AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಕಡಲತೀರಗಳ ಸ್ವಚ್ಛತೆಗೆ ‘K-SHORE’ ಮೆಗಾ ಪ್ಲಾನ್: ಮಂಗಳೂರು, ಕಾರವಾರದ ಪ್ರಸಿದ್ಧ ಬೀಚ್‌ಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿದ್ಧತೆ

ಕರ್ನಾಟಕ ಸರ್ಕಾರವು ಕರಾವಳಿ ಪ್ರವಾಸೋದ್ಯಮ ಉತ್ತೇಜಿಸಲು ಹಾಗೂ ಸಮುದ್ರ ಜಲಚರ ರಕ್ಷಣೆಗೆ 'ಕೆ-ಶೋರ್' ಯೋಜನೆಯನ್ನು ರೂಪಿಸಿದೆ. ಸಸಿಹಿತ್ಲು ಮತ್ತು ಠಾಗೋರ್ ಬೀಚ್‌ಗಳಿಗೆ ಪ್ರತಿಷ್ಠಿತ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆಯುವುದು ಇದರ ಮುಖ್ಯ ಗುರಿ. ಕಡಲತೀರ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮತ್ತು ಮೀನುಗಾರರಿಗೆ ಪ್ರೋತ್ಸಾಹಧನ ನೀಡಿ, ರಾಜ್ಯದ ಕರಾವಳಿ ಭಾಗವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಲು ಸರ್ಕಾರ ಸಿದ್ಧತೆ ನಡೆಸಿದೆ.

ಕರಾವಳಿ ಕಡಲತೀರಗಳ ಸ್ವಚ್ಛತೆಗೆ 'K-SHORE' ಮೆಗಾ ಪ್ಲಾನ್: ಮಂಗಳೂರು, ಕಾರವಾರದ ಪ್ರಸಿದ್ಧ ಬೀಚ್‌ಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿದ್ಧತೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 03, 2026 | 4:53 PM

Share

ಬೆಂಗಳೂರು, ನ. 3: ರಾಜ್ಯದ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ಸಮುದ್ರ ಜಲಚರಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಬಿಗ್ ಪ್ಲಾನ್ ರೂಪಿಸಿದೆ. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಾದ ಮಂಗಳೂರಿನ ಸಸಿಹಿತ್ಲು ಬೀಚ್ ಹಾಗೂ ಕಾರವಾರದ ಠಾಗೋರ್ ಬೀಚ್‌ಗಳಿಗೆ ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಅಂತಾರಾಷ್ಟ್ರೀಯ ಪ್ರಮಾಣಪತ್ರ ಗಿಟ್ಟಿಸಲು ‘ಕೆ-ಶೋರ್’ (K-SHORE – Karnataka Surface Sustainable Harvest of Ocean Resources) ಯೋಜನೆಯಡಿ ಭಾರಿ ಸಿದ್ಧತೆ ನಡೆಸಲಾಗಿದೆ.

ಈ ಕುರಿತು ಅರಣ್ಯ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ (RDPR) ಇಲಾಖೆಗಳು ಜಂಟಿಯಾಗಿ ವಿಸ್ತೃತ ಪ್ರಸ್ತಾವನೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ.

ಏನಿದು K-SHORE ಯೋಜನೆ? ಇದರಿಂದ ಏನು ಲಾಭ?

ಕಡಲತೀರದ ಸ್ವಚ್ಛತೆ, ಜಲಚರಗಳ ರಕ್ಷಣೆ ಹಾಗೂ ಕರಾವಳಿ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ಕಾರ್ಯಪಡೆ ರಚಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಮುದ್ರದಲ್ಲಿ ಪ್ಲಾಸ್ಟಿಕ್ ಹಾಗೂ ಮೀನುಗಾರರು ಬಿಟ್ಟುಹೋದ ಹಳೆಯ ಬಲೆಗಳು ಸಮುದ್ರ ಜೀವಿಗಳಿಗೆ ಕಂಟಕವಾಗಿವೆ. K-SHORE ಯೋಜನೆಯಡಿ ಈ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಮೀನುಗಾರರು ಸಮುದ್ರದಿಂದ ಹಿಂತಿರುಗುವಾಗ ಸಂಗ್ರಹಿಸಿ ತರುವ ಪ್ಲಾಸ್ಟಿಕ್ ಹಾಗೂ ಬಲೆಗಳ ತ್ಯಾಜ್ಯಕ್ಕೆ ತಕ್ಕಂತೆ ಅವರಿಗೆ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹಧನ ನೀಡುವ ವಿನೂತನ ಮಾದರಿಯನ್ನು ರೂಪಿಸಲಾಗುತ್ತಿದೆ. ಕರಾವಳಿ ಭಾಗದ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ತ್ಯಾಜ್ಯ ನಿರ್ವಹಣೆ ಹಾಗೂ ಕಡಲತೀರಗಳ ನೈರ್ಮಲ್ಯೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: ಕೊಪ್ಪಳದ ರೈತನ ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು

ಕರ್ನಾಟಕದಲ್ಲಿ ಈಗಾಗಲೇ ಇವೆ 2 ಬ್ಲೂ ಫ್ಲ್ಯಾಗ್ ಬೀಚ್‌ಗಳು:

ವಿಶ್ವಸಂಸ್ಥೆ ಮಾನ್ಯತೆ ಹೊಂದಿರುವ ಡೆನ್ಮಾರ್ಕ್‌ನ ‘ಫೌಂಡೇಶನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಶನ್’ (FEE) ಸಂಸ್ಥೆಯು ನೀರು, ಸ್ವಚ್ಛತೆ, ಸುರಕ್ಷತೆ ಹಾಗೂ ಪರಿಸರ ಜಾಗೃತಿ ಸೇರಿದಂತೆ 33 ಕಠಿಣ ಮಾನದಂಡಗಳನ್ನು ಪೂರೈಸುವ ಬೀಚ್‌ಗಳಿಗೆ ‘ಬ್ಲೂ ಫ್ಲ್ಯಾಗ್’ ಗೌರವ ನೀಡುತ್ತದೆ. ಭಾರತದಲ್ಲಿ ಪ್ರಸ್ತುತ ಒಟ್ಟು 18 ಬ್ಲೂ ಫ್ಲ್ಯಾಗ್ ಬೀಚ್‌ಗಳಿದ್ದು, ಈ ಪೈಕಿ ಕರ್ನಾಟಕದ ಉಡುಪಿಯ ಪಡುಬಿದ್ರಿ ಹಾಗೂ ಉತ್ತರ ಕನ್ನಡ ಹೊನ್ನಾವರದ ಕಾಸರಕೋಡು (Eco Beach) ಈಗಾಗಲೇ ಈ ಗೌರವಕ್ಕೆ ಪಾತ್ರವಾಗಿವೆ. ಇದೀಗ ಸಸಿಹಿತ್ಲು ಹಾಗೂ ಠಾಗೋರ್ ಬೀಚ್‌ಗಳು ಈ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More