
ನವದೆಹಲಿ, ಆಗಸ್ಟ್ 3: ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ (Cauvery Water Dispute) ಹಲವು ದಶಕಗಳ ಇತಿಹಾಸವಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ತಮಿಳುನಾಡಿಗೆ ನಮ್ಮ ಪಾಲಿನ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ವಿಜಯ್ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಇದರಿಂದಾಗಿ ಡಿಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಜುಲೈ 28ರಂದು ನಡೆದ ತನ್ನ 139ನೇ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಹವಾಮಾನ ಮತ್ತು ನೀರಿನ ಲಭ್ಯತೆಯನ್ನು ಪರಿಶೀಲಿಸಿದ್ದ CWRC ಕೃಷ್ಣರಾಜಸಾಗರ (KRS) ಮತ್ತು ಕಬಿನಿ ಜಲಾಶಯಗಳಿಂದ ಜುಲೈ 29ರಿಂದ ಆಗಸ್ಟ್ 12ರವರೆಗೆ 15 ದಿನಗಳ ಕಾಲ ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ಧಾರವನ್ನು CWMA ಜುಲೈ 30ರಂದು ನಡೆದ ತನ್ನ 54ನೇ ತುರ್ತು ಸಭೆಯಲ್ಲಿ ಎತ್ತಿಹಿಡಿದಿತ್ತು.
ತಮಿಳುನಾಡು ಸರ್ಕಾರದ ಆರೋಪವೇನು?:
ಈ ಆದೇಶದ ಹೊರತಾಗಿಯೂ ಜುಲೈ 29ರಿಂದ ಆಗಸ್ಟ್ 2ರವರೆಗೆ ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಒಳಹರಿವು ಕೇವಲ 158 ರಿಂದ 550 ಕ್ಯೂಸೆಕ್ನಷ್ಟಿದ್ದು, ನಿಗದಿಪಡಿಸಿದ 3,500 ಕ್ಯೂಸೆಕ್‌ಗಿಂತ ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ. ಅಲ್ಲದೆ, ಕರ್ನಾಟಕದ ಜಲಾಶಯಗಳಲ್ಲಿ ಆದೇಶವನ್ನು ಪಾಲಿಸಲು ಅಗತ್ಯವಿರುವಷ್ಟು ನೀರಿದೆ ಎಂದು ತಮಿಳುನಾಡು ವಾದಿಸಿದೆ.
ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕ-ತಮಿಳುನಾಡು ಭಾರತ-ಪಾಕಿಸ್ತಾನವಲ್ಲ; ಕಾಂಗ್ರೆಸ್ ಎಂಪಿ ಮಾಣಿಕಂ ಟ್ಯಾಗೋರ್
ಆಗಸ್ಟ್ 3ರ ವೇಳೆಗೆ ಕೃಷ್ಣರಾಜಸಾಗರ ಜಲಾಶಯದಲ್ಲಿ 23.078 ಟಿಎಂಸಿ, ಕಬಿನಿಯಲ್ಲಿ 18.610 ಟಿಎಂಸಿ, ಹಾರಂಗಿಯಲ್ಲಿ 7.827 ಟಿಎಂಸಿ ಮತ್ತು ಹೇಮಾವತಿಯಲ್ಲಿ 28.022 ಟಿಎಂಸಿ ನೀರು ಸಂಗ್ರಹವಿತ್ತು. ನಾಲ್ಕೂ ಜಲಾಶಯಗಳಲ್ಲಿ ಸೇರಿ ಒಟ್ಟು 77.537 ಟಿಎಂಸಿ ನೀರಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಕರ್ನಾಟಕದ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಒಳಹರಿವು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ಪ್ರಮಾಣಾನುಗುಣವಾಗಿ ನೀರು ಹಂಚಿಕೆ ಸೂತ್ರದಂತೆ ಬಿಳಿಗುಂಡ್ಲುವಿನಲ್ಲಿ ತಮಗೆ 26.954 ಟಿಎಂಸಿ ನೀರು ಸಿಗಬೇಕು. ಆದರೆ, CWMA ಪ್ರಸ್ತುತ ಅವಧಿಗೆ ನಿಗದಿಪಡಿಸಿರುವ 4.536 ಟಿಎಂಸಿ ನೀರು ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಕಾವೇರಿ ಪ್ರಾಧಿಕಾರಗಳ ಆದೇಶಗಳನ್ನು ಕರ್ನಾಟಕ ಅನುಸರಿಸುವಂತೆ ಮತ್ತು ನಿಗದಿತ ಕಾಲಮಿತಿಯಲ್ಲಿ ತಮಿಳುನಾಡಿಗೆ ತನ್ನ ಹಕ್ಕಿನ ನೀರು ಸಿಗುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ
ಈ ಬಗ್ಗೆ ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲ ಬಿ. ಕರುಣಾಕರನ್ ದೃಢಪಡಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಿಗದಿಪಡಿಸಿದ ಪರಿಮಾಣಕ್ಕಿಂತ ಕರ್ನಾಟಕ ಬಿಡುಗಡೆ ಮಾಡಿದ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಕಾವೇರಿ ನೀರು ವಿವಾದದ ಕುರಿತು ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಸಿಎಂ ವಿಜಯ್ ಅವರು ಸೂಚಿಸಿದ್ದರು.
ಡಿಎಂಕೆ ಮನವಿ:
ಈ ಮಧ್ಯೆ, ತಮಿಳುನಾಡಿನ ಮುಖ್ಯ ವಿರೋಧ ಪಕ್ಷವಾದ ಡಿಎಂಕೆ ಕೂಡ ಶನಿವಾರ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದು, ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿತ್ತು. 2018ರ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪನ್ನು ಕರ್ನಾಟಕವು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿತ್ತು. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರವೂ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಕರ್ನಾಟಕ ಸರ್ಕಾರದ ತಲೆಬಿಸಿಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ