AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ

West Bengal Elections Results : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ನಿಖರವಾದ ಅಂಕಿ-ಅಂಶಗಳು ಸಿಗದೇ ಇದ್ದರೂ ಮತ ಎಣಿಕೆ ಮುಗಿಯುತ್ತಾ ಬಂದಿರುವುದರಿಂದ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಇದೇ ಮೊದಲ ಬಾರಿ ಬಂಗಾಳದಲ್ಲಿ ಸರ್ಕಾರ ರಚಿಸುತ್ತಿರುವ ಬಿಜೆಪಿ ಈಗಾಗಲೇ 234 ಕ್ಷೇತ್ರಗಳ ಪೈಕಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಸ್ಥಾನಗಳನ್ನು ದಾಟಿರುವುದರಿಂದ ಯಾರ ಮುಂದೆಯೂ ಕೈ ಚಾಚದೆ ಆರಾಮಾಗಿ ಬಿಜೆಪಿ ಸರ್ಕಾರ ರಚಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ
Pm Modi And Amit ShahImage Credit source: PTI
ಸುಷ್ಮಾ ಚಕ್ರೆ
|

Updated on:May 04, 2026 | 6:59 PM

Share

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿಯವರ (PM Modi) ಗ್ಯಾರಂಟಿ ಮತ್ತು ಅಮಿತ್ ಶಾ (Amit Shah) ಅವರ ಚುನಾವಣಾ ತಂತ್ರದಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪಕ್ಷವು ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಉರುಳಿಸಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಸ್ಥಾಪಿಸಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳು, ಒಳನುಸುಳುವಿಕೆ ವಿರೋಧಿ ನಿಲುವು ಮತ್ತು ಬಲವಾದ ಬೂತ್ ನಿರ್ವಹಣೆಯು ಮತದಾರರ ವಿಶ್ವಾಸವನ್ನು ಗಳಿಸಿತು. ಇದು ಬಿಜೆಪಿಯ ನಿರ್ಣಾಯಕ ಗೆಲುವಿಗೆ ಕಾರಣವಾಯಿತು ಎನ್ನಬಹುದು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಮೊದಲ ಸರ್ಕಾರವಾಗಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದು ಇದೇ ಮೊದಲು. ಇದು ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯವನ್ನು ಸೂಚಿಸುತ್ತದೆ.

ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಜೆಪಿಯನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಖಾಡಕ್ಕೆ ಇಳಿದಿದ್ದರು. ಕಳೆದ 2 ತಿಂಗಳಲ್ಲಿ ಅನೇಕ ಬಾರಿ ನರೇಂದ್ರ ಮೋದಿ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ ಬಂಗಾಳದಲ್ಲೇ ಬೀಡುಬಿಟ್ಟು ರಾಜ್ಯದ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಮೂಡಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಈ ಗೆಲುವು ಸಿಗಲು ಪಶ್ಚಿಮ ಬಂಗಾಳ ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಪರಿಶ್ರಮವೇ ಕಾರಣ ಎನ್ನಬಹುದು. ಹೀಗಾಗಿ, ಬಂಗಾಳದಲ್ಲಿ ಕೂಡ ಬಿಜೆಪಿ ಪ್ರಧಾನಿ ಮೋದಿಯ ಹೆಸರು ಮತ್ತು ಖ್ಯಾತಿಯನ್ನು ಬಳಸಿಕೊಂಡು ಚುನಾವಣೆ ಗೆದ್ದಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ

ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಹಲವಾರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿ ರಾಜ್ಯದಲ್ಲಿ ಬದಲಾವಣೆಗೆ ಕರೆ ನೀಡಿದರು. ಬಂಗಾಳದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ಹಾಗೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮಾರು 15 ದಿನಗಳ ಕಾಲ ಬಂಗಾಳದಲ್ಲಿಯೇ ಇದ್ದು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ, ಪ್ರತಿ ವಿಧಾನಸಭಾ ಸ್ಥಾನಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿದರು. ಈ ಕಾರ್ಯತಂತ್ರವು ಈಗ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.

ಬಿಜೆಪಿ 82,000 ಬೂತ್‌ಗಳಲ್ಲಿ 71,000 ಬೂತ್‌ಗಳ ಮೇಲೆ ನಿಯಂತ್ರಣ ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳನ್ನು ಹೊರತುಪಡಿಸಿ, ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆಯನ್ನು ಬಲಪಡಿಸಲಾಗಿದೆ. ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಬಿಜೆಪಿ ತುಳಿತಕ್ಕೆ ಒಳಗಾದವರನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತು. ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ನಾಯಕರಿಗೆ ಸ್ಥಾನವಾರು ಜವಾಬ್ದಾರಿಗಳನ್ನು ವಹಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಡ್ರಾಯಿಂಗ್ ರೂಮ್ ಸಭೆಗಳು ಮನೆ ಮನೆಗೆ ಬಿಜೆಪಿ ತಲುಪಲು ಕಾರಣವಾಯಿತು. ಇದಕ್ಕೆ ಆರ್​ಎಸ್​ಎಸ್​ ಕಾರ್ಯಕರ್ತರು ಕೈಜೋಡಿಸಿದ್ದರಿಂದ ಬಿಜೆಪಿಗೆ ಬಹಳ ಸಹಾಯವಾಯಿತು. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಟಾಲಿವುಡ್ ತಾರೆಯರು ಮತ್ತು ಕಳಂಕಿತ ರಾಜಕಾರಣಿಗಳನ್ನು ದೂರವಿಡಲಾಯಿತು.

ಇದನ್ನೂ ಓದಿ: Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಪೂರ್ವಾಂಚಲಿ, ಮಾರ್ವಾರಿ ಸಮುದಾಯ ಮತ್ತು ಸ್ಥಳೀಯ ಫುಟ್ಬಾಲ್ ಕ್ಲಬ್‌ಗಳನ್ನು ತಲುಪುವ ಮೂಲಕ ಹೊಸ ಮತ ಬ್ಯಾಂಕ್ ಅನ್ನು ರಚಿಸಲಾಯಿತು. ಜೈ ಶ್ರೀ ರಾಮ್, ಒಳನುಸುಳುವಿಕೆ, ಮಹಿಳಾ ಸುರಕ್ಷತೆ – ಇವುಗಳನ್ನು ಒಟ್ಟುಗೂಡಿಸಿ ಬಲವಾದ ಸೈದ್ಧಾಂತಿಕ ಚೌಕಟ್ಟನ್ನು ರಚಿಸಲಾಯಿತು. ಇದು ಬಿಜೆಪಿಯತ್ತ ಜನರು ಒಲವು ತೋರಲು ಕಾರಣವಾಯಿತು.

ಮಮತಾ ಬ್ಯಾನರ್ಜಿ ಅವರ ಪ್ರಣಾಳಿಕೆ ವರ್ಸರ್ ಪ್ರಧಾನಿ ಮೋದಿ ಅವರ ಭರವಸೆ:

  • 3,000 ರೂ. ವರ್ಸಸ್ 1,500 ರೂ. ಆಫರ್: ಟಿಎಂಸಿ 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಿದರೆ, ಬಿಜೆಪಿ ಅದನ್ನು 3,000 ರೂ.ಗೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತು.
  • ಮಹಿಳೆಯರಿಗೆ ಡಬಲ್ ಡೋಸ್: ಮಮತಾ ಬ್ಯಾನರ್ಜಿಯವರ ಲಕ್ಷ್ಮಿ ಭಂಡಾರ್ 1,500 ರೂ.ಗೆ ಹೋಲಿಸಿದರೆ, ಬಿಜೆಪಿ ಪ್ರತಿ ಮಹಿಳೆಗೆ ತಿಂಗಳಿಗೆ 3,000 ರೂ. ನೀಡುವುದಾಗಿ ಭರವಸೆ ನೀಡಿತು. ಇದು ಮಹಿಳೆಯರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಸಹಾಯವಾಯಿತು.
  • ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ: ಟಿಎಂಸಿ ವಿರುದ್ಧ ಡಿಎ ಮತ್ತು ವೇತನ ವ್ಯತ್ಯಾಸದ ಆರೋಪ ಮಾಡಿತು. ಅಧಿಕಾರಕ್ಕೆ ಬಂದ 45 ದಿನಗಳಲ್ಲಿ 7ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ.
  • ಸರ್ಕಾರಿ ಉದ್ಯೋಗಗಳಲ್ಲಿ 33% ಮಹಿಳಾ ಮೀಸಲಾತಿಯ ಭರವಸೆ: ಹಣಕಾಸಿನ ನೆರವು ಮಾತ್ರವಲ್ಲದೆ, ಉದ್ಯೋಗದಲ್ಲಿ ಕೂಡ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯ ಭರವಸೆಯನ್ನು ಬಿಜೆಪಿ ನೀಡಿದೆ.
  • ಏಕರೂಪ ನಾಗರಿಕ ಸಂಹಿತೆಯ ಭರವಸೆ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಿಜೆಪಿ ಇದನ್ನು ಎಲ್ಲರಿಗೂ ಒಂದೇ ಕಾನೂನು ಎಂದು ಪ್ರಸ್ತುತಪಡಿಸಿತು. ಇದು ಟಿಎಂಸಿ ನಿರೂಪಣೆಗಿಂತ ಭಿನ್ನವಾಗಿದೆ.
  • ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ: ಪಶ್ಚಿಮ ಬಂಗಾಳದಲ್ಲಿ ಒಳನುಸುಳುವವರನ್ನು ಹೊರಹಾಕಲಾಗುವುದು ಎಂದು ಬಿಜೆಪಿ ಸ್ಪಷ್ಟವಾಗಿ ಹೇಳಿದೆ.
  • ಕೈಗಾರಿಕೆ ಮತ್ತು ಸಿಂಗೂರ್ ಪುನರುಜ್ಜೀವನ: ಸಿಂಗೂರ್ ಅನ್ನು ಮತ್ತೆ ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಇದು ಉದ್ಯೋಗ ಮತ್ತು ಹೂಡಿಕೆಗೆ ಅನುಕೂಲ ನೀಡುತ್ತದೆ.
  • ಕೇಂದ್ರ ಯೋಜನೆಗಳ ಸಂಪೂರ್ಣ ಲಾಭ: ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ನಂತಹ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಭರವಸೆ ನೀಡಲಾಗಿದೆ.

ಈ ಬಾರಿ ಪಶ್ಚಿಮ ಬಂಗಾಳವು ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಶೇ. 91.66ರಷ್ಟು ಮತದಾನವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಶೇ.93.19ರಷ್ಟು ಜನರು ಮತದಾನದಲ್ಲಿ ಭಾಗವಹಿಸಿದ್ದು, ಒಟ್ಟಾರೆ ಮತದಾನದ ಪ್ರಮಾಣ ಶೇ.92.47ಕ್ಕೆ ತಲುಪಿದೆ.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದು ಸುಮಾರು ಶೇ.48ರಷ್ಟು ಮತಗಳನ್ನು ಗಳಿಸಿ ನಿರ್ಣಾಯಕ ಬಹುಮತ ಗಳಿಸಿತು. ಆದರೆ ಬಿಜೆಪಿ 77 ಸ್ಥಾನಗಳನ್ನು ಅಂದರೆ ಸರಿಸುಮಾರು ಶೇ.38ರಷ್ಟು ಮತಗಳನ್ನು ಗಳಿಸಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Mon, 4 May 26

Follow Us