ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ವಲಸೆ ಕಾರ್ಮಿಕನ ಹತ್ಯೆ
ಅಕ್ಟೋಬರ್ 2019ರಿಂದಲೂ ಜಮ್ಮು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ಉಗ್ರಗಾಮಿಗಳು ಗುರಿಯಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಕಾಶ್ಮೀರಿ ಪಂಡಿತರನ್ನು ಗುರುತಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯಲ್ಲಿ ವಲಸೆ ಕಾರ್ಮಿಕನನ್ನು ಉಗ್ರಗಾಮಿಗಳು ಕೊಂದಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ 3ನೇ ವರ್ಷಾಚರಣೆಯ ಮುನ್ನಾ ದಿನ ಈ ಕೃತ್ಯ ನಡೆದಿದ್ದು, ಭದ್ರತಾ ಸಿಬ್ಬಂದಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಪುಲ್ವಾಮಾ ಜಿಲ್ಲೆಯ ಗಡೂರ ಗ್ರಾಮದಲ್ಲಿ ಸ್ಥಳೀಯರಲ್ಲದ, ವಲಸೆ ಬಂದಿದ್ದ ಕಾರ್ಮಿಕರ ಮನೆಗಳತ್ತ ಉಗ್ರಗಾಮಿಗಳು ಗ್ರೆನೇಡ್ ಎಸೆದರು. ಮೃತ ಕಾರ್ಮಿಕನನ್ನು ಮೊಹಮದ್ ಮುಮ್ತಾಜ್ ಎಂದು ಗುರುತಿಸಲಾಗಿದೆ. ಇವರು ಬಿಹಾರದ ಸಕ್ವಾ ಪರಾಸ್ನ ನಿವಾಸಿ. ಗಾಯಾಳುಗಳಾದ ಮೊಹಮದ್ ಆರೀಫ್ ಮತ್ತು ಮೊಹಮದ್ ಮಖ್ಬೂಲ್ ಸಹ ಬಿಹಾರದಿಂದಲೇ ಬಂದಿದ್ದವರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದ ಕೇಂದ್ರ ಸರ್ಕಾರವು ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿತ್ತು. ಈ ನಿರ್ಧಾರದ ಜೊತೆಗೆ ಜಮ್ಮು ಕಾಶ್ಮೀರಕ್ಕಿದ್ದ ರಾಜ್ಯದ ಸ್ಥಾನಮಾನ ಹಿಂಪಡೆದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತು. ಸ್ಥಳೀಯ ರಾಜಕೀಯ ಪಕ್ಷಗಳು ಈ ದಿನವನ್ನು ‘ಜಮ್ಮು ಕಾಶ್ಮೀರ ಇತಿಹಾಸದ ಕರಾಳದಿನ’ವಾಗಿ ಆಚರಿಸುತ್ತಿದೆ.
ಅಕ್ಟೋಬರ್ 2019ರಿಂದಲೂ ಜಮ್ಮು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರನ್ನು ಉಗ್ರಗಾಮಿಗಳು ಗುರಿಯಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಕಾಶ್ಮೀರಿ ಪಂಡಿತರನ್ನು ಗುರುತಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಗೆ ಈ ಬೆಳವಣಿಗೆಗಳು ಆತಂಕ ಉಂಟು ಮಾಡಿವೆ.
ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಉದ್ಯೋಗಿಗಳು ಮತ್ತು ಜಮ್ಮುವಿನಿಂದ ಬಂದಿದ್ದ ಸರ್ಕಾರಿ ನೌಕರರನ್ನು ಕಳೆದ ಮೇ ಮತ್ತು ಜೂನ್ ತಿಂಗಳಲ್ಲಿ ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿತ್ತು. ಭದ್ರತಾ ಪಡೆಗಳು ಉಗ್ರಗಾಮಿ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ ನಂತರ ಈ ಹತ್ಯೆಗಳು ನಿಯಂತ್ರಣಕ್ಕೆ ಬಂತು. ಬಹುತೇಕ ಉದ್ಯೋಗಿಗಳು ಇದೀಗ ಕಾಶ್ಮೀರದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದು, ಜಮ್ಮುಗೆ ಸ್ಥಳಾಂತರಗೊಂಡಿದ್ದಾರೆ.
Published On - 7:27 am, Fri, 5 August 22




