ತ್ಯಾಜ್ಯ ನಿರ್ವಹಣೆ ಉಲ್ಲಂಘಿಸಿದರೆ ವಿದ್ಯುತ್, ನೀರು ಕಟ್: ಮಾಲ್, ಹೋಟೆಲ್, ಅಪಾರ್ಟ್‌ಮೆಂಟ್‌ಗಳಿಗೆ ಸುಪ್ರೀಂ ಶಾಕ್
ಘನತ್ಯಾಜ್ಯ ನಿರ್ವಹಣೆ ಉಲ್ಲಂಘಿಸಿದರೆ ಮಾಲ್, ಹೋಟೆಲ್, ಅಪಾರ್ಟ್‌ಮೆಂಟ್‌ಗಳ ವಿದ್ಯುತ್, ನೀರು ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಇದು ಕೇವಲ ಪೌರಕಾರ್ಮಿಕರ ಕೆಲಸವಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದಿರುವ ಸುಪ್ರೀಂ, ರಾಜ್ಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಕಸ ವಿಂಗಡಣೆ, ಸಂಸ್ಕರಣೆ ಮಾಡದ ಬೃಹತ್ ಸಂಸ್ಥೆಗಳು ಆರು ವಾರಗಳಲ್ಲಿ ಗುರುತಿಸಲ್ಪಟ್ಟು ಕ್ರಮ ಎದುರಿಸಲಿವೆ. ನದಿ ಮಾಲಿನ್ಯ ತಡೆ ಮತ್ತು ಶಾಲಾ ಪಠ್ಯಕ್ರಮದಲ್ಲಿ ತ್ಯಾಜ್ಯ ನಿರ್ವಹಣೆ ಅಳವಡಿಸುವಂತೆ ಸೂಚಿಸಲಾಗಿದೆ.

ನವದೆಹಲಿ, ಆಗಸ್ಟ್ 20 ಘನತ್ಯಾಜ್ಯ ನಿರ್ವಹಣೆ ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸುಪ್ರೀಂ ಕೋರ್ಟ್(Supreme Court) ಮಹತ್ವದ ಆದೇಶ ಹೊರಡಿಸಿದೆ. ನಿಯಮ ಪಾಲಿಸದ ದೊಡ್ಡ ಮಾಲ್‌ಗಳು, ಹೋಟೆಲ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಬೃಹತ್ ವಸತಿ ಸಮುಚ್ಛಯಗಳ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಗೊಳಿಸುವಂತೆ ದೇಶದ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಖಡಕ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಎಸ್.ವಿ.ಎನ್. ಭಟ್ಟಿ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ರಾಷ್ಟ್ರವ್ಯಾಪಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದಿಸುವ ಸಂಸ್ಥೆಗಳನ್ನು ಆರು ವಾರಗಳಲ್ಲಿ ಗುರುತಿಸಬೇಕು.
ಘನತ್ಯಾಜ್ಯವನ್ನು ಮೂಲದಲ್ಲೇ ಹಸಿ-ಒಣ ಕಸವಾಗಿ ವಿಂಗಡಿಸಿ, ಸಂಸ್ಕರಿಸಿ, ಸುರಕ್ಷಿತವಾಗಿ ವಿಲೇವಾರಿ ಮಾಡದಿದ್ದರೆ ಅಂತಹ ಸಂಸ್ಥೆಗಳ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗುವುದು. ತ್ಯಾಜ್ಯ ನಿರ್ವಹಣೆಯ ಸಮರ್ಪಕ ಅನುಸರಣಾ ಪ್ರಮಾಣಪತ್ರ ಸಲ್ಲಿಸಿದ ನಂತರವಷ್ಟೇ ಸೌಲಭ್ಯಗಳನ್ನು ಮರುಸ್ಥಾಪಿಸಲಾಗುತ್ತದೆ.
ಮತ್ತಷ್ಟು ಓದಿ: ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ಗಳಿಗೆ ಶಾಕ್! 6 ಹೋಟೆಲ್‌ಗಳಿಗೆ ಒಟ್ಟೂ 1.6 ಲಕ್ಷ ರೂ ಭಾರಿ ದಂಡ
ಕಸ ಸುರಿಯುವ ಪ್ರದೇಶಗಳ ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳು ಮತ್ತು ಮಾಸಿಕ ವರದಿಗಳನ್ನು ಮೀಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ಅಪ್‌ಲೋಡ್ ಮಾಡಬೇಕು. ರೈಲ್ವೆ, ರಕ್ಷಣಾ ಇಲಾಖೆ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳು (PSUs) ಕಸ ವಿಲೇವಾರಿ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಸುಪ್ರೀಂ ಕೋರ್ಟ್ ಮೇಲ್ವಿಚಾರಣಾ ಸಮಿತಿ ಪರಿಶೀಲಿಸಲಿದೆ.
ನದಿ ಮಾಲಿನ್ಯ ತಡೆ: ಕಸವನ್ನು ನದಿ ಮತ್ತು ಜಲಮೂಲಗಳಿಗೆ ಎಸೆಯುವುದರಿಂದ ಉಂಟಾಗುವ ನೀರಿನ ಮಾಲಿನ್ಯದ ಕುರಿತು ನಿಖರ ಅಂಕಿಅಂಶಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಶಾಲಾ ಮತ್ತು ಉನ್ನತ ಶಿಕ್ಷಣ ಇಲಾಖೆಗಳು ತಮ್ಮ ಪಠ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆಯ ಕುರಿತು ಪ್ರಾಯೋಗಿಕ ಶಿಕ್ಷಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ, ತರಬೇತಿ ಪಡೆದ ವಿದ್ಯಾರ್ಥಿಗಳ ಮೂಲಕ ಅವರ ಮನೆಗಳು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಸ ವಿಂಗಡಣೆಯ ಜಾಗೃತಿ ಮೂಡಿಸುವಂತೆ ಪೀಠ ನಿರ್ದೇಶಿಸಿದೆ.
ಕೇಂದ್ರ ಸರ್ಕಾರದ ‘ಘನತ್ಯಾಜ್ಯ ನಿರ್ವಹಣಾ ನಿಯಮಗಳು 2016’ ರ ಪ್ರಕಾರ, ದಿನಕ್ಕೆ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಎಲ್ಲಾ ಸಂಸ್ಥೆಗಳು ತಮ್ಮ ಆವರಣದಲ್ಲೇ ಹಸಿ ಕಸವನ್ನು ಕಾಂಪೋಸ್ಟ್ ಅಥವಾ ಬಯೋ-ಮೀಥೇನೈಸೇಶನ್ ಮೂಲಕ ಸಂಸ್ಕರಿಸುವುದು ಕಡ್ಡಾಯವಾಗಿದೆ.
ನಾಗರಿಕ ಪ್ರಜ್ಞೆಯ ಕೊರತೆ: ಕಸ ಉತ್ಪಾದಿಸುವುದು ನನ್ನ ಹಕ್ಕು, ಆದರೆ ಅದನ್ನು ನಿರ್ವಹಿಸುವುದು ನನ್ನ ಕೆಲಸವಲ್ಲ ಎಂಬ ಧೋರಣೆ ಸಮಾಜದಲ್ಲಿ ಬೆಳೆಯುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




