‘ಪಿಂಚಣಿದಾರರ ಸ್ವರ್ಗ’ ಕೇರಳದಲ್ಲಿ ರಾಜ್ಯಪಾಲ ಮತ್ತು ಆಡಳಿತರೂಢ ಎಲ್ ಡಿ ಎಫ್ ಸರ್ಕಾರ ನಡುವೆ ತಿಕ್ಕಾಟ ಮುಂದುವರಿದಿದೆ
ಆಡಳಿತಾರೂಢ ಸರಕಾರವೊಂದರಲ್ಲೇ 400ಕ್ಕೂ ಹೆಚ್ಚು ಇಂಥ ನೇಮಕಾತಿಗಳನ್ನು ಮಾಡಲಾಗಿದೆ. ರವಿವಾರದಂದಯ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯಪಾಲರು, ಕೇವಲ ಎರಡು ವರ್ಷಗಳಷ್ಟು ಕಡಿಮೆ ಅವಧಿ ಸೇವೆಯ ನಂತರವೂ ವೈಯಕ್ತಿಕ ಸಿಬ್ಬಂದಿ ಪಿಂಚಣಿಗೆ ಅರ್ಹರಾಗಿರುವ ಎಂಬ ಅಂಶದ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಸಚಿವರ ವೈಯಕ್ತಿಕ ಸಿಬ್ಬಂದಿಗೆ ನೀಡಲಾಗುತ್ತಿರುವ ನಿವೃತ್ತಿ ವೇತನ ಯೋಜನೆ (Contributory Pension Scheme) ವಜಾ ಮಾಡುವಂತೆ ಸೋಮವಾರ ಹೇಳಿದ ನಂತರ ಅಧಿಕಾರದಲ್ಲಿರುವ ಎಲ್ ಡಿ ಎಫ್ ಸರ್ಕಾರ ಮತ್ತು ಅವರ ನಡುವೆ ತಲೆದೋರಿರುವ ಆಡಳಿತಾತ್ಮಕ ಬಿಕ್ಕಟ್ಟ್ಟು ಮತ್ತಷ್ಟು ಬಿಗಡಾಯಿಸಿದೆ. ಅಭೂತಪೂರ್ವ ನಡೆಯೊಂದರಲ್ಲಿ ರಾಜ್ಯಪಾಲರು, ವೈಯಕ್ತಿಕ ಸಿಬಂದಿಗೆ (personal staff) ನೀಡಲಾಗುತ್ತಿರುವ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಎಲ್ಲ ಫೈಲುಗಳನ್ನು ಒಂದು ವಾರದೊಳಗೆ ತಮಗೆ ಸಲ್ಲಿಸಬೇಕೆಂದು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸೂಚಿಸಿದ್ದಾರೆ. ಸದರಿ ವಿಷಯವನ್ನು ಶನಿವಾರದಂದೇ ‘ಘೋರ ಉಲ್ಲಂಘನೆ’ ಎಂದು ಬಣ್ಣಿಸಿದ್ದ ರಾಜ್ಯಪಾಲರು ಆಡಳಿತ ಪಕ್ಷದಲ್ಲಿ ತೀವ್ರ ಸ್ವರೂಪದ ಮುಜುಗುರವನ್ನುಂಟು ಮಾಡಿದರು. ರಾಜ್ಯದಲ್ಲಿ ಸಚಿವರ ಮತ್ತು ಕ್ಯಾಬಿನೆಟ್ ದರ್ಜೆಯ ಹುದ್ದೆಯಲ್ಲಿರುವವರ ವೈಯಕ್ತಿಕ ಸಿಬ್ಬಂದಿಯ ನಿವೃತ್ತಿ ವೇತನದ ವಿಷಯ ಪ್ರಸ್ತಾಪಿಸುವ ಮೂಲಕ ಅವರು ರಾಜ್ಯ ಸರ್ಕಾರದೊಂದಿಗೆ ಮತ್ತೊಂದು ನೇರ ಹಣಾಹಣಿಯನ್ನು ಶುರುವಿಟ್ಟುಕೊಂಡಿದ್ದಾರೆ.
ವೈಯಕ್ತಿಕ ಸಿಬ್ಬಂದಿಯು ಸಾಮಾನ್ಯವಾಗಿ ಪಕ್ಷದ ಕಾರ್ಯಕರ್ತರ ನೇರ ನೇಮಕಾತಿಯಾಗಿದ್ದು ಅವರಿಗೆ ಪಿಂಚಣಿ ನೀಡುವ ಪರಿಪಾಠ, ಎಲ್ ಡಿ ಎಫ್ ಮತ್ತು ಯು ಡಿ ಎಫ್ ಸರ್ಕಾರಗಳಿಂದ 1984ರಿಂದ ಆರಂಭಗೊಂಡು ಈಗಲೂ ಮುಂದುವರೆದಿದೆ. ಮುಖ್ಯಮಂತ್ರಿ, ಅವರ ಸಂಪುಟ ಸಚಿವರು, ವಿರೋಧ ಪಕ್ಷದ ನಾಯಕ, ಸ್ಪೀಕರ್, ಉಪಸಭಾಪತಿ ಮತ್ತು ಮುಖ್ಯ ಸಚೇತಕ ಸೇರಿದಂತೆ ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ಸಾರ್ವಜನಿಕ ಸೇವೆಯಲ್ಲಿರುವವರಿಗೆಲ್ಲ ಅಡುಗೆಯವರಿಂದ ಹಿಡಿದು ಖಾಸಗಿ ಕಾರ್ಯದರ್ಶಿಯವರೆಗೆ ವೈಯಕ್ತಿಕ ಸಿಬ್ಬಂದಿಯನ್ನು ನಿಗದಿಪಡಿಸಲಾಗಿದೆ. ವೈಯಕ್ತಿಕ ಸಿಬ್ಬಂದಿಗೆ ನಿಗದಿಪಡಿಸಿದ ಪಿಂಚಣಿಯಿಂದ ಮಾತ್ರವಲ್ಲ, ಪ್ರತಿ ಸರ್ಕಾರವು ಮಾಡಿದ ನೇಮಕಾತಿಗಳ ಸಂಖ್ಯೆಯಿಂದಲೂ ರಾಜ್ಯಪಾಲರು ಅಸಮಾಧಾನಗೊಂಡಿದ್ದಾರೆ.
‘ನಾನು ಹಿಂದೆ ಕೇಂದ್ರ ಸಚಿವನಾಗಿದ್ದಾಗ ವೈಯಕ್ತಿಕ ಸಿಬ್ಬಂದಿಗಳ ಸಂಖ್ಯೆ ಕೇವಲ 11 ಅಗಿತ್ತು. ಇಲ್ಲಿ ಪ್ರತಿ ಸಚಿವ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದಾರೆ,’ ಎಂದು ಖಾನ್ ಹೇಳಿದರು.
ಆಡಳಿತಾರೂಢ ಸರಕಾರವೊಂದರಲ್ಲೇ 400ಕ್ಕೂ ಹೆಚ್ಚು ಇಂಥ ನೇಮಕಾತಿಗಳನ್ನು ಮಾಡಲಾಗಿದೆ. ರವಿವಾರದಂದಯ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯಪಾಲರು, ಕೇವಲ ಎರಡು ವರ್ಷಗಳಷ್ಟು ಕಡಿಮೆ ಅವಧಿ ಸೇವೆಯ ನಂತರವೂ ವೈಯಕ್ತಿಕ ಸಿಬ್ಬಂದಿ ಪಿಂಚಣಿಗೆ ಅರ್ಹರಾಗಿರುವ ಎಂಬ ಅಂಶದ ಬಗ್ಗೆ ಆಘಾತ ವ್ಯಕ್ತಪಡಿಸಿದರು.
‘ದೇಶದ ಯಾವುದೇ ಭಾಗದಲ್ಲಿ ಕೊ-ಟರ್ಮಿನಸ್ ಆಧಾರದ ಮೇಲೆ ನೇಮಕಗೊಂಡ ವೈಯಕ್ತಿಕ ಸಿಬ್ಬಂದಿ ನಿವೃತ್ತಿ ವೇತನಕ್ಕೆ ಅರ್ಹರಾಗುವುದಿಲ್ಲ. ಕೇರಳದಲ್ಲಿ, ಎರಡು ವರ್ಷಗಳ ನಂತರ ಒಂದು ಸೆಟ್ ಜನರನ್ನು ರಾಜೀನಾಮೆ ನೀಡುವಂತೆ ಮಾಡಲಾಗುತ್ತದೆ, ಮತ್ತು ಅವರ ಸ್ಥಾನದಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಎಲ್ಲ ಕಾರ್ಯಕರ್ತರಿಗೆ ಹಣಕಾಸಿನ ನೆರವು ಸಿಗುವಂತಾಗಬೇಕು ಅನ್ನೋದೇ ಇದರ ಹಿಂದಿನ ಉದ್ದೇಶ. ವಿಶೇಷ ವರ್ಗದವರನ್ನು ಹೊರತುಪಡಿಸಿ ಉಳಿದವರೆಲ್ಲ ಪಿಂಚಣಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಮತ್ತು ರಾಜ್ಯ ಬೊಕ್ಕಸದಿಂದ ಇವರಿಗೆ ಹಣ ಸಂದಾಯವಾಗುತ್ತಿದೆ,’ ಎಂದು ಹೇಳಿದರು.
ಜನವರಿ 2021 ರಲ್ಲಿ ಸಲ್ಲಿಸಿದ 11 ನೇ ವೇತನ ಆಯೋಗದ ವರದಿಯ ಪ್ರಕಾರ, ಪಿಂಚಣಿಗೆ ಅರ್ಹರಾಗಿರುವ ಮಾಜಿ ವೈಯಕ್ತಿಕ ಸಿಬ್ಬಂದಿಗಳ ಸಂಖ್ಯೆ 1,223. ಪಿಣರಾಯಿ ವಿಜಯನ್ ಅವರ ಹಿಂದಿನ ಸರ್ಕಾರದ ವೈಯಕ್ತಿಕ ಸಿಬ್ಬಂದಿಯನ್ನು ಸೇರಿಸಿದರೆ, ಈ ಸಂಖ್ಯೆ 1,500 ಕ್ಕೆ ಏರುತ್ತದೆ.
ಈಗಿರುವ ಯೋಜನೆಯಡಿಯಲ್ಲಿ, ಎರಡು ವರ್ಷ ಮತ್ತು ಒಂದು ದಿನದ ಅರ್ಹತಾ ಸೇವೆಯನ್ನು ಹೊಂದಿರುವ ವ್ಯಕ್ತಿಯು ಸಾಮಾನ್ಯ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಅನ್ವಯವಾಗುವಂತೆ ಕನಿಷ್ಠ ಪಿಂಚಣಿ ರೂ. 2,400 ಜೊತೆಗೆ ತುಟ್ಟಿಭತ್ಯೆ ಪರಿಹಾರ ಪಡೆಯುವ ಅರ್ಹತೆಯನ್ನೂ ಗಿಟ್ಟಿಸುತ್ತಾನೆ. ಈ ನಿಬಂಧನೆಯನ್ನು ಬಳಸಿಕೊಳ್ಳುವ ಮೂಲಕ, ಎರಡು ವ್ಯಕ್ತಿಗಳನ್ನು ಸರದಿಯ ಪ್ರಕಾರ ಒಂದು ಹುದ್ದೆಗೆ ನೇಮಿಸಿದರೆ ಇಬ್ಬರೂ ಕನಿಷ್ಠ ಮೊತ್ತದ ಪಿಂಚಣಿಗೆ ಅರ್ಹರಾಗುತ್ತಾರೆ. ಇಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಸಿಬ್ಬಂದಿ ಕನಿಷ್ಟ ಪಿಂಚಣಿ ಪಡೆಯುವ ಅರ್ಹತೆ ಗಿಟ್ಟಿಸಲು ಕನಿಷ್ಟ ನಾಲ್ಕು ಹೆಚ್ಚು ಮತ್ತು 5 ವರ್ಷಕ್ಕೆ ಸೀಮಿತಗೊಳಿಸುವ ಹಾಗೆ ನಿಯಮ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂಬ ಅಂಶವನ್ನು 11 ನೇ ವೇತನ ಆಯೋಗವು ಗಮನಿಸಿದೆ.
ವೈಯಕ್ತಿಕ ಸಿಬ್ಬಂದಿಯ ಕನಿಷ್ಠ ಪಿಂಚಣಿ 3,550 ರೂ.ಗಳಾಗಿದ್ದರೆ ಗರಿಷ್ಠ 83,400 ರೂ.ಗಳು ಎಂದು ಮೂಲಗಳು ತಿಳಿಸಿವೆ. ರಾಜ್ಯದ ಖಜಾನೆಯಿಂದ ವೈಯಕ್ತಿಕ ಸಿಬ್ಬಂದಿಗೆ ಮಾಸಿಕ ಸುಮಾರು ರೂ. 1.2 ಕೋಟಿ ವ್ಯಯಿಸಲಾಗುತ್ತಿದೆ.
ಕೇರಳ ಸರ್ಕಾರವು ಏಪ್ರಿಲ್ 1, 2013 ರಿಂದ ಸೇವೆಗೆ ಸೇರಿರುವ ಎಲ್ಲಾ ಉದ್ಯೋಗಿಗಳಿಗೆ ಕೊಡುಗೆ ಪಿಂಚಣಿ ಯೋಜನೆಯನ್ನು ಪರಿಚಯಿಸಿದ್ದರೂ, ಹೆಚ್ಚಾಗಿ ರಾಜಕೀಯ ನೇಮಕಾತಿಗಳಾದ ವೈಯಕ್ತಿಕ ಸಿಬ್ಬಂದಿಗೆ ಇದು ಎಂದಿಗೂ ಅನ್ವಯಿಸುವುದಿಲ್ಲ. ಯುಡಿಎಫ್ ಸರ್ಕಾರವು 2013 ರಲ್ಲಿ ಕೊಡುಗೆ ಪಿಂಚಣಿ ಯೋಜನೆಯನ್ನು ಪರಿಚಯಿಸಿದಾಗ, ಎಲ್ ಡಿಇ ಎಫ್ ಅದರ ಬದ್ಧ ವಿರೋಧಿಯಾಗಿತ್ತು ಮತ್ತು ಅವರು ಅಧಿಕಾರಕ್ಕೆ ಬಂದಾಗ ಅದನ್ನು ರದ್ದುಗೊಳಿಸುವುದಾಗಿ ಆಶ್ವಾಸನೆ ಸಹ ನೀಡಿತ್ತು.
ಆದಾಗ್ಯೂ, ಎಲ್‌ಡಿಎಫ್ ನೇತೃತ್ವದ ಸರ್ಕಾರವು ಅಧಿಕಾರ ವಹಿಸಿಕೊಂಡಾಗ, ಪಿಣರಾಯಿ ವಿಜಯನ್ ಸರ್ಕಾರವು ಯು-ಟರ್ನ್ ತೆಗೆದುಕೊಂಡು ಯೋಜನೆಯ ಬಗ್ಗೆ ನಿರ್ಧರಿಸಲು ಒಂದು ತಜ್ಞರ ಸಮಿತಿಯನ್ನು ನೇಮಕ ಮಾಡಿತು. ಸಮಿತಿಯು ಯೋಜನೆಯಿಂದ ಹಿಂದೆ ಸರಿಯುವುದು ಕಾರ್ಯಸಾಧುವಲ್ಲ ಎಂದು ಶಿಫಾರಸು ಮಾಡಿದೆ. ಸಿಪಿಐ (ಎಂ) ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು, ‘ವೈಯಕ್ತಿಕ ಸಿಬ್ಬಂದಿಗೆ ಪಿಂಚಣಿ ನೀಡುವ ನಿರ್ಧಾರವನ್ನು 1984 ರಲ್ಲಿ ಯುಡಿಎಫ್ ಸರ್ಕಾರ ತೆಗೆದುಕೊಂಡಿತು ಮತ್ತು ಅದರ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅದನ್ನು ಅನುಸರಿಸುತ್ತಿವೆ, ರಾಜ್ಯಪಾಲರು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ನಾವು ಆಚರಣೆಯನ್ನು ಬದಲಾಯಿಸುವುದಿಲ್ಲ,’ ಎಂದು ಬಾಲಕೃಷ್ಣನ್ ರವಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಈ ವ್ಯವಸ್ಥೆಯು ರಾಜ್ಯದಲ್ಲಿ ದುಂದುವೆಚ್ಚದ ರಾಜಕಾರಣವನ್ನು ಎತ್ತಿ ತೋರಿಸುತ್ತದೆ,’ ಎಂದು ಅರ್ಥಶಾಸ್ತ್ರಜ್ಞ ಹಾಗೂ ರಾಜ್ಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಬಿ ಎ ಪ್ರಕಾಶ್ ಹೇಳಿದ್ದಾರೆ.
‘ಸರಕಾರವು 2013ರಲ್ಲಿ ಕೊಡುಗೆ ಪಿಂಚಣಿಯಂಥ ಪ್ರಮುಖ ಬದಲಾವಣೆಯನ್ನು ಪರಿಚಯಿಸಲು ಸಾಧ್ಯವಾದರೆ, ವೈಯಕ್ತಿಕ ಸಿಬ್ಬಂದಿಗೆ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಖಂಡಿತವಾಗಿಯೂ ಸಾಧ್ಯ,’ ಎಂದು ಅವರು ಹೇಳಿದರು.
‘ಹಾಗಾಗಿ 1984 ರಿಂದ ಜಾರಿಯಲ್ಲಿರುವ ವ್ಯವಸ್ಥೆಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ ಎಂದು ಹೇಳುವುದು ತಾರ್ಕಿಕವಲ್ಲ. ಏಪ್ರಿಲ್, 2013 ರ ನಂತರ ಸೇರ್ಪಡೆಗೊಂಡ ಐಎಎಸ್ ಅಧಿಕಾರಿಗಳು ಶಾಸನಬದ್ಧ ಪಿಂಚಣಿಯನ್ನು ಆನಂದಿಸಲು ಸಾಧ್ಯವಾಗದಿದ್ದರೂ, ಪಕ್ಷದ ಕಾರ್ಯಕರ್ತರು ಪೂರ್ಣ ಲಾಭವನ್ನು ಅನುಭವಿಸುತ್ತಾರೆ. ಕೇವಲ ವೈಯಕ್ತಿಕ ಸಿಬ್ಬಂದಿ, ಸಚಿವರು, ಶಾಸಕರು ಮತ್ತು ಅವರ ಕುಟುಂಬಗಳು ವೈದ್ಯಕೀಯ ಮರುಪಾವತಿಯ ಲಾಭವನ್ನು ಅನುಭವಿಸುತ್ತಿರುವ ಪಿಂಚಣಿ ವಿಚಾರದಲ್ಲಿ ಮಾತ್ರ ಅದ್ದೂರಿತನ ನಡೆಯುತ್ತಿದೆ. ಕೇರಳದಲ್ಲಿ ಪಿಎಸ್‌ಸಿ ಸದಸ್ಯರ ಸಂಖ್ಯೆ ಯುಪಿಎಸ್‌ಸಿ ಸದಸ್ಯರಿಗಿಂತ ದ್ವಿಗುಣವಾಗಿದೆ ಮತ್ತು ಅವರು ವಸತಿ ಭತ್ಯೆ, ಕಾರುಗಳು, ವೈದ್ಯಕೀಯ ಭತ್ಯೆ ಮತ್ತು ಪಿಂಚಣಿಯಂತಹ ಎಲ್ಲಾ ಸವಲತ್ತುಗಳನ್ನು ಆನಂದಿಸುತ್ತಾರೆ,’ ಎಂದು ಪ್ರಕಾಶ್ ಹೇಳಿದರು.
2008 ರಲ್ಲಿ, ಆಗ ಆರೋಗ್ಯ ಸಚಿವೆಯಾಗಿದ್ದ ಪಿ ಕೆ ಶ್ರೀಮತಿ ಅವರು ತಮ್ಮ ಸೊಸೆಯನ್ನು ಅಡುಗೆ ಸಿಬ್ಬಂದಿಯಾಗಿ ನೇಮಿಸ ಒಂದು ವರ್ಷದೊಳಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ನೀಡಿದಾಗ ದೊಡ್ಡ ವಿವಾದ ಭುಗಿಲೆದ್ದಿತ್ತು. ಮಾಧ್ಯಮಗಳಲ್ಲಿ ಈ ವಿಷಯ ವ್ಯಾಪಕವಾಗಿ ಚರ್ಚೆಯಾಗತೊಡಗಿಂದ ಬಳಿಕ ಶ್ರೀಮತಿ ಅವರು ತನ್ನ ಸೊಸೆಯನ್ನು ತನ್ನ ವೈಯಕ್ತಿಕ ಸಿಬ್ಬಂದಿ ಹುದ್ದೆಯಿಂದ ಕೈಬಿಡಬೇಕಾಗಿತ್ತು.
ಇದನ್ನೂ ಓದಿ: ಕೇರಳ: ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿ ವಾರ್ಷಿಕ ಮಹೋತ್ಸವ ರದ್ದು ಮಾಡಿದ ಹಿಂದೂ ದೇವಾಲಯ