ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಕ್ಕೆ ಕಾರಣವೇನಿರಬಹುದು? ಈ 4ರಲ್ಲಿ ಒಂದಿರಬಹುದಾ?
Army Chopper Crash: ಹೆಲಿಕಾಪ್ಟರ್ ಪತನಕ್ಕೆ ಅದರಲ್ಲಿನ ತಾಂತ್ರಿಕ ದೋಷ ಕಾರಣವಾ ಎಂಬ ಪ್ರಶ್ನೆಯೂ ಇದೀಗ ಎದ್ದಿದೆ. ಮೊದಲು ಪರೀಕ್ಷೆ ನಡೆಸುವುದು ಪದ್ಧತಿಯಾದರೂ ಹಾರಾಟ ಶುರುವಾದ ಮೇಲೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು, ಪತನವಾಗಿರಬಹುದು ಎನ್ನಲಾಗುತ್ತಿದೆ.
ಇಂದು ಡಿಫೆನ್ಸ್ ಸ್ಟಾಫ್ ಚೀಫ್ (ಸಿಡಿಎಸ್) ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ ಇನ್ನಿತರ ಸೇನಾ ಅಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಮಧ್ಯಾಹ್ನ 12.20ರ ಹೊತ್ತಿಗೆ ತಮಿಳುನಾಡಿನ ಕೂನೂರು ಬಳಿ ಅಪಘಾತಕ್ಕೀಡಾಗಿದೆ. ಸಾಮಾನ್ಯವಾಗಿ ಹೀಗೆ ಪ್ರಮುಖ ನಾಯಕರು ಪ್ರಯಾಣ ಮಾಡುವ ಮೊದಲು ಪರಿಶೀಲನೆ ಮಾಡಲಾಗುತ್ತದೆ. ಅದರಲ್ಲೂ ವಿವಿಐಪಿಗಳೇ ಬಳಸುವ ಎಂಐ 17ವಿ5 ಹೆಲಿಕಾಪ್ಟರ್ ಅತ್ಯುತ್ತಮ ಗುಣಮಟ್ಟದ ಕಾಪ್ಟರ್. ಅಪಘಾತವಾದ ಉದಾಹರಣೆ ತೀರ ಕಡಿಮೆ. ಹಾಗಿದ್ದಾಗ್ಯೂ ಇಷ್ಟು ಗುಣಮಟ್ಟದ ಹೆಲಿಕಾಪ್ಟರ್ ಹೇಗೆ ಅಪಘಾತಕ್ಕೀಡಾಯಿತು? ಕಾರಣಗಳೇನಿರಬಹುದು ಎಂಬುದು ಸದ್ಯ ಕಾಡುತ್ತಿರುವ ಪ್ರಶ್ನೆ ಮತ್ತು ಕುತೂಹಲ.
ಇಂದು ಬಿಪಿನ್ ರಾವತ್ ಪ್ರಯಾಣ ಮಾಡುತ್ತಿದ್ದುದು ರಷ್ಯಾದ ಎಂಐ 17ವಿ5 ಹೆಲಿಕಾಪ್ಟರ್. ಇದು ಡಬಲ್ ಇಂಜಿನ್ ಹೆಲಿಕಾಪ್ಟರ್. ಸಿಯಾಚಿನ್ ನಂಥ ದುರ್ಗಮ ಪ್ರದೇಶದಲ್ಲೂ ಈ ಹೆಲಿಕಾಪ್ಟರ್ ಬಳಕೆ ಮಾಡಲಾಗಿದೆ. ಅಂಥದ್ದರಲ್ಲಿ ವೆಲ್ಲಿಂಗ್ಟನ್ ನಿಂದ 10 ಕಿಲೋಮೀಟರ್ ದೂರದ ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇನ್ನೂ 5 ನಿಮಿಷ ಹಾರಾಟ ನಡೆಸಿದ್ದರೇ, ವೆಲ್ಲಿಂಗ್ಟನ್ ನಲ್ಲಿ ಕಾಪ್ಟರ್ ಲ್ಯಾಂಡ್ ಆಗುತ್ತಿತ್ತು. ಅಷ್ಟರಲ್ಲೇ ಕೂನೂರು ಬಳಿ ಕಾಪ್ಟರ್ ಅಪಘಾತಕ್ಕೀಡಾಗಿ 13 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ದಟ್ಟ ಮಂಜು ಕಾರಣವೇ? ಹೆಲಿಕಾಪ್ಟರ್ ಪತನಕ್ಕೆ ಊಟಿ ಬಳಿ ಆವರಿಸಿದ್ದ ದಟ್ಟವಾದ ಮಂಜು ಕಾರಣವೇ ಎಂಬುದೊಂದು ಪ್ರಶ್ನೆ ಎದ್ದಿದೆ. ಯಾಕೆಂದರೆ ಇಂದು ಊಟಿಯ ಬಳಿಕ ದಟ್ಟವಾದ ಮಂಜಿನ ವಾತಾವರಣ ಇತ್ತು. ಆದರೆ ಸಾಮಾನ್ಯ ಹೆಲಿಕಾಪ್ಟರ್ ಆಗಲೀ, ವಿವಿಐಪಿ ಹೆಲಿಕಾಪ್ಟರ್ಗಳೇ ಆಗಲಿ, ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದಾಗ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುವುದಿಲ್ಲ. ಅದರಲ್ಲೂ ಸಿಡಿಎಸ್ನಂತಹ ಉನ್ನತ ಹುದ್ದೆಯಲ್ಲಿರುವವರ ಹೆಲಿಕಾಪ್ಟರ್ ಹಾರಾಟಕ್ಕಂತು ಅನುಮತಿ ಸಿಗುವುದೇ ಇಲ್ಲ. ವೆಲ್ಲಿಂಗ್ಟನ್ ಬಳಿಯೂ ದಟ್ಟ ಮಂಜು ಆವರಿಸಿದ್ದರೇ, ಹೆಲಿಕಾಪ್ಟರ್ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಲೇ ಇರಲಿಲ್ಲ. ಇಂಥವರು ಹೊರಟಾಗ ಅದಕ್ಕೂ ಮೊದಲು, ಆ ಮಾರ್ಗದಲ್ಲಿ ಮೊದಲು ಒಂದು ಹೆಲಿಕಾಪ್ಟರ್ ಹಾರಾಟ ನಡೆಸಿ ಹವಾಮಾನ ಪರಿಸ್ಥಿತಿ ನೋಡಿಕೊಂಡು, ಬಂದು ಬಳಿಕ ಸಿಡಿಎಸ್ ಕಾಪ್ಟರ್ ಆ ಮಾರ್ಗದಲ್ಲಿ ಹಾರಾಟ ನಡೆಸುವುದು ಸೂಕ್ತವೇ ಅಲ್ಲವೇ ಎಂದು ತಿಳಿಸುತ್ತಾರೆ. ಇದು ಭಾರತೀಯ ವಾಯುಪಡೆಯಲ್ಲಿರುವ ಸಾಮಾನ್ಯ ನಿಯಮ. ಈ ನಿಯಮವನ್ನು ಇಂದು ಕೂಡ ಪಾಲಿಸಲಾಗಿರುತ್ತೆ. ಹೀಗಾಗಿ ಊಟಿಯ ಬಳಿ ಮಂಜು ಆವರಿಸಿದ್ದು ಇಂದಿನ ಪತನಕ್ಕೆ ಕಾರಣವಾಗಿರಲಾರದು ಎಂದು ಹೇಳಲಾಗುತ್ತಿದೆ.
ತಾಂತ್ರಿಕ ದೋಷ ಇದ್ದಿರಬಹುದಾ? ಹೆಲಿಕಾಪ್ಟರ್ ಪತನಕ್ಕೆ ಅದರಲ್ಲಿನ ತಾಂತ್ರಿಕ ದೋಷ ಕಾರಣವಾ ಎಂಬ ಪ್ರಶ್ನೆಯೂ ಇದೀಗ ಎದ್ದಿದೆ. ಮೊದಲು ಪರೀಕ್ಷೆ ನಡೆಸುವುದು ಪದ್ಧತಿಯಾದರೂ ಹಾರಾಟ ಶುರುವಾದ ಮೇಲೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು, ಪತನವಾಗಿರಬಹುದು ಎನ್ನಲಾಗುತ್ತಿದೆ. ವಿವಿಐಪಿ ಹೆಲಿಕಾಪ್ಟರ್ ಹಾರಾಟಕ್ಕೂ ಮುನ್ನ ಏರ್ ಪೋರ್ಸ್ ಇಂಜಿನಿಯರ್ಗಳು ಹೆಲಿಕಾಪ್ಟರ್ ಅನ್ನು ಸಂಪೂರ್ಣವಾಗಿ ತಪಾಸಣೆ ಮಾಡುತ್ತಾರೆ. ಏನೇ ತಾಂತ್ರಿಕ ದೋಷ ಇದ್ದರೂ, ಅವುಗಳನ್ನು ಸರಿಪಡಿಸಿದ ಬಳಿಕವೇ ಹಾರಾಟಕ್ಕೆ ಅವಕಾಶ ಕೊಡಲಾಗುತ್ತೆ. ಆದರೂ, ಹಾರಾಟದ ವೇಳೆ ದಿಢೀರ್ನೇ ತಾಂತ್ರಿಕ ದೋಷ ಕಾಣಿಸಿಕೊಂಡು ಕಾಪ್ಟರ್ ಅಪಘಾತಕ್ಕೀಡಾಗಿರಬಹುದು.
ಮೆಕ್ಯಾನಿಕಲ್ ದೋಷ? ಹೆಲಿಕಾಪ್ಟರ್ನ್ನು ಪೂರ್ವಭಾವಿಯಾಗಿಯೇ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿರುವ ಯಾವುದೇ ಯಂತ್ರಗಳಲ್ಲಿ ದೋಷ ಕಂಡುಬಂದರೂ ಅಂಥ ಹೆಲಿಕಾಪ್ಟರ್ಗಳನ್ನು ಹಾರಾಟಕ್ಕೆ ಕೊಡುವುದಿಲ್ಲ. ಇಂದು ಕೂಡ ಅಂಥ ಸಮಸ್ಯೆ ಎದುರಾಗಿರಬಹುದು ಎಂದೂ ಅಂದಾಜಿಸಲಾಗಿದೆ.
ಪೈಲಟ್ನ ನಿರ್ಲಕ್ಷ್ಯತನ ? ಈ ಕಾರಣವನ್ನೂ ಅಲ್ಲಗಳೆಯುವಂತಿಲ್ಲ. ಪೈಲಟ್ ನಿರ್ಲಕ್ಷ್ಯತನದಿಂದಲೂ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರಬಹುದು. ಆದರೇ, ಸಾಮಾನ್ಯವಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯಲ್ಲಿರುವ ಬಿಪಿನ್ ರಾವತ್ ಪ್ರಯಾಣಿಸುವ ಕಾಪ್ಟರ್ಗಳನ್ನ ಅನುಭವಿ ಪೈಲಟ್ಗಳೇ ಚಲಾಯಿಸುತ್ತಾರೆ. ಹೀಗಾಗಿ ಇವರು ನಿರ್ಲಕ್ಷ್ಯ ಮಾಡುವ ಸಾಧ್ಯತೆಗಳು ತೀರಾ ಕಡಿಮೆ.
ಇವತ್ತಿನ ಹೆಲಿಕಾಪ್ಟರ್ ಪತನದ ದುರಂತಕ್ಕೆ ಏನೇ ಕಾರಣ ಹುಡುಕಲು ಹೊರಟರೂ ಅನುಮಾನ ಕಾಡುತ್ತಿದೆ. ಹೀಗಾಗಿ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಕಾಪ್ಟರ್ ಪತನಕ್ಕೆ ಕಾರಣಗಳು ಏನು ಎನ್ನುವುದು ವಾಯುಪಡೆಯ ಉನ್ನತ ಮಟ್ಟದ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ. ಈಗಾಗಲೇ ಭಾರತೀಯ ವಾಯುಪಡೆಯು ಕಾಪ್ಟರ್ ಅಪಘಾತದ ಬಗ್ಗೆ ತನಿಖೆಗೆ ಆದೇಶ ನೀಡಿದೆ.
ವರದಿ- ಚಂದ್ರಮೋಹನ್