ಸ್ಯಾಟಲೈಟ್ ಫೋಟೋಗಳು ಲಭ್ಯವಿದೆ; ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆಂದ ಪಾಕಿಸ್ತಾನದ ಹೇಳಿಕೆ ತಳ್ಳಿಹಾಕಿದ ಭಾರತ
ಆಪರೇಷನ್ ಸಿಂಧೂರ್ ಭಯೋತ್ಪಾದಕ ಕೇಂದ್ರಗಳು ಮತ್ತು ವಾಯುನೆಲೆಗಳನ್ನು ನಾಶಪಡಿಸಿದೆ ಎಂದು ಪ್ರತಿಪಾದಿಸಿದ ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಕೆಲವು ಸುಳ್ಳು ಸುದ್ದಿಗಳನ್ನು ತಳ್ಳಿಹಾಕಿದೆ. ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಆದರೆ, ಸ್ಯಾಟಲೈಟ್ ಫೋಟೋಗಳು ಲಭ್ಯವಿದೆ. ಅವುಗಳನ್ನು ಪರಿಶೀಲಿಸಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ನವದೆಹಲಿ, ಮೇ 13: ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಇತ್ತೀಚಿನ ಹೇಳಿಕೆಗಳಿಗೆ ತೀಕ್ಷ್ಣವಾದ ಖಂಡನೆ ವ್ಯಕ್ತಪಡಿಸಿದ ಭಾರತದ ವಿದೇಶಾಂಗ ಸಚಿವಾಲಯ (MEA) ಇಂದು ಕಳೆದ ವಾರದ ಮಿಲಿಟರಿ ವಿನಿಮಯದ ಸುತ್ತಲಿನ ಇಸ್ಲಾಮಾಬಾದ್‌ನ ಹೇಳಿಕೆಯನ್ನು ತಳ್ಳಿಹಾಕಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ನಿಖರ ದಾಳಿಯ ಸಮಯದಲ್ಲಿ ಪಾಕಿಸ್ತಾನದ ವಾಯುನೆಲೆಗಳು ಮತ್ತು ಭಯೋತ್ಪಾದಕ ಮೂಲಸೌಕರ್ಯಗಳು ನಾಶವಾಗಿವೆ ಎಂದು ದೃಢವಾಗಿ ಹೇಳಿದೆ. ಇದರ ಸ್ಯಾಟಲೈಟ್ ಫೋಟೋಗಳು ಲಭ್ಯವಿದ್ದು, ಅದನ್ನು ಪರಿಶೀಲಿಸಬಹುದು ಎಂದು ಹೇಳಿದೆ.
“ಕಳೆದ ವಾರ ಆಪರೇಷನ್ ಸಿಂಧೂರ್ ಪರಿಣಾಮವಾಗಿ ಪಾಕಿಸ್ತಾನದ ಬಹಾವಲ್ಪುರ್, ಮುರಿಯ್ಕೆ, ಮುಜಫರಾಬಾದ್ ಮತ್ತು ಇತರ ಸ್ಥಳಗಳಲ್ಲಿನ ಭಯೋತ್ಪಾದಕ ಕೇಂದ್ರಗಳು ನಾಶವಾಗಿವೆ. ನಂತರ, ಅದರ ಮಿಲಿಟರಿ ಸಾಮರ್ಥ್ಯಗಳನ್ನು ನಾವು ಗಮನಾರ್ಹವಾಗಿ ದುರ್ಬಲಗೊಳಿಸಿದ್ದೇವೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸಿದ್ದೇವೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಇವುಗಳನ್ನೇ ತಮ್ಮ ಸಾಧನೆಗಳೆಂದು ಬಿಂಬಿಸಲು ಬಯಸಿದರೆ ಅವರು ಹಾಗೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ” ಎಂದು ವಿದೇಶಾಂಗ ಸಚಿವಾಲಯದ ವಕ್ತಾಋ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ಡ್ರೋನ್, ಕ್ಷಿಪಣಿಗಳ ಬಗ್ಗೆ ಯೋಚಿಸಿದರೂ ಪಾಕಿಸ್ತಾನಕ್ಕೆ ನಿದ್ರೆ ಬರುವುದಿಲ್ಲ; ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಮೋದಿ
“ಮೇ 9ರ ರಾತ್ರಿಯವರೆಗೆ, ಪಾಕಿಸ್ತಾನವು ಭಾರತಕ್ಕೆ ಭಾರಿ ದಾಳಿಯ ಬೆದರಿಕೆ ಹಾಕುತ್ತಿತ್ತು. ಮೇ 10ರ ಬೆಳಿಗ್ಗೆ ಅವರ ಪ್ರಯತ್ನ ವಿಫಲವಾದಾಗ ಮತ್ತು ಭಾರತದ ವಿನಾಶಕಾರಿ ಪ್ರತಿದಾಳಿಯನ್ನು ಕಂಡು ಅವರು ಕದನವಿರಾಮಕ್ಕೆ ನಮ್ಮನ್ನು ಸಂಪರ್ಕಿಸಿದರು” ಎಂದು ಅವರು ಹೇಳಿದರು. ಹಾಗೇ, “ಗುಂಡು ಹಾರಿಸುವುದನ್ನು ನಿಲ್ಲಿಸುವ ನಿಯಮಗಳನ್ನು ಮಾತುಕತೆ ನಡೆಸಲು ಯಾರು ಯಾರನ್ನು ಕರೆದರು ಎಂಬುದನ್ನು ನೀವು ನೋಡಬೇಕು” ಎಂದಿದ್ದಾರೆ.
ಭಾರತೀಯ ಆಸ್ತಿಗಳಿಗೆ ಭಾರೀ ಹಾನಿಯನ್ನುಂಟುಮಾಡಿದೆ ಎಂಬ ಪಾಕಿಸ್ತಾನದ ಹೇಳಿಕೆಗೆ ಪ್ರತಿವಾದ ಮಂಡಿಸಿದ ಜೈಸ್ವಾಲ್, “ಸ್ಯಾಟಲೈಟ್ ಚಿತ್ರಗಳು ಕಮರ್ಷಿಯಲ್ ಆಗಿ ಲಭ್ಯವಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಪಾಕಿಸ್ತಾನ ದಾಳಿ ಮಾಡಿದೆ ಎಂದು ಹೇಳಿಕೊಳ್ಳುವ ಸ್ಥಳಗಳನ್ನು ನೋಡುವಂತೆ ನಾನು ನಿಮ್ಮನ್ನು ಮನವಿ ಮಾಡುತ್ತೇನೆ. ನಾವು ಯಶಸ್ವಿಯಾಗಿ ಗುರಿಯಿಟ್ಟು ನಾಶಪಡಿಸಿದ ಸ್ಥಳಗಳೊಂದಿಗೆ ಅದನ್ನು ಹೋಲಿಕೆ ಮಾಡಿ. ಅದು ನಿಮಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.” ಎಂದಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲ ನಿಲ್ಲುವವರೆಗೆ ಸಿಂಧೂ ಜಲ ಒಪ್ಪಂದ ಸ್ಥಗಿತ; ವಿದೇಶಾಂಗ ಸಚಿವಾಲಯ ಪುನರುಚ್ಛಾರ
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಭಾರತದ ಮೂರು ರಫೇಲ್ ಯುದ್ಧ ವಿಮಾನಗಳು ಸೇರಿದಂತೆ ಐದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲು ಚೀನಾ ನಿರ್ಮಿತ ಜೆಟ್‌ಗಳನ್ನು ಬಳಸಿದ್ದಾಗಿ ಹೇಳಿದ್ದರು. ಭಾರತ ಈ ಹೇಳಿಕೆಯನ್ನು ದೃಢಪಡಿಸಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








