ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಮುಂದಿನ ಪೀಳಿಗೆಯ ಸುಧಾರಣೆ, ಜಿಎಸ್‌ಟಿ ಪರಿಷ್ಕರಣೆ ಕುರಿತು ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿ, ಮುಂದಿನ ಪೀಳಿಗೆಯ ಸುಧಾರಣೆಗಳಿಗೆ ಚಾಲನೆ ನೀಡಿದರು. ಮುಂದಿನ ಪೀಳಿಗೆಯ ಸುಧಾರಣೆಗಳ ಮಾರ್ಗಸೂಚಿಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರು, ಕಾರ್ಯದರ್ಶಿಗಳು ಮತ್ತು ಅರ್ಥಶಾಸ್ತ್ರಜ್ಞರೊಂದಿಗೆ ಸಭೆ ನಡೆಸಿದರು. ಈ ಸಭೆಯ ವಿಡಿಯೋವನ್ನು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ನವದೆಹಲಿ, ಆಗಸ್ಟ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಸೋಮವಾರ) ದೆಹಲಿಯ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಕೇಂದ್ರ ಸಚಿವರು, ಕಾರ್ಯದರ್ಶಿಗಳು ಮತ್ತು ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ (Independence Day) ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳಲ್ಲಿ ಒಂದಾದ ಮುಂದಿನ ಪೀಳಿಗೆಯ ಸುಧಾರಣೆಗಳ ಮಾರ್ಗಸೂಚಿಯ ಕುರಿತು ಚರ್ಚಿಸಿದರು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಪಿಯೂಷ್ ಗೋಯಲ್ ಈ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು ಎಲ್ಲಾ ವಲಯಗಳಲ್ಲಿ ತ್ವರಿತ ಸುಧಾರಣೆಗಳಿಗೆ ಬದ್ಧವಾಗಿದೆ. ಇದು ಸುಲಭವಾಗಿ ಜೀವನ ನಡೆಸಲು, ವ್ಯಾಪಾರ ಮಾಡಲು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. “ಮುಂದಿನ ಪೀಳಿಗೆಯ ಸುಧಾರಣೆಗಳಿಗಾಗಿ ಮಾರ್ಗಸೂಚಿಯನ್ನು ಚರ್ಚಿಸಲು ಸಭೆಯನ್ನು ಆಯೋಜಿಸಲಾಗಿತ್ತು. ವ್ಯಾಪಾರದ ಅನುಕೂಲ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಎಲ್ಲಾ ವಲಯಗಳಲ್ಲಿ ತ್ವರಿತ ಸುಧಾರಣೆಗಳಿಗೆ ನಾವು ಬದ್ಧರಾಗಿದ್ದೇವೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಇದನ್ನೂ ಓದಿ: ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಅರೆವಾಹಕಗಳಿಂದ ಹಿಡಿದು ರಸಗೊಬ್ಬರಗಳವರೆಗಿನ ಹಲವಾರು ಕ್ಷೇತ್ರಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಕುರಿತು ಸ್ವಾತಂತ್ರ್ಯ ದಿನಾಚರಣೆಯ ತಮ್ಮ 103 ನಿಮಿಷಗಳ ಭಾಷಣದಲ್ಲಿ ಮುಖ್ಯವಾಗಿ ಮಾತನಾಡಿದ್ದ ಪ್ರಧಾನಿ ಮೋದಿ, ಆಗಸ್ಟ್ 15ರಂದು ‘ಮುಂದಿನ ಪೀಳಿಗೆಯ ಸುಧಾರಣೆಗಳು’ ಮತ್ತು ಜಿಎಸ್‌ಟಿ ಕಾನೂನುಗಳ ಪರಿಷ್ಕರಣೆಗಾಗಿ ಕಾರ್ಯಪಡೆ ರಚನೆಯನ್ನು ಘೋಷಿಸಿದ್ದರು.
Chaired a meeting to discuss the roadmap for Next-Generation Reforms. We are committed to speedy reforms across all sectors, which will boost Ease of Living, Ease of Doing Business and prosperity. pic.twitter.com/XnJQ5vg3eK
— Narendra Modi (@narendramodi) August 18, 2025
ಪ್ರಧಾನ ಮಂತ್ರಿ ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಆರ್ಥಿಕ ಚಟುವಟಿಕೆಯನ್ನು ನಿಯಂತ್ರಿಸುವ ಕಾನೂನುಗಳು, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿರುವ ಮುಂದಿನ ಪೀಳಿಗೆಯ ಆರ್ಥಿಕ ಸುಧಾರಣೆಗಳಿಗಾಗಿ ಕಾರ್ಯಪಡೆ ರಚನೆಯನ್ನು ಘೋಷಿಸಿದರು. ಸರ್ಕಾರವು ಈಗಾಗಲೇ 1,500 ಹಳೆಯ ಕಾನೂನುಗಳನ್ನು ರದ್ದುಗೊಳಿಸಿದೆ. ಇತ್ತೀಚಿನ ಸಂಸತ್ತಿನ ಅಧಿವೇಶನದಲ್ಲಿ 280ಕ್ಕೂ ಹೆಚ್ಚು ನಿಬಂಧನೆಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಒತ್ತಿ ಹೇಳಿದ್ದರು.
ಇದನ್ನೂ ಓದಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ಗೆ ಪ್ರಧಾನಿ ಮೋದಿ ಅಭಿನಂದನೆ
ದೀಪಾವಳಿಯ ವೇಳೆಗೆ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ದೈನಂದಿನ ಅಗತ್ಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತದೆ. ಇದು ಎಂಎಸ್‌ಎಂಇಗಳು, ಸ್ಥಳೀಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
