
ನವದೆಹಲಿ, ಆಗಸ್ಟ್ 22: ತಮ್ಮ ರಾಜೀನಾಮೆಗೆ ತೀವ್ರ ಒತ್ತಾಯ ಕೇಳಿಬರುತ್ತಿರುವ ಮಧ್ಯೆಯೇ ತಮ್ಮ ದೀರ್ಘಾವಧಿಯ ಅಧಿಕಾರವನ್ನು ಸಮರ್ಥಿಸಿಕೊಂಡಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಈ ಶಾಸನಬದ್ಧ ಸಂಸ್ಥೆಯ ಸದಸ್ಯರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವುದರಿಂದಲೇ ನಾನು ಈ ಹುದ್ದೆಯಲ್ಲಿ ಮುಂದುವರಿದಿದ್ದೇನೆ ಎಂದು ಹೇಳಿದ್ದಾರೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾವನ್ನು ಅಡ್ವೊಕೇಟ್ಸ್ ಕಾಯ್ದೆಯಡಿ ಸ್ಥಾಪಿಸಲಾಗಿದ್ದು, ಒಬ್ಬ ವ್ಯಕ್ತಿ ಎಷ್ಟು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಬಹುದು ಎಂಬುದಕ್ಕೆ ಕಾನೂನಿನಲ್ಲಿ ಯಾವುದೇ ಮಿತಿ ಇಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಪ್ರಸ್ತುತ ಅವಧಿಯು ನನ್ನ 7ನೇ ಅವಧಿಯಾಗಿದ್ದು, ಹಿಂದಿನ ಆರೂ ಅವಧಿಗಳಲ್ಲಿ ತಾವು ಅವಿರೋಧವಾಗಿ ಆಯ್ಕೆಯಾಗಿದ್ದಾಗಿ ಅವರು ತಿಳಿಸಿದ್ದಾರೆ.
“ಬಾರ್ ಕೌನ್ಸಿಲ್ ಆಫ್ ಇಂಡಿಯಾ ಎನ್ನುವುದು ಅಡ್ವೊಕೇಟ್ಸ್ ಕಾಯ್ದೆಯಡಿಯಲ್ಲಿ ಸಂಸತ್ತು ರಚಿಸಿದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಪ್ರಸ್ತುತ ಕಾಯ್ದೆಯು ಅಧ್ಯಕ್ಷರ ಅಧಿಕಾರಾವಧಿಯ ಮೇಲೆ ಯಾವುದೇ ರೀತಿಯ ಮಿತಿಯನ್ನು ವಿಧಿಸುವುದಿಲ್ಲ. ಆದ್ದರಿಂದ ಈ ಕಾಯ್ದೆಯಡಿಯೇ ನಾನು ಆಯ್ಕೆಯಾಗಿದ್ದೇನೆ. ಇದು ನನ್ನ ಏಳನೇ ಅಧಿಕಾರಾವಧಿಯಾಗಿದೆ” ಎಂದು ಮನನ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರ ವಿರುದ್ಧ 150 ಕೋಟಿ ರೂ. ಅಕ್ರಮದ ಆರೋಪ; ರಾಜೀನಾಮೆಗೆ 15 ದಿನಗಳ ಗಡುವು
ತಮ್ಮ ಸುದೀರ್ಘ ಅವಧಿಯು ಪುನರಾವರ್ತಿತ ಚುನಾವಣೆಗಳ ಫಲಿತಾಂಶವಾಗಿದೆ ಎಂದು ಹೇಳಿದ ಅವರು, ಹುದ್ದೆಯಿಂದ ಕೆಳಗಿಳಿಯುವಂತೆ ಬಂದಿರುವ ಬೇಡಿಕೆಗಳನ್ನು ನಿರಾಕರಿಸಿದ್ದಾರೆ. “ನಾನು ಆಯ್ಕೆಯಾಗಿ ಬಂದಿದ್ದಕ್ಕೇ 12ರಿಂದ 14 ವರ್ಷಗಳ ಕಾಲ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಮನನ್ ಮಿಶ್ರಾ 25 ಲಕ್ಷ ವಕೀಲರನ್ನು ಪ್ರತಿನಿಧಿಸುತ್ತಾರೆಯೇ ಹೊರತು ಸುಮ್ಮನೆ ರಾಜೀನಾಮೆ ನೀಡುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಾವಧಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ:
ಅವರ ಸುದೀರ್ಘ ಅಧಿಕಾರಾವಧಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾದ ಬೆನ್ನಲ್ಲೇ ಮಿಶ್ರಾ ಈ ಹೇಳಿಕೆಗಳನ್ನು ನೀಡಿದ್ದಾರೆ. ಅರ್ಜಿಯು ಮನನ್ ಮಿಶ್ರಾ ಅವರ ತಕ್ಷಣದ ವಜಾಗೆ, ನೂತನ ಚುನಾವಣೆಗಳಿಗೆ ಮತ್ತು ಬಿಸಿಐ ಅಧ್ಯಕ್ಷರು ಪೂರೈಸಬಹುದಾದ ಅವಧಿಗಳ ಸಂಖ್ಯೆಗೆ ಮಿತಿ ಹೇರಲು ಕೋರಿದೆ.
ಈ ವಿವಾದವು ಬಿಸಿಐ ಸಹ-ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಅವರೊಂದಿಗಿನ ಸಾರ್ವಜನಿಕ ಸಂಘರ್ಷಕ್ಕೂ ಕಾರಣವಾಗಿದ್ದು, ಸದಾಶಿವ ರೆಡ್ಡಿ ಅವರು ಮನನ್ ಮಿಶ್ರಾ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಅದಕ್ಕಾಗಿ 15 ದಿನಗಳ ಗಡುವನ್ನು ಕೂಡ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ