AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sarla Maheshwari Death: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ನಿಧನ

ದೂರದರ್ಶನದ ಹಿರಿಯ ನಿರೂಪಕಿ, ಹಲವು ತಲೆಮಾರುಗಳ ಮೇಲೆ ಪ್ರಭಾವ ಬೀರಿದ್ದ ದೂರದರ್ಶನದ ಐಕಾನಿಕ್ ನ್ಯೂಸ್ ರೀಡರ್ ಸರಳ ಮಹೇಶ್ವರಿ ಇಂದು ನಿಧನರಾಗಿದ್ದಾರೆ. ಶಾಂತ ನಡವಳಿಕೆ, ಯಾವುದೇ ತಪ್ಪುಗಳಿಲ್ಲದ ಹಿಂದಿ ಉಚ್ಚಾರಣೆ ಮತ್ತು ಘನತೆಗೆ ಹೆಸರುವಾಸಿಯಾಗಿದ್ದ ಸರಳ ಮಹೇಶ್ವರಿ 1980 ಮತ್ತು 1990ರ ದಶಕಗಳಲ್ಲಿ ದೂರದರ್ಶನ (ಡಿಡಿ) ಭಾರತದ ಸುದ್ದಿಗಳ ಪ್ರಾಥಮಿಕ ಮೂಲವಾಗಿದ್ದ ಸಮಯದಲ್ಲಿ ದೇಶಾದ್ಯಂತ ಮನೆಮಾತಾಗಿದ್ದರು.

Sarla Maheshwari Death: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ನಿಧನ
Sarla Maheshwari
ಸುಷ್ಮಾ ಚಕ್ರೆ
|

Updated on: Feb 12, 2026 | 4:25 PM

Share

ನವದೆಹಲಿ, ಫೆಬ್ರವರಿ 12: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಳ ಮಹೇಶ್ವರಿ ಅವರನ್ನು ಕೇವಲ ಸುದ್ದಿ ವಾಚಕಿಯಾಗಿ ಮಾತ್ರವಲ್ಲ, ದೂರದರ್ಶನದ (Doordarshan) ಸುದ್ದಿಗಳು ಸ್ಪಷ್ಟತೆ, ಘನತೆ ಮತ್ತು ನಂಬಿಕೆಯನ್ನು ಉಳಿಸಿಕೊಂಡಿದ್ದ ಯುಗದ ಕಾಲದ ಕೊಂಡಿಯಾಗಿದ್ದರು. ಸುದ್ದಿಗೆ ಸೊಬಗು ಮತ್ತು ಸರಳತೆಯನ್ನು ನೀಡಿದ ಸಾಂಸ್ಕೃತಿಕ ವ್ಯಕ್ತಿಯಾಗಿ ಅವರನ್ನು ಸ್ಮರಿಸಲಾಗುತ್ತಿದೆ.

ಸರಳ ಮಹೇಶ್ವರಿ ಅವರ ಕಾಲದಲ್ಲಿ ಡಿಜಿಟಲ್ ಮಾಧ್ಯಮಗಳು, ಇಡೀ ದಿನ ಸುದ್ದಿ ಪ್ರಸಾರ ಮಾಡುವ ನ್ಯೂಸ್ ಚಾನೆಲ್​ಗಳು, ಯೂಟ್ಯೂಬ್ ಚಾನೆಲ್​ಗಳು, ಸೋಷಿಯಲ್ ಮೀಡಿಯಾಗಳು ಇಲ್ಲದ ಹಿನ್ನೆಲೆಯಲ್ಲಿ ಅವರು ಓದುವ ವಾರ್ತೆಗಾಗಿ ಕೋಟ್ಯಂತರ ಜನರು ಕಾಯುತ್ತಿರುತ್ತಿದ್ದರು. ಹೀಗಾಗಿಯೇ ಅವರು ಮನೆಮಾತಾಗಿದ್ದರು.

ಸರಳ ಅವರ ನಿಧನದಿಂದಾಗಿ ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ಅವರ ವಾರ್ತಾ ವಾಚನವನ್ನು ನೋಡುತ್ತಾ ಬೆಳೆದ ವೀಕ್ಷಕರಿಂದ ಗೌರವಗಳ ಮಹಾಪೂರವೇ ಹರಿದು ಬಂದಿತು.

ಇದನ್ನೂ ಓದಿ: World Television Day 2025: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?

ದೂರದರ್ಶನದಲ್ಲಿ ಸರಳ ಮಹೇಶ್ವರಿ 1976ರಿಂದ 2005ರವರೆಗೆ ಸುಮಾರು 3 ದಶಕಗಳ ಕಾಲ ವೃತ್ತಿಯಲ್ಲಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಓದುವಾಗ ಅನೌನ್ಸರ್ ಆಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್‌ಗಳನ್ನು ನೀಡುತ್ತಿದ್ದರು. 1982ರಲ್ಲಿ ನ್ಯೂಸ್ ರೀಡಿಂಗ್ ಆರಂಭಿಸಿದರು. ಅದೇ ವೇಳೆ ಭಾರತೀಯ ದೂರದರ್ಶನದಲ್ಲಿ ಐತಿಹಾಸಿಕ ಕ್ಷಣವಾದ ಏಷ್ಯನ್ ಕ್ರೀಡಾಕೂಟದ ಮೊದಲ ಕಲರ್ ಪ್ರಸಾರ ಶುರುವಾಗಿತ್ತು. ಅವರು ಬ್ಲಾಕ್ ಆ್ಯಂಡ್ ವೈಟ್ ಟಿವಿಯಿಂದ ಕಲರ್ ಟಿವಿಯ ಬದಲಾವಣೆಯ ವೇಳೆಯೇ ನಿರೂಪಣೆ ಆರಂಭಿಸಿದ್ದರಿಂದ ಈ ಕ್ಷಣ ಅವರಿಗೆ ಹಾಗೂ ವೀಕ್ಷಕರಿಗೆ ಮಹತ್ವದ್ದಾಗಿತ್ತು. ಹೀಗಾಗಿಯೇ ಅವರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ.

ದೂರದರ್ಶನದ ಸುದ್ದಿಗಳು ಇನ್ನೂ 24 ಗಂಟೆಗಳ ಕಾಲ ಪ್ರಸಾರವಾಗದ ಸಮಯದಲ್ಲಿ ಸರಳ ಮಹೇಶ್ವರಿ ಅವರ ಅರ್ಧ ಗಂಟೆಯ ವಾರ್ತಾ ನಿರೂಪಣೆ ಬಹಳ ಪ್ರಭಾವಿ ಮತ್ತು ನಂಬಿಕೆಯನ್ನು ಉಳಿಸಿಕೊಂಡಿತ್ತು. ವೀಕ್ಷಕರು ಅವರನ್ನು ಗೌರವಾನ್ವಿತ ವ್ಯಕ್ತಿ ಎಂದು ಗೌರವಿಸುತ್ತಿದ್ದರು. ಅವರ ಸರಳತೆ ಮತ್ತು ಸುದ್ದಿಗಳನ್ನು ಓದುವ ಶೈಲಿಗೆ ಬಹಳಷ್ಟು ಅಭಿಮಾನಿಗಳಿದ್ದರು.

ಇದನ್ನೂ ಓದಿ: World Television Day 2023: ವಿಶ್ವ ದೂರದರ್ಶನ ದಿನದ ಇತಿಹಾಸ, ಪ್ರಾಮುಖ್ಯತೆ ಏನು? 

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯನ್ನು ಘೋಷಿಸಿದ ಧ್ವನಿ ಸರಳ ಮಹೇಶ್ವರಿ ಅವರದ್ದು. 1997ರಲ್ಲಿ ಅವರು ಮದರ್ ತೆರೇಸಾ ಅವರ ಅಂತ್ಯಕ್ರಿಯೆಯ ಸುದ್ದಿಯನ್ನು ಕೂಡ ಓದಿದ್ದರು. ಇವೆರಡೂ ಅವರ ವೃತ್ತಿ ಜೀವನದಲ್ಲಿ ಮಹತ್ವದ ಸಂದರ್ಭವಾಗಿತ್ತು. 1984ರಲ್ಲಿ ಪವನ್ ಮಹೇಶ್ವರಿ ಅವರನ್ನು ವಿವಾಹವಾದ ನಂತರ ಸರಳ ಅವರು ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ಅವರು ಬಿಬಿಸಿಯಲ್ಲಿ ಕೆಲಸ ಮಾಡಿದರು. ಅವರು 1988ರಲ್ಲಿ ದೂರದರ್ಶನಕ್ಕೆ ಮರಳಿದರು. 2005ರವರೆಗೂ ಬಿಬಿಸಿಯಲ್ಲಿ ಕೆಲಸ ಮಾಡಿದ್ದರು. ನಂತರ ಅವರು ಕುಟುಂಬ ಜೀವನಕ್ಕೆ ಆದ್ಯತೆ ನೀಡಲು ರಾಜೀನಾಮೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ