ಹುದ್ದೆಗೆ ಅರ್ಹತೆಯೇ ಮುಖ್ಯ: ಮೀಸಲಾತಿಯಲ್ಲಿ ಮಿಸ್ ಆದ್ರೂ ಜನರಲ್ನಲ್ಲಿ ಪರಿಗಣನೆ
ಮೀಸಲಾತಿ ವರ್ಗದ ಸ್ಥಾನಗಳಲ್ಲಿ ಅಭ್ಯರ್ಥಿಗಳ ಲಭ್ಯತೆ ಇರದಿದ್ದಾಗ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಆ ಸ್ಥಾನಗಳನ್ನು ಹಂಚಬಹುದಾದರೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅರ್ಹತೆ ಹೊಂದಿರುವ ಮೀಸಲು ಅಭ್ಯರ್ಥಿಗಳನ್ನು ಏಕೆ ಪರಿಗಣಿಸಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
ದೆಹಲಿ: ಸಾಮಾನ್ಯ ವರ್ಗಕ್ಕೆ ಕಾಯ್ದಿರಿಸಿದ ಹುದ್ದೆಗಳನ್ನು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ವರ್ಗಕ್ಕೂ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಒಂದು ವೇಳೆ, ಮೀಸಲಾತಿ ವರ್ಗದ ಅಭ್ಯರ್ಥಿಯೋರ್ವ ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ ಹೆಚ್ಚು ಅರ್ಹತೆ ಹೊಂದಿದ್ದರೆ ಸಾಮಾನ್ಯ ವರ್ಗದಲ್ಲೇ ಆತನಿಗೆ ಕೆಲಸ ನೀಡಬಹುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಧೀಶರಾದ ಯು.ಯು.ಲಲಿತ್, ರವೀಂದ್ರ ಭಟ್, ಹೃಷಿಕೇಶ್ ರಾಯ್ ಅವರಿದ್ದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ. ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಒಬಿಸಿ ಮಹಿಳೆ ಮತ್ತು ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿಯಡಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮನವಿ ಆಲಿಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ಏನಿದು ಪ್ರಕರಣ? ಸಾಮಾನ್ಯ ಮಹಿಳೆ ವರ್ಗದ ಅಭ್ಯರ್ಥಿಯೋರ್ವರು 274.8928 ಅಂಕಗಳನ್ನು ಗಳಿಸಿ ಉದ್ಯೋಗ ಪಡೆದಿದ್ದರು. ಆದರೆ, ಒಬಿಸಿ ಮಹಿಳೆ ವರ್ಗದ 21 ಅಭ್ಯರ್ಥಿಗಳು ಇದಕ್ಕಿಂತಲೂ ಹೆಚ್ಚು ಅಂಕ ಪಡೆದೂ ಆಯ್ಕೆಯಾಗಿರಲಿಲ್ಲ. ಇದು ಉತ್ತರ ಪ್ರದೇಶ ಸರ್ಕಾರ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿದ ಸ್ಪಷ್ಟ ನಿದರ್ಶನ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
274.8928 ಕ್ಕಿಂತ ಹೆಚ್ಚು ಅಂಕ ಪಡೆದ ಓಬಿಸಿ ಮಹಿಳಾ ವರ್ಗದ ಅಭ್ಯರ್ಥಿಗಳಿಗೆ ಈ ಪ್ರಕರಣದಲ್ಲಿ ಕಾನ್ಸ್ಟೆಬಲ್ ಹುದ್ದೆ ನೀಡಬೇಕು ಎಂದು ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು. ಅಲ್ಲದೇ, ಈ ತೀರ್ಪಿನಿಂದ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನಾಲ್ಕು ವಾರದೊಳಗೆ ಅಧಿಕೃತ ಪತ್ರ ಕಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮೀಸಲಾತಿ ವರ್ಗದ ಸ್ಥಾನಗಳಲ್ಲಿ ಅಭ್ಯರ್ಥಿಗಳ ಲಭ್ಯತೆ ಇರದಿದ್ದಾಗ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಆ ಸ್ಥಾನಗಳನ್ನು ಹಂಚಬಹುದಾದರೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅರ್ಹತೆ ಹೊಂದಿರುವ ಮೀಸಲು ಅಭ್ಯರ್ಥಿಗಳನ್ನು ಏಕೆ ಪರಿಗಣಿಸಬಾರದು ಎಂದು ಕೋರ್ಟ್ ಪ್ರಶ್ನಿಸಿದೆ.
‘ಸಾಮಾನ್ಯ ವರ್ಗದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಕೇವಲ ಮೆರಿಟ್ ಆಧಾರದ ಮೇಲೆ ಮಾತ್ರ ಸ್ಥಾನಗಳ ಹಂಚಿಕೆ ಆಗಬೇಕು. ಅರ್ಹ ಮೀಸಲು ಅಭ್ಯರ್ಥಿಗಳಿಗೆ ಮೀಸಲಾತಿ ಮತ್ತು ಸಾಮಾನ್ಯ ವರ್ಗಗಳೆರಡರಲ್ಲೂ ಅವಕಾಶ ಒದಗಿಸಬೇಕು’ ಎಂದು ನ್ಯಾಯಾಧೀಶ ರವೀಂದ್ರ ಭಟ್ ಅಭಿಪ್ರಾಯಪಟ್ಟರು.
Published On - 4:05 pm, Sun, 20 December 20