2 ತಿಂಗಳ ಸಂಚು, 27 ಬಾರಿ ಇರಿತ; ಫರೀದಾಬಾದ್ ಶಿಕ್ಷಕಿಯ ಭೀಕರ ಕೊಲೆಯ ಹಿಂದಿನ ಸತ್ಯ ಬಯಲು

ಫರೀದಾಬಾದ್‌ನ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು 21 ವರ್ಷದ ಯುವಕ ಭೀಕರವಾಗಿ ಚೂರಿಯಿಂದ ಇರಿದು ಕೊಂದಿದ್ದಾನೆ. ಆರೋಪಿ ಅಮಿತ್ ಈ ಕೊಲೆಗೆ 2 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ. ಇದಕ್ಕಾಗಿಯೇ ಚಾಕುವನ್ನು ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 28 ವರ್ಷದ ಶಿಕ್ಷಕಿ ಸಂಧ್ಯಾ ಶರ್ಮಾಳನ್ನು ಕೊಲ್ಲಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾಗಿ ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಸೋಮವಾರ ನಡೆದ ಈ ಕೃತ್ಯದಲ್ಲಿ ಸಂಧ್ಯಾ ಅವರ ಕುತ್ತಿಗೆ ಮತ್ತು ಎದೆಗೆ ಸತತವಾಗಿ 20ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯ ಭೀಕರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

2 ತಿಂಗಳ ಸಂಚು, 27 ಬಾರಿ ಇರಿತ; ಫರೀದಾಬಾದ್ ಶಿಕ್ಷಕಿಯ ಭೀಕರ ಕೊಲೆಯ ಹಿಂದಿನ ಸತ್ಯ ಬಯಲು
Faridabad Teacher Killing
Image Credit source: x

Updated on: Aug 05, 2026 | 8:22 PM

ಫರೀದಾಬಾದ್, ಆಗಸ್ಟ್ 5: ಹರಿಯಾಣದ ಫರೀದಾಬಾದ್‌ನಲ್ಲಿ ಸೋಮವಾರ ನಡೆದ 28 ವರ್ಷದ ಖಾಸಗಿ ಶಾಲಾ ಶಿಕ್ಷಕಿ ಸಂಧ್ಯಾ ಶರ್ಮಾ ಅವರ ಕೊಲೆಗೆ (Faridabad Teacher Killing) 2 ತಿಂಗಳುಗಳ ಮುಂಚಿತವಾಗಿಯೇ ಸಂಚು ರೂಪಿಸಲಾಗಿತ್ತು. ಈ ಕೃತ್ಯ ಎಸಗಲೆಂದೇ ಆರೋಪಿ ವಿಶೇಷವಾಗಿ ಚಾಕುವನ್ನು ಖರೀದಿಸಿದ್ದು, ದಾಳಿ ನಡೆಸಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ನಡೆದ ಈ ಕೃತ್ಯದಲ್ಲಿ ಸಂಧ್ಯಾ ಶರ್ಮಾ ಅವರ ಕುತ್ತಿಗೆ ಮತ್ತು ಎದೆಗೆ 27ಕ್ಕೂ ಹೆಚ್ಚು ಬಾರಿ ಇರಿಯಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ಅಮಿತ್‌ ಸಂಧ್ಯಾಳ ಬಳಿ ಪ್ರೇಮನಿವೇನದಮೆ ಮಾಡಿಕೊಂಡಿದ್ದ. ಆದರೆ ಸಂಧ್ಯಾ ಅದನ್ನು ನಿರಾಕರಿಸಿದ್ದರು. ಈ ಹಿಂದೆ ಸಂಧ್ಯಾ ಆತನ ವಿರುದ್ಧ ಕಿರುಕುಳದ ದೂರು ಕೂಡ ನೀಡಿದ್ದರು. ಇದಾದ ಬಳಿಕ ಆರೋಪಿ ಅಮಿತ್ ಕ್ಷಮೆಯಾಚಿಸಿದ್ದ. ನಂತರ ಸಂಧ್ಯಾ ತಮ್ಮ ಶಾಲೆಯನ್ನು ಮತ್ತು ಮನೆಯನ್ನು ಬದಲಾಯಿಸಿದ್ದು, ಇದರಿಂದ ಆತ ತೀವ್ರ ಆಕ್ರೋಶಗೊಂಡಿದ್ದ. ಸೋಮವಾರ ಬೆಳಿಗ್ಗೆ ಸುಮಾರು 9.30ಕ್ಕೆ ಸಿಕ್ರೋನಾ ಗ್ರಾಮದ ಶಾಲೆಗೆ ಮಾಸ್ಕ್ ಧರಿಸಿ ಬಂದ ಅಮಿತ್, ಸಂಧ್ಯಾ ಅವರ ಪತಿಯ ಹೆಸರು ಹೇಳಿ ಅವರನ್ನು ತರಗತಿಯಿಂದ ಹೊರಗೆ ಕರೆಸಿಕೊಂಡಿದ್ದ. ಆಕೆ ಹೊರಗೆ ಬರುತ್ತಿದ್ದಂತೆ ಅವರ ಕೂದಲು ಹಿಡಿದು ಮೈತುಂಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಇದನ್ನೂ ಓದಿ: ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ!

ಚಾಕುವಿನ ದಾಳಿ ನಡೆದ 2 ಗಂಟೆಗಳ ಒಳಗಾಗಿ ಕೋಟ್ ಗ್ರಾಮದ ನಿವಾಸಿಯಾದ ಆರೋಪಿ ಅಮಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ನಗರದ ನ್ಯಾಯಾಲಯವು ಆತನನ್ನು ಮೂರು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಶಿಕ್ಷಕಿ ಸಂಧ್ಯಾ ಶಾಲೆಗೆ ಹೋಗುವಾಗ ಅಥವಾ ಹಿಂತಿರುಗುವಾಗ ದಾಳಿ ಮಾಡಲು ಮೊದಲು ಯೋಜಿಸಿದ್ದೆ. ಆದರೆ, ಸಿಕ್ಕಿಬೀಳುವ ಭಯದಿಂದ ಶಾಲೆಯ ಒಳಗೇ ಹೋಗಿ ದಾಳಿ ಮಾಡಲು ನಿರ್ಧರಿಸಿದ್ದಾಗಿ ತನಿಖೆಯ ವೇಳೆ ಆರೋಪಿ ಹೇಳಿದ್ದಾನೆ.

“ಆರೋಪಿ ಎಷ್ಟೊಂದು ಆಕ್ರೋಶದಲ್ಲಿದ್ದನೆಂದರೆ, ಚಾಕು ಬಾಗಿದ ಮೇಲೆಯೂ ದಾಳಿ ಮಾಡುವುದನ್ನು ಮುಂದುವರಿಸಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕೊಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ಬೈಕ್ ಮತ್ತು ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಯುತ್ತಿದೆ. ಈ ಕೊಲೆಯ ಸಂಪೂರ್ಣ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡೆಯಲು ಬಂದ ಶಾಲೆಯ ಸಿಬ್ಬಂದಿಗೂ ಹಂತಕ ಬೆದರಿಕೆ ಹಾಕಿದ್ದ.

ಇದನ್ನೂ ಓದಿ: ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ

ಹೆಂಡತಿಯ ಕೊಲೆಯ ಬಗ್ಗೆ ಗಂಡ ಹೇಳಿದ್ದೇನು?:

ಈ ಘಟನೆಯ ಬಗ್ಗೆ ಸಂಧ್ಯಾ ಅವರ ಪತಿ ವಿಕಿ ಗುರ್ಜರ್ ಮಾತನಾಡಿ, ಸಂಧ್ಯಾ ಈ ಹಿಂದೆ ಸಿರೋಹಿ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಗ ಅಮಿತ್ ಪರಿಚಯವಾಗಿದ್ದ ಎಂದು ತಿಳಿಸಿದ್ದಾರೆ. ಈ ಹಿಂದೆ ದೂರು ನೀಡಿದಾಗಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಈ ಕೊಲೆಯನ್ನು ತಡೆಯಬಹುದಿತ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ. “ನಾವು ದೂರು ನೀಡಿದಾಗಲೇ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ, ಸಂಧ್ಯಾ ಇಂದು ಜೀವಂತವಾಗಿರುತ್ತಿದ್ದಳು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಿರೋಜ್‌ಪುರ ಗ್ರಾಮದ ವಿಕಾಸ್ ಮತ್ತು ಸಂಧ್ಯಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 7 ವರ್ಷದ ಮಗ ಮತ್ತು 5 ವರ್ಷದ ಮಗಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us