ಪತ್ನಿಗೆ ‘ಸ್ಟುಪಿಡ್’, ‘ವೇಸ್ಟ್‌’ ಎಂದಿದ್ದಕ್ಕೆ ಗಂಡನ ಮೇಲೆ ವರದಕ್ಷಿಣೆ ಕೇಸ್ ಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪತ್ನಿಯನ್ನು 'ಸ್ಟುಪಿಡ್' ಅಥವಾ 'ವೇಸ್ಟ್' ಎನ್ನುವುದು ಐಪಿಸಿ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೆನಡಾದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿಯ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಕೇಸ್‌ಗಳನ್ನು ರದ್ದುಗೊಳಿಸಿ, ಆಧಾರರಹಿತ ವಿಚಾರಣೆ ಕಾನೂನಿನ ದುರುಪಯೋಗ ಎಂದಿದೆ.

ಪತ್ನಿಗೆ ‘ಸ್ಟುಪಿಡ್’, ‘ವೇಸ್ಟ್‌’ ಎಂದಿದ್ದಕ್ಕೆ ಗಂಡನ ಮೇಲೆ ವರದಕ್ಷಿಣೆ ಕೇಸ್ ಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಾಂದರ್ಭಿಕ ಚಿತ್ರ

Updated on: Nov 03, 2026 | 5:22 PM

ದೆಹಲಿ, ನ.3: ಪತ್ನಿಯನ್ನು “ಸ್ಟುಪಿಡ್” ಹಾಗೂ “ವೇಸ್ಟ್, ಉಪಯೋಗವಿಲ್ಲದವಳು” ಎಂದು ಕರೆಯುವುದು ಅಥವಾ ಕಟು ಮಾತುಗಳನ್ನಾಡುವುದು ಗಂಡನ ಸ್ವಭಾವವನ್ನು ತೋರಿಸುತ್ತದೆಯೇ ವಿನಃ, ಅದು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ‘ದೌರ್ಜನ್ಯ’ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಎನಿಸಿಕೊಳ್ಳುವುದಿಲ್ಲ ಎಂದು ಭಾರತದ ಅತ್ಯುನ್ನತ ನ್ಯಾಯಾಲಯ ಮಹತ್ವದ ವೀಕ್ಷಣೆ ಮಾಡಿದೆ. ಕೆನಡಾದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿಯ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಕೇಸ್‌ಗಳನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ದ್ವಿಪೀಠವು ಈ ಪ್ರಮುಖ ತೀರ್ಪು ನೀಡಿದೆ.

2021ರಲ್ಲಿ ವಿವಾಹವಾಗಿದ್ದ ಈ ದಂಪತಿ 2022ರಲ್ಲಿ ಕೆನಡಾದ ಟೊರಾಂಟೋಗೆ ತೆರಳಿದ್ದರು. 2023ರಲ್ಲಿ ಪತ್ನಿ ತಂಗಿದ್ದ ಅಪಾರ್ಟ್‌ಮೆಂಟ್‌ನ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. “ನಾನು ಜೀವನದಲ್ಲಿ ಸೋತಿದ್ದೇನೆ. ವರ್ಷ ಕಳೆದರೂ ಸೂಕ್ತ ಕೆಲಸ ಸಿಗದೆ ಪರದಾಡುತ್ತಿದ್ದೇನೆ. ಬದುಕಲು ಇಷ್ಟವಿಲ್ಲದೆ ಹೋಗುತ್ತಿದ್ದೇನೆ,” ಎಂದು ಪತ್ನಿ ಕೈಬರಹದ ಡೆತ್‌ನೋಟ್‌ ಬರೆದಿಟ್ಟು ಸಾವನ್ನಪ್ಪಿದ್ದರು. ಮಗಳ ತಂದೆ ಗಂಡ ಹಾಗೂ ಆತನ ಕುಟುಂಬದ ವಿರುದ್ಧ 15 ತೊಲ ಚಿನ್ನಾಭರಣ ವರದಕ್ಷಿಣೆ ಕೇಳಿದ್ದಾರೆ ಹಾಗೂ ಪತಿಗೆ ಮಗಳನ್ನು “ಸ್ಟುಪಿಡ್ ಮತ್ತು ಯೂಸ್‌ಲೆಸ್” ಎಂದು ಬೈದು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಭಾರತದಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: ಕರಾವಳಿ ಕಡಲತೀರಗಳ ಸ್ವಚ್ಛತೆಗೆ ‘K-SHORE’ ಮೆಗಾ ಪ್ಲಾನ್: ಮಂಗಳೂರು, ಕಾರವಾರದ ಪ್ರಸಿದ್ಧ ಬೀಚ್‌ಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿದ್ಧತೆ

ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ಅಂಶಗಳು:

“ಗಂಡನ ವೈಯಕ್ತಿಕ ಕೋಪ ಅಥವಾ ಸ್ವಭಾವದ ತೊಂದರೆಯನ್ನು ಅಪರಾಧಿಕ ಬೆದರಿಕೆ ಅಥವಾ ತೀವ್ರ ಗಾಯಗೊಳಿಸುವ ಯತ್ನ ಎಂದು ಪರಿಗಣಿಸಿ ಆತ್ಮಹತ್ಯೆಗೆ ಕಾರಣ ಎಂದು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ,” ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಮದುವೆ ವೇಳೆ ನೀಡಲಾದ 15 ತೊಲ ಚಿನ್ನವನ್ನು ಮಗಳು ಮತ್ತು ಅಳಿಯಂದಿರಿಬ್ಬರಿಗೂ ಗಿಫ್ಟ್ ಆಗಿ ನೀಡಲಾಗಿತ್ತು. ಭಾರತೀಯ ಸಂಪ್ರದಾಯದಲ್ಲಿ ನೀಡುವ ಉಡುಗೊರೆಯನ್ನು ಬೇಡಿಕೆಯಿಟ್ಟು ಪಡೆದ ‘ವರದಕ್ಷಿಣೆ’ ಎನ್ನಲಾಗುವುದಿಲ್ಲ.

ಕೆನಡಾ ಪೊಲೀಸರ ತನಿಖಾ ವರದಿ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಘಟನೆ ನಡೆದಾಗ ಪತಿ ಸ್ಥಳದಲ್ಲಿರಲಿಲ್ಲ. ಡೆತ್‌ನೋಟ್‌ನಲ್ಲಿಯೂ ಪತಿ ಅಥವಾ ಆತನ ಕುಟುಂಬದ ಯಾವುದೇ ಕಿರುಕುಳದ ಉಲ್ಲೇಖವಿರಲಿಲ್ಲ. ಬೊಂಬಾಯಿ ಹೈಕೋರ್ಟ್ ಆದೇಶವನ್ನು ಬದಿಗೊತ್ತಿದ ಸುಪ್ರೀಂ ಕೋರ್ಟ್, ಆಧಾರರಹಿತವಾಗಿ ವಿಚಾರಣೆ ಮುಂದುವರಿಸುವುದು ಕಾನೂನಿನ ದುರುಪಯೋಗ ಎಂದು ಅಭಿಪ್ರಾಯಪಟ್ಟು ಪತಿಯ ಮೇಲಿದ್ದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Tue, 3 November 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us