ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಕಾಣಿಸಿಕೊಂಡ್ತು ವೈಟ್ ಫಂಗಸ್; ಜನರಲ್ಲಿ ಹೆಚ್ಚಿದ ಆತಂಕ
ವೈಟ್ ಫಂಗಸ್ ಸೋಂಕು, ಬ್ಲ್ಯಾಕ್ ಫಂಗಸ್ಗಿಂತ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ. ಏಕೆಂದರೆ, ವೈಟ್ ಫಂಗಸ್ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ ಮತ್ತ್ತು ಅದರಿಂದ ಕಣ್ಣು, ಉಗುರು, ಮೆದುಳು, ಚರ್ಮ, ಕಿಡ್ನಿ, ಬಾಯಿ, ಮೂಗು ಹಾಗೂ ವ್ಯಕ್ತಿಗಳ ಗುಪ್ತಾಂಗಗಳ ಮೇಲೂ ತೀವ್ರ ಸ್ವರೂಪದ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ನವದೆಹಲಿ: ದೇಶದಲ್ಲಿ ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಕೊರೊನಾದಿಂದ ಗುಣಮುಖ ಆದವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ . ಈ ಸೋಂಕಿಗೆ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಇದರ ಮಧ್ಯೆಯೇ ದೇಶದಲ್ಲಿ ಈಗ ವೈಟ್ ಫಂಗಸ್ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ ಬಿಹಾರದ ನಾಲ್ವರಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ.
ದೇಶದಲ್ಲಿ ಕೊರೊನಾ ವೈರಸ್ ಸೃಷ್ಟಿಸಿರುವ ಹಾಹಾಕಾರದ ಜೊತೆಗೆ ಕೆಲ ಹೊಸ ಆರೋಗ್ಯ ಸಮಸ್ಯೆಗಳು ಜನರಿಗೆ ಪೀಡಿಸಲಾರಂಭಿಸಿವೆ. ಕೊರೊನಾ ವೈರಸ್‌ನ ತಂದೊಡ್ಡಿರುವ ಸಂಕಷ್ಟದಿಂದ ಜನರಿಗೆ ಇನ್ನೂ ಬಿಡುಗಡೆ ಸಿಗದ ಸಮಯದಲ್ಲೇ ಕೊರೊನಾದಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲುತ್ತಿದೆ. ದೇಶದಲ್ಲಿ ಸುಮಾರು ಐದು ಸಾವಿರ ಮಂದಿ ಬ್ಲ್ಯಾಕ್ ಫಂಗಸ್ ರೋಗಿಗಳಿದ್ದಾರೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ 1,500 ಮಂದಿ ರೋಗಿಗಳಿದ್ದು ಇವರ ಪೈಕಿ 350 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಜರಾತ್ ನ ಐದು ನಗರಗಳ ಎಂಟು ಆಸ್ಪತ್ರೆಗಳಲ್ಲಿ 1,163 ಜನ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದು ಸಾಲದೆಂಬಂತೆ ಈಗ ಬ್ಲ್ಯಾಕ್ ಫಂಗಸ್ ಪೀಡೆಯ ಜೊತೆಗೆ ವೈಟ್ ಫಂಗಸ್ ಸಹ ಭಾರತದಲ್ಲಿ ಕಾಣಿಸಿಕೊಂಡಿದೆ.
ವೈಟ್ ಫಂಗಸ್ ಸೋಂಕು, ಬ್ಲ್ಯಾಕ್ ಫಂಗಸ್ಗಿಂತ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ. ಏಕೆಂದರೆ, ವೈಟ್ ಫಂಗಸ್ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ ಮತ್ತ್ತು ಅದರಿಂದ ಕಣ್ಣು, ಉಗುರು, ಮೆದುಳು, ಚರ್ಮ, ಕಿಡ್ನಿ, ಬಾಯಿ, ಮೂಗು ಹಾಗೂ ವ್ಯಕ್ತಿಗಳ ಗುಪ್ತಾಂಗಗಳ ಮೇಲೂ ತೀವ್ರ ಸ್ವರೂಪದ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರಲ್ಲಿ ವೈಟ್ ಫಂಗಸ್ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥ ಡಾಕ್ಟರ್ ಎಸ್.ಎನ್.ಸಿಂಗ್ ಹೇಳಿದ್ದಾರೆ. ನಾಲ್ವರಲ್ಲಿ ಒಬ್ಬರು ಪಾಟ್ನಾದ ಪ್ರಸಿದ್ಧ ವೈದ್ಯರಾಗಿದ್ದಾರೆ. ಕೊವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುವಾಗ ಎಲ್ಲ ನಾಲ್ವರು ಆಕ್ಸಿಜನ್ ಸಪೋರ್ಟ್ ಮೇಲಿದ್ದರು ಎನ್ನುವುದು ಗಮನಿಸಬೇಕಾದ ಅಂಶ.
ಸೋಂಕಿತ ವ್ಯಕ್ತಿಯ ಎಚ್‌ಆರ್ ಸಿಟಿ ಸ್ಕ್ಯಾನ್ ಮಾಡಿದಾಗ, ಈ ವೈಟ್ ಫಂಗಸ್ ತಗುಲಿರುವುದು ಪತ್ತೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಪಾಟ್ನಾದಲ್ಲಿ ವೈಟ್ ಫಂಗಸ್ ಸೋಂಕು ತಗುಲಿರುವ ನಾಲ್ವರಲ್ಲೂ ಕೊರೊನಾ ವೈರಸ್ ಲಕ್ಷಣಗಳಿವೆ. ಅವರಲ್ಲಿ ಸೋಂಕು ದೃಢಪಟ್ಟಿಲ್ಲವಾದರೂ ಅವರೆಲ್ಲರ ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಟೆಸ್ಟಿಂಗ್ ಬಳಿಕ ಆ್ಯಂಟಿ ಫಂಗಲ್ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ನಂತೆ ವೈಟ್ ಫಂಗಸ್ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬಹಳ ಅಪಾಯಕಾರಿ. ಡಯಾಬೀಟಿಸ್ ರೋಗಿಗಳು, ಸ್ಟಿರಾಯ್ಡ್ ತೆಗೆದುಕೊಳ್ಳುತ್ತಿರುವವರಿಗೆ ವೈಟ್ ಫಂಗಸ್ ಸೋಂಕು ತಗುಲುವ ಸಾಧ್ಯತೆ ಇರುತ್ತೆ. ಕ್ಯಾನ್ಸರ್ ರೋಗಿಗಳು ಕೂಡ ವೈಟ್ ಫಂಗಸ್ ಬಗ್ಗೆ ಎಚ್ಚರದಿಂದ ಇರಬೇಕು. ವೈಟ್ ಫಂಗಸ್ ಮಹಿಳೆಯರು, ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.
ವೈಟ್ ಫಂಗಸ್ ಅನ್ನು ತಡೆಯಲು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಪೋರ್ಟ್ನಲ್ಲಿರುವವರ, ಆಕ್ಸಿಜನ್ ಮಾಸ್ಕ್ ಹಾಗೂ ವೆಂಟಿಲೇಟರ್ಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು ಎಂದು ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಯ ಬಯೋಲಾಜಿ ವಿಭಾಗದ ಮುಖ್ಯಸ್ಥ ಡಾಕ್ಟರ್ ಎಸ್.ಎನ್. ಸಿಂಗ್ ಹೇಳಿದ್ದಾರೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯ ಡಾಕ್ಟರ್ ಶ್ಯಾಮ್ ಅವರು ಈ ವೈಟ್ ಫಂಗಸ್ ಅನ್ನು ಕ್ಯಾಂಡಿಡಾ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಕ್ಯಾಂಡಿಡಾ ಕೂಡ ಒಂದು ಫಂಗಸ್. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ವೈಟ್ ಫಂಗಸ್ ಕಾಣಿಸಿಕೊಳ್ಳುತ್ತೆ. ಮೂಗಿನ ಮತ್ತು ಫುಡ್ ಪೈಪ್ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಸರಿಯಾದ ಸಮಯದಲ್ಲಿ ಅದನ್ನು ತಡೆಯದಿದ್ದರೆ, ಇಡೀ ದೇಹವನ್ನು ಆವರಿಸಿಕೊಳ್ಳುತ್ತೆ ಎಂದು ಟಿವಿ9ನೊಂದಿಗೆ ಮಾತಾಡುತ್ತಾ ಡಾ. ಶ್ಯಾಮ್ ಹೇಳಿದ್ದಾರೆ.
ವೈಟ್ ಫಂಗಸ್ ಸೋಂಕಿಗೂ ಅಂಫೋಟೆರಿಸಿನ್ ಬಿ ಡ್ರಗ್, ಮಿಕ ಫಂಜಿನ್, ಕ್ಯಾಸ್ಟ್ರೋ ಫಂಜಿನ್, ಬೋರಿಕನಾ ಜೋಲ್ ಸೇರಿದಂತೆ ಆ್ಯಂಟಿ ಫಂಗಲ್ ಡ್ರಗ್ಗಳ ಮೂಲಕ ರೋಗಿಗೆ ಚಿಕಿತ್ಸೆ ನೀಡಬೇಕು ಎಂದು ಡಾಕ್ಟರ್ ಶ್ಯಾಮ್ ಹೇಳಿದ್ದಾರೆ.
ಇದನ್ನೂ ಓದಿ: Black Fungus: ಒಡಿಶಾದಲ್ಲಿ ಮ್ಯೂಕೋಮೈಕೋಸಿಸ್ ಮೊದಲ ಪ್ರಕರಣ ಪತ್ತೆ; ಕೊರೊನಾಗೆ ತುತ್ತಾಗಿದ್ದ ವೃದ್ಧ ವ್ಯಕ್ತಿಗೆ ಸೋಂಕು
Published On - 5:33 pm, Thu, 20 May 21