಿಕೂಟದ ಒಳಗಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ ಈ ಸಭೆ ನಡೆಯುತ್ತಿದೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, “ವೈವಿಧ್ಯತೆಯ ನಡುವೆಯೂ ಇಂಡಿಯಾ ಜನಬಂಧನ್ ಒಗ್ಗಟ್ಟಿನಿಂದ ಮುನ್ನಡೆಯುತ್ತಿದೆ” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಸಂಸದ ಡೆರೆಕ್ ಒಬ್ರಿಯನ್ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಸ್ಪಷ್ಟ ಉದ್ದೇಶ ಮತ್ತು ಸೌಹಾರ್ದಯುತ ಮನೋಭಾವದೊಂದಿಗೆ ನಾವು ಈ ಸಭೆಯನ್ನು ಎದುರು ನೋಡುತ್ತಿದ್ದೇವೆ. ಇಂಡಿಯಾ ಒಕ್ಕೂಟ ಒಂದಾಗಿದೆ,” ಎಂದು ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಈಗಾಗಲೇ ದೆಹಲಿಗೆ ತಲುಪಿದ್ದಾರೆ.

ಇದನ್ನೂ ಓದಿ: ಗುಜರಾತ್​ನಲ್ಲಿ ರಾತ್ರೋರಾತ್ರಿ ಬುಲ್ಡೋಜರ್ ದಾಳಿಗೆ ಬಿದ್ದ 100 ಮನೆಗಳು; ಅಧಿಕಾರಿಗಳಿಗೂ ಗೊತ್ತಿಲ್ಲ; ಭೂಮಾಫಿಯಾ ಕರಾಮತ್ತಾ?

ಸಭೆಯ ಪ್ರಮುಖ ಅಜೆಂಡಾ

ಸಭೆಯ ಅಧಿಕೃತ ಕಾರ್ಯಸೂಚಿ ಪ್ರಕಟವಾಗಿಲ್ಲವಾದರೂ, ಮುಂಬರುವ 2029 ರ ಲೋಕಸಭಾ ಚುನಾವಣೆಗೆ ಜಂಟಿ ಕಾರ್ಯತಂತ್ರ ರೂಪಿಸುವುದು ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮೋದಿ ಸರ್ಕಾರವನ್ನು ಮುತ್ತಿಗೆ ಹಾಕಲು ನೀಲನಕ್ಷೆ ಸಿದ್ಧಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಂವಿಧಾನದ ರಕ್ಷಣೆ, ತನಿಖಾ ಸಂಸ್ಥೆಗಳ ದುರುಪಯೋಗ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ವಿಷಯಗಳ ವಿರುದ್ಧ ಜಂಟಿ ಹೋರಾಟದ ಕುರಿತು ಚರ್ಚೆ ನಡೆಯಲಿದೆ.

ಸಭೆಯಿಂದ ದೂರ ಉಳಿಯಲಿರುವ ಪ್ರಮುಖ ಪಕ್ಷಗಳು

ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಅಚ್ಚರಿ ಜಯ ಸಾಧಿಸಿ ಗದ್ದುಗೆ ಹಿಡಿದಿರುವ ವಿಜಯ್ ಅವರ ಟಿವಿಕೆ ಪಕ್ಷ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಬೆಂಬಲ ನೀಡಿದ್ದರಿಂದ ತಮಗೆ “ದ್ರೋಹ”ವಾಗಿದೆ ಎಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ಮೂಲಗಳ ಪ್ರಕಾರ ಆಪ್ (AAP) ಸಹ ಈ ಸಭೆಯಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಯುವಕನ ಹತ್ಯೆ; ಪೀಜ್ಜಾ ಡೆಲಿವರಿಗೆಂದು ಕರೆಸಿ ಸಾಯಿಸಿದ ಹಂತಕರು

ಸಿಪಿಐ(ಎಂ)-ಕಾಂಗ್ರೆಸ್ ನಡುವಿನ ತಿಕ್ಕಾಟ

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು, ಸಿಪಿಐ(ಎಂ) ಪಕ್ಷವು ಬಿಜೆಪಿಯೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಈ ಕುರಿತು ಸ್ಪಷ್ಟನೆ ಕೋರಿದ್ದಾರೆ. ಆದಾಗ್ಯೂ, ಮೈತ್ರಿಕೂಟದ ಒಗ್ಗಟ್ಟಿಗಾಗಿ ಸಿಪಿಐ(ಎಂ) ಸಭೆಯಲ್ಲಿ ಭಾಗವಹಿಸಲಿದ್ದು, ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.

ಈ ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More