ಲೋಕಸಭೆಯಲ್ಲೂ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ; ಮಾರ್ಚ್ 10ರವರೆಗೆ ಕಲಾಪ ಮುಂದೂಡಿಕೆ
ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಇಂದು ರಾಜ್ಯಸಭೆ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಇದೀಗ ಲೋಕಸಭೆಯಲ್ಲೂ ವಕ್ಫ್ ಮಸೂದೆಯ ಕುರಿತು ಜೆಪಿಸಿ ವರದಿಯನ್ನು ಮಂಡನೆ ಮಾಡಲಾಗಿದೆ. ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ಮಂಡಿಸಿದ ನಂತರ ವಿರೋಧ ಪಕ್ಷಗಳಿಂದ ರಾಜ್ಯಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಲೋಕಸಭೆಯಲ್ಲೂ ಇದೇ ಪರಿಸ್ಥಿತಿ ಪುನರಾವರ್ತನೆಯಾಯಿತು.

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಆರಂಭದಲ್ಲಿ ಚಳಿಗಾಲದ ಅಧಿವೇಶನಕ್ಕೆ ಈ ಮಸೂದೆಯ ಮಂಡನೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಸಮಿತಿಯು ಆ ಸಮಯದಲ್ಲಿ ದಕ್ಷಿಣ ಪ್ರದೇಶಗಳನ್ನು ಮಾತ್ರ ಒಳಗೊಳ್ಳಲು ಸಾಧ್ಯವಾದ ಕಾರಣ ವರದಿ ಸಲ್ಲಿಕೆ ವಿಳಂಬವಾಯಿತು. ಇಂದು ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ಇದಾದ ನಂತರ ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದರು.
ರಾಜ್ಯಸಭೆಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಜೆಪಿಸಿ ವರದಿಯನ್ನು ಲೋಕಸಭೆಯಲ್ಲಿಯೂ ಮಂಡಿಸಲಾಗಿದೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಇಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಸಮಿತಿಯ ವರದಿಯನ್ನು ಮಂಡಿಸಿದರು. ವಿರೋಧ ಪಕ್ಷದ ಸದಸ್ಯರು ಸದನದಿಂದ ಹೊರನಡೆದ ಕಾರಣ ಗದ್ದಲದ ನಡುವೆಯೇ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಇಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ಮಂಡಿಸಿದರು.
ಇದನ್ನೂ ಓದಿ: ಭಾರೀ ಗದ್ದಲದ ನಡುವೆ ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಕೂಡ ಮಂಡಿಸಿದ್ದಾರೆ. ಲೋಕಸಭೆ ಅಧಿವೇಶನವನ್ನು ಮಾರ್ಚ್ 10ರವರೆಗೆ ಮುಂದೂಡಲಾಗಿದೆ. ಬಜೆಟ್ ಅಧಿವೇಶನದ ಮೊದಲ ಭಾಗ ಇಂದು ಮುಕ್ತಾಯಗೊಂಡಿದ್ದರಿಂದ ಇಂದು ಲೋಕಸಭೆಯ ಕಲಾಪವನ್ನು ಮಾರ್ಚ್ 10ರವರೆಗೆ ಮುಂದೂಡಲಾಯಿತು.
#WATCH | Delhi: JPC Chairman and BJP MP Jagadambika Pal tables the report of the JPC on Waqf Amendment Bill in the Lok Sabha pic.twitter.com/qsUwFgiFzb
— ANI (@ANI) February 13, 2025
ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯುತ್ತಿದೆ. ಜನವರಿ 31ರಿಂದ ಫೆಬ್ರವರಿ 13ರವರೆಗೆ ಮತ್ತು ಮಾರ್ಚ್ 10ರಿಂದ ಏಪ್ರಿಲ್ 4ರವರೆಗೆ ಅಧಿವೇಶನದ ಕಲಾಪ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2025-26ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Thu, 13 February 25