ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ನೇಮಕ ಆದೇಶ ಹಿಂಪಡೆದ ತಮಿಳುನಾಡು ಸಿಎಂ ವಿಜಯ್​​: ತೀವ್ರ ಟೀಕೆ ಬೆನ್ನಲ್ಲೇ ಕ್ರಮ

ಜ್ಯೋತಿಷಿಯನ್ನು ವಿಶೇಷ ಅಧಿಕಾರಿಯಾಗಿ (OSD) ನೇಮಿಸಿದ ಆದೇಶವನ್ನು ತಮಿಳುನಾಡು ಸಿಎಂ ವಿಜಯ್ ಅವರು ಹಿಂಪಡೆದಿದ್ದಾರೆ. ಈ ನೇಮಕಾತಿಯು ಮೈತ್ರಿ ಪಕ್ಷಗಳು, ಪ್ರತಿಪಕ್ಷಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ವೈಜ್ಞಾನಿಕ ಮನೋಭಾವಕ್ಕೆ ಒತ್ತು ನೀಡಬೇಕೆಂದು ಒತ್ತಾಯಿಸಲಾಗಿತ್ತು. ಮೂಢನಂಬಿಕೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬಾರದು ಎಂಬ ವ್ಯಾಪಕ ಟೀಕೆಗಳ ಬೆನ್ನಲ್ಲೇ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರೆ.

ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ನೇಮಕ ಆದೇಶ ಹಿಂಪಡೆದ ತಮಿಳುನಾಡು ಸಿಎಂ ವಿಜಯ್​​: ತೀವ್ರ ಟೀಕೆ ಬೆನ್ನಲ್ಲೇ ಕ್ರಮ
ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ನೇಮಕ ಆದೇಶ ಹಿಂಪಡೆದೆ ತಮಿಳುನಾಡು ಸಿಎಂ ವಿಜಯ್

Updated on: May 13, 2026 | 2:04 PM

ಚೆನ್ನೈ, ಮೇ 13: ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ವಿಶೇಷ ಅಧಿಕಾರಿಯಾಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರ ನೇಮಕ ಆದೇಶವನ್ನು ತಮಿಳುನಾಡು ಸಿಎಂ ವಿಜಯ್​ ಹಿಂಪಡೆದಿದ್ದಾರೆ. ವೆಟ್ರಿವೆಲ್ ಅವರನ್ನು ಮುಖ್ಯಮಂತ್ರಿಗಳ ಇಲಾಖೆಯಲ್ಲಿ OSD ಆಗಿ ನೇಮಕ ಮಾಡಿದ ಒಂದು ದಿನದೊಳಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನೇಮಕಾತಿ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಕಮ್ಯೂನಿಷ್ಟ್​​ ಪಾರ್ಟಿ ಆಫ್​​ ಇಂಡಿಯಾ-ಮ್ಯಾಟ್ರಿಕ್ಸ್​​ (ಸಿಪಿಐಎಂ) ಹಾಗೂ ಕಮ್ಯೂನಿಷ್ಟ್​​ ಪಾರ್ಟಿ ಆಫ್​​ ಇಂಡಿಯಾ (ಸಿಪಿಐ) ಈ ಬಗ್ಗೆ ಟೀಕಿಸಿದ್ದವು.

ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಗೆ ಮುನ್ನ ವಿಸಿಕೆ ಶಾಸಕಿ ವಾಣಿ ಅರುಸು, ಸರ್ಕಾರ ವೈಜ್ಞಾನಿಕ ಹಾಗೂ ತಾರ್ಕಿಕ ಚಿಂತನೆಗೆ ಆದ್ಯತೆ ನೀಡಬೇಕು, ಮೂಢನಂಬಿಕೆಗಳಿಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದರು. ಎಡಪಂಥೀಯ ಪಕ್ಷಗಳಾದ CPIM ಮತ್ತು CPI ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದವು. CPIM ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ಸರ್ಕಾರಕ್ಕೆ ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕ ಚಿಂತನೆ ಉತ್ತೇಜಿಸುವ ಜವಾಬ್ದಾರಿ ಇದೆ. ಸಾರ್ವಜನಿಕ ಹಣದಲ್ಲಿ ಜ್ಯೋತಿಷಿಯನ್ನು ಸರ್ಕಾರಿ ಹುದ್ದೆಗೆ ನೇಮಿಸುವುದು ಮೂಢನಂಬಿಕೆಗೆ ಉತ್ತೇಜನ ನೀಡುತ್ತದೆ ಎಂದು ಟೀಕಿಸಿದ್ದರು. CPI ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಕೂಡ ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ಸರ್ಕಾರದ ವಿಶೇಷ ಅಧಿಕಾರಿಯಾಗಿ ನೇಮಿಸಿದ ಸಿಎಂ ವಿಜಯ್

ಇವುಗಳ ಜೊತೆಗ ಡಿಎಂಡಿಕೆ ನಾಯಕಿ ಪ್ರೇಮಲತಾ ವಿಜಯಕಾಂತ್​​ ಕೂಡ ವಿಜಯ್​​ ನಿರ್ಧಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.ರಾಧನ್ ಪಂಡಿತ್ ಅವರನ್ನು OSD ಆಗಿ ನೇಮಕ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಅವರು ನಿಮ್ಮ ಗುರು ಆಗಿದ್ದರೆ ವೈಯಕ್ತಿಕವಾಗಿ ಇಟ್ಟುಕೊಳ್ಳಿ. ಯುವಕರು ನಿಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ. ನೀವು ಯುವಜನತೆಗೆ ಯಾವ ಸಂದೇಶ ನೀಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು. ಹೀಗಾಗಿ OSD ಆಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರ ನೇಮಕ ವಿಚಾರ ಟಿವಿಕೆ ಮುಖ್ಯಸ್ಥ ವಿಜಯ್​​ಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿತ್ತು. ಒತ್ತಡ ಹೆಚ್ಚಾದ ಕಾರಣ ಕೊನೆಗೂ ತಮ್ಮ ಆದೇಶವನ್ನು ಸಿಎಂ ಹಿಂಪಡೆದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:03 pm, Wed, 13 May 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us