ಪ್ರಧಾನಿ ಮೋದಿ ನಿವಾಸದಲ್ಲಿ ಉನ್ನತ ಮಟ್ಟದ ಸಭೆ; ವಿಕಸಿತ ಭಾರತ ಸೇರಿ ಪ್ರಮುಖ ವಿಷಯಗಳ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ವಿಕಸಿತ ಭಾರತದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ಸಮಾಜ ಕಲ್ಯಾಣ, ಯುವಜನತೆ, ಕ್ರೀಡೆ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿಯನ್ನು ಕಾರ್ಯದರ್ಶಿಗಳ ಜೊತೆ ಚರ್ಚಿಸಿದರು. ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಸುಧಾರಣೆಗಳು ದೇಶದಲ್ಲಿ ನಿಜವಾದ ಬದಲಾವಣೆಯನ್ನು ತರಬಹುದು ಎಂದು ಮೋದಿ ಹೇಳಿದರು.

ನವದೆಹಲಿ, ಜುಲೈ 22: ವಿಕಸಿತ ಭಾರತ ನಿರ್ಮಾಣದ ಕನಸು ದೇಶದ ಪ್ರತಿಯೊಬ್ಬ ನಾಗರಿಕನ ಜನಾಂದೋಲನವಾಗಬೇಕು. ಈ ದೃಷ್ಟಿಕೋನಕ್ಕೆ ದೇಶದ ಯುವಜನತೆಯೇ ಪ್ರಮುಖ ತಳಹದಿಯಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಪಾದಿಸಿದ್ದಾರೆ. ಸರ್ಕಾರದ ಪ್ರತಿಯೊಂದು ಸುಧಾರಣೆಗಳ ಕೇಂದ್ರಬಿಂದು ಸಾರ್ವಜನಿಕರ ಕ್ಷೇಮಾಭಿವೃದ್ಧಿಯೇ ಆಗಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದು ತಮ್ಮ ಅಧಿಕೃತ ನಿವಾಸದಲ್ಲಿ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ವಿಕಸಿತ ಭಾರತದ ಗುರಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ, ಕೃಷಿ, ಸಾಮಾಜಿಕ ಕಲ್ಯಾಣ ಹಾಗೂ ಸಂಯೋಜಿತ ವಲಯಗಳ ಪ್ರಗತಿಯನ್ನು ಪರಿಶೀಲಿಸಲು ನಡೆಸಿದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಪ್ರಧಾನಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ಯುವಶಕ್ತಿ, ಬಾಹ್ಯಾಕಾಶ ಸಾಧನೆ, ದೇಶದ ಆರ್ಥಿಕ ಪ್ರಗತಿ ಶ್ಲಾಘಿಸಿದ ಪ್ರಧಾನಿ ಮೋದಿ
ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಸೂಚಿಸಿದರು. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹೊಸ ಅಗತ್ಯಗಳನ್ನು ಗುರುತಿಸಿ ಅವುಗಳ ಮೇಲೆ ಸಮಗ್ರ ನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶದ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಂಪೂರ್ಣ ಸರ್ಕಾರದ ವಿಧಾನವು ಅತ್ಯಗತ್ಯ ಎಂದು ಮೋದಿ ಹೇಳಿದರು. ಯುವಜನರು ಪ್ರಮುಖ ಪಾತ್ರ ವಹಿಸಬೇಕಾದ ವಿಕಸಿತ ಭಾರತದ ಗುರಿಯನ್ನು ಜನರ ಚಳುವಳಿಯಾಗುವಂತೆ ಅವರು ಕರೆ ನೀಡಿದರು. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಬಗ್ಗೆಯೂ ಪ್ರಧಾನಿ ಕಳವಳ ವ್ಯಕ್ತಪಡಿಸಿದರು.
ಜನಕೇಂದ್ರಿತ ಸುಧಾರಣೆಗಳು:
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾದ ಸುಧಾರಣೆಗಳು ನೈಜ ವೇಗವನ್ನು ಪಡೆದುಕೊಳ್ಳಬೇಕು ಮತ್ತು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರಬೇಕು ಎಂದರು. “ಸುಧಾರಣೆಗಳ ಮುಖ್ಯ ಉದ್ದೇಶ ಕೇವಲ ಸರ್ಕಾರದ ಕಾರ್ಯಾಚರಣೆಯನ್ನು ಸುಧಾರಿಸುವುದು ಮಾತ್ರವಲ್ಲ, ಬದಲಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪ್ರಯಾಣವನ್ನು ವೇಗಗೊಳಿಸುವುದಾಗಿದೆ” ಎಂದು ಮೋದಿ ಹೇಳಿದ್ದಾರೆ.
ಇಂದು ‘ಕ್ರೀಡಾ ಪ್ರವಾಸೋದ್ಯಮ’ ಒಂದು ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿದ್ದು, ಭಾರತವನ್ನು ಜಾಗತಿಕ ಕ್ರೀಡಾ ಕೇಂದ್ರವನ್ನಾಗಿ ಮಾಡಲು ದೇಶವು ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವ ಗುರಿ ಹೊಂದಬೇಕು. ಕ್ರೀಡಾ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಉತ್ತೇಜಿಸುವ ಮತ್ತು ‘ಸ್ಟಾರ್ಟ್‌ಅಪ್‌ಗಳ’ ಮೂಲಕ ನಾವೀನ್ಯತೆಯನ್ನು ಪೋಷಿಸುವ ಅಗತ್ಯತೆಯ ಬಗ್ಗೆಯೂ ಮೋದಿ ಮಾತನಾಡಿದರು.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ರಾಷ್ಟ್ರೀಯ ಜವಾಬ್ದಾರಿ: ಎನ್ಡಿಎ ಸಭೆಯಲ್ಲಿ ಮೋದಿ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ಮೋದಿ, ಪಿಎಂ ಕುಸುಮ್ ಯೋಜನೆಯಂತಹ ಕಾರ್ಯಕ್ರಮಗಳನ್ನು ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು ಎಂದರು. ಭಾರತೀಯ ಯುವಕರಿಗೆ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳು ಮತ್ತು ಭವಿಷ್ಯದ ಅಗತ್ಯತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು, ಜಾಗತಿಕ ಮಟ್ಟದಲ್ಲಿ ಕೌಶಲ್ಯ ಅಗತ್ಯಗಳ ಮ್ಯಾಪಿಂಗ್ ನಡೆಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




