Sumitra Mahajan: ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಬಗ್ಗೆ ಸುಳ್ಳು ನಿಧನ ವಾರ್ತೆ ಹಂಚಿಕೊಂಡು ಕ್ಷಮೆ ಕೇಳಿದ ಶಶಿ ತರೂರ್
Shashi Tharoor: ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಸಾವಿನ ಸುದ್ದಿಯನ್ನು ಕೇಳಿ ದುಃಖಿತನಾಗಿದ್ದೇನೆ. ಅವರೊಂದಿಗಿನ ಅನೇಕ ಮಾತುಕತೆಗಳು ಈ ಹೊತ್ತಿನಲ್ಲಿ ನೆನಪಾಗುತ್ತಿವೆ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ! ಎಂಬ ಸಂದೇಶವನ್ನು ಶಶಿ ತರೂರ್ ಹಂಚಿಕೊಂಡಿದ್ದರು. ಆದರೆ, ಈ ಸುದ್ದಿ ಸುಳ್ಳಾಗಿದೆ.
ದೆಹಲಿ: ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನಿಧನರಾಗಿದ್ದಾರೆ ಎಂಬ ಸುಳ್ಳುಸುದ್ದಿಯೊಂದು ನಿನ್ನೆ (ಏಪ್ರಿಲ್ 22) ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಸುದ್ದಿಯನ್ನು ಹಂಚಿಕೊಂಡ ಕಾರಣ ಅನೇಕರು ಅದನ್ನು ನಂಬಿ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿದ ಬಿಜೆಪಿ ಪಕ್ಷವು ಸುಮಿತ್ರಾ ಮಹಾಜನ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದೆ. ಅದರ ಬೆನ್ನಲ್ಲೇ ಈ ಸುಳ್ಳು ನಿಧನ ವಾರ್ತೆಯನ್ನು ಹಂಚಿಕೊಂಡು, ಸಂತಾಪ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಕ್ಷಮೆಯಾಚಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸುಮಿತ್ರಾ ಮಹಾಜನ್ ಅವರ ಫೋಟೋವನ್ನು ಹಾಕಿಕೊಂಡು ಕೆಲ ಸಾಲುಗಳನ್ನು ಬರೆದಿದ್ದ ಶಶಿ ತರೂರ್, ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಸಾವಿನ ಸುದ್ದಿಯನ್ನು ಕೇಳಿ ದುಃಖಿತನಾಗಿದ್ದೇನೆ. ಅವರೊಂದಿಗಿನ ಅನೇಕ ಮಾತುಕತೆಗಳು ಈ ಹೊತ್ತಿನಲ್ಲಿ ನೆನಪಾಗುತ್ತಿವೆ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ! ಎಂಬ ಸಂದೇಶವೊಂದನ್ನು ಹರಿಬಿಟ್ಟಿದ್ದರು. ಇದನ್ನು ಆಧರಿಸಿ ಕೆಲ ಆಂಗ್ಲ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನೂ ಪ್ರಕಟಿಸಿದ್ದವು. ಆದರೆ, ಇದೊಂದು ಸುಳ್ಳು ಸುದ್ದಿ ಎನ್ನುವುದು ಬಹಿರಂಗವಾಗುತ್ತಿದ್ದಂತೆಯೇ ಎಲ್ಲರೂ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಕ್ಷಮೆ ಕೋರಿ ತನ್ನ ಟ್ವೀಟ್ ಡಿಲೀಟ್ ಮಾಡಿದ ಶಶಿ ತರೂರ್, ಮತ್ತೊಂದು ಟ್ವೀಟ್ನಲ್ಲಿ ನಿಧನ ಸುದ್ದಿ ಸುಳ್ಳಾಗಿರುವುದಕ್ಕೆ ಸಂತಸವಾಗಿದೆ. ಆದರೆ, ಆ ಸುದ್ದಿಯನ್ನು ಹಂಚಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಾನು ನಂಬುವ ಮೂಲದಿಂದ ವಿಷಯ ಬಂದ ಕಾರಣ ಅದನ್ನು ಹಂಚಿಕೊಂಡುಬಿಟ್ಟೆ. ಜನರು ಈ ತೆರನಾದ ಸುಳ್ಳು ಸುದ್ದಿಯನ್ನು ಹರಿಬಿಡುವುದನ್ನು ಗಮನಿಸಿದರೆ ಆತಂಕವಾಗುತ್ತದೆ ಎಂದಿದ್ದಾರೆ. ಅಲ್ಲದೇ ಇನ್ನೊಂದು ಟ್ವೀಟ್ನಲ್ಲಿ ಸತ್ಯ ಸಂಗತಿಯನ್ನು ತಿಳಿಸಿದ ಕೈಲಾಶ್ ಎಂಬುವವರಿಗೆ ಧನ್ಯವಾದ ಅರ್ಪಿಸಿರುವ ಶಶಿ ತರೂರ್, ನಾನು ನನ್ನ ಹಳೆಯ ಟ್ವೀಟ್ ಡಿಲೀಟ್ ಮಾಡಿದ್ದೇನೆ. ಸುಮಿತ್ರಾ ಮಹಾಜನ್ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
Thanks @kailashOnline. I have deleted my tweet. I wonder what motivates people to invent and spread such evil news that takes in people. My best wishes for Sumitra ji’s health and long life.
— Shashi Tharoor (@ShashiTharoor) April 22, 2021
I am relieved if that is so. I received this from what I thought was a reliable source: “पूर्व लोकसभा अध्यक्ष श्रीमती सुमित्रा महाजन जी हमारे बीच नहीं रहीं. ईश्वर दिवंगत आत्मा को अपने श्रीचरणों में स्थान दें.?” Happy to retract & appalled that anyone would make up such news. https://t.co/3c8pDGaBRv
— Shashi Tharoor (@ShashiTharoor) April 22, 2021
ಇದನ್ನೂ ಓದಿ: Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್
Published On - 8:58 am, Fri, 23 April 21