ಕುಶಲಕರ್ಮಿಗಳಿಗೆ ವರದಾನವಾಗಲಿದೆ ಪಿಎಂ ವಿಶ್ವಕರ್ಮ ಯೋಜನೆ; ಈ ಬಗ್ಗೆ ನೀವು ತಿಳಿದಿರಬೇಕಾದ 10 ಸಂಗತಿಗಳು
ಕುಟುಂಬ ಮೂಲದಿಂದ ಬಂದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ಕೊಡಲು ಮತ್ತು ಅವುಗಳ ದೇಶೀಯ ಹಾಗೂ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಹಮ್ಮಿಕೊಂಡಿದೆ. ಭಾರತದ ವಿವಿಧ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹವಾಗಿ ರೂಪಿಸಲಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂ ಮೀಸಲಿರಿಸಿದೆ. ಫಲಾನುಭವಿಗಳಿಗೆ ಧನಸಹಾಯದ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಕೌಶಲ್ಯ ಅಭಿವೃದ್ಧಿಗೆ ತರಬೇತಿ ಇತ್ಯಾದಿ ಹಲವು ರೀತಿಯ ನೆರವುಗಳನ್ನು ಸರ್ಕಾರ ಒದಗಿಸಲಿದೆ.

ದೆಹಲಿ ಸೆಪ್ಟೆಂಬರ್ 16: ಕುಶಲಕರ್ಮಿಗಳು ಮತ್ತು ಕಾರ್ಮಿಕರನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆಯನ್ನು ಸೆಪ್ಟೆಂಬರ್ 17 ರಂದು ಪ್ರಾರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದು ದ್ವಾರಕಾದ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಪ್ರಸ್ತುತ ಯೋಜನೆಯ ಅಡಿಯಲ್ಲಿ, ಫಲಾನುಭವಿಗಳು ಇ-ವೋಚರ್‌ಗಳು ಅಥವಾ eRUPI ಮೂಲಕ ಟೂಲ್‌ಕಿಟ್ ಇನ್ಸೆಂಟಿವ್ ಆಗಿ ತಲಾ ₹15,000 ಅನ್ನು ಪಡೆಯುತ್ತಾರೆ, ಜೊತೆಗೆ ರಿಯಾಯಿತಿ ದರದಲ್ಲಿ ಮೇಲಾಧಾರ ಮುಕ್ತ ಉದ್ಯಮ ಅಭಿವೃದ್ಧಿ ಸಾಲಗಳನ್ನು ಪಡೆಯುತ್ತಾರೆ. ಕುಶಲಕರ್ಮಿಗಳು ತಿಂಗಳಿಗೆ ಗರಿಷ್ಠ 100 ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ ₹1 ಪ್ರೋತ್ಸಾಹಕವನ್ನು ಪಡೆಯುತ್ತಾರೆ ಎಂದು MSME ಸಚಿವಾಲಯ ಹೇಳಿದೆ.
ವಿಶ್ವಕರ್ಮ ಯೋಜನೆ ಬಗ್ಗೆ 10 ಸಂಗತಿಗಳು
- ಐದು ವರ್ಷಗಳ ಅವಧಿಗೆ (FY 24-28) ₹ 13,000 ಕೋಟಿ ವೆಚ್ಚದೊಂದಿಗೆ ಆಗಸ್ಟ್ 16 ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಈ ಯೋಜನೆಯನ್ನು ಅನುಮೋದಿಸಿತು.
- ಭಾರತದ ವಿವಿಧ ಕರಕುಶಲಕರ್ಮಿಗಳಿಗೆ (Artisans) ಪ್ರೋತ್ಸಾಹವಾಗಿ ರೂಪಿಸಲಾಗಿರುವ ಈ ಯೋಜನೆಗೆ ಕೇಂದ್ರ ಸರ್ಕಾರ 13,000 ಕೋಟಿ ರೂ ಮೀಸಲಿರಿಸಿದೆ.
- ಫಲಾನುಭವಿಗಳಿಗೆ ಧನಸಹಾಯದ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಕೌಶಲ್ಯ ಅಭಿವೃದ್ಧಿಗೆ (Skill Upgradation) ತರಬೇತಿ ಇತ್ಯಾದಿ ಹಲವು ರೀತಿಯ ನೆರವುಗಳನ್ನು ಸರ್ಕಾರ ಒದಗಿಸಲಿದೆ.
- ಯೋಜನೆಯಡಿಯಲ್ಲಿ, ಕುಶಲಕರ್ಮಿಗಳಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯ ಮೂಲಕ ಮಾನ್ಯತೆ ನೀಡಲಾಗುವುದು.
- ಶೇ 5 ರಿಯಾಯಿತಿ ಬಡ್ಡಿಯೊಂದಿಗೆ ₹ 1 ಲಕ್ಷ (ಮೊದಲ ಕಂತಿನಲ್ಲಿ) ಮತ್ತು ₹ 2 ಲಕ್ಷ (ಎರಡನೇ ಕಂತಿನಲ್ಲಿ) ಸಾಲ ನೀಡಲಾಗುವುದು.
- ಈ ಯೋಜನೆಯು ದೇಶಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶದ ಕುಶಲಕರ್ಮಿಗಳಿಗೆ ಬೆಂಬಲವನ್ನು ನೀಡುತ್ತದೆ ಮತ್ತು 18 ಸಾಂಪ್ರದಾಯಿಕ ವ್ಯಾಪಾರಗಳನ್ನು ಆರಂಭಿಕ ಫಲಾನುಭವಿ ವಲಯಗಳಾಗಿ ಗುರುತಿಸಲಾಗಿದೆ.
- ಗುರುತಿಸಲಾದ ಕುಶಲಕರ್ಮಿಗಳು: ಮರಗೆಲಸ (ಕಾರ್ಪೆಂಟರ್), ದೋಣಿ ತಯಾರಕ, ಶಸ್ತ್ರಕಾರ (ಮದ್ದುಗುಂಡು ತಯಾರಿಸುವವರು), ಕಮ್ಮಾರ, ಸುತ್ತಿಗೆ ಇತ್ಯಾದಿ ತಯಾರಿಸುವವರು, ಬೀಗ ಮತ್ತು ಕೀಲಿ ತಯಾರಿಸುವವರು, ಅಕ್ಕಸಾಲಿಗರು (ಚಿನ್ನದ ಕುಸುರಿ), ಕುಂಬಾರರು (ಮಡಿಕೆ ತಯಾರಿಸುವವರು), ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು (ಪಾದರಕ್ಷೆ ತಯಾರಿಸುವವರು), ಮೇಸ್ತ್ರಿಗಳು, ಬುಟ್ಟಿ ಹೆಣೆಯುವವರು,ಬೊಂಬೆ ತಯಾರಿಸುವವರು, ಕ್ಷೌರಿಕರು, ಹೂಮಾಲೆ ತಯಾರಕರು, ಡೋಬಿ (ಬಟ್ಟೆ ಒಗೆಯುವವರು), ದರ್ಜಿಗಳು (ಟೈಲರ್), ಮೀನಿನ ಬಲೆ ತಯಾರಕರು.
- ಅರ್ಹತೆ: ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು, ಅರ್ಜಿದಾರರು ಕಳೆದ ಐದು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಯೋಜನೆಗಳ ಪೈಕಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP), ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ, ಮುದ್ರಾ ಯೋಜನೆಗಳಂತಹ ಸಾಲ ಆಧಾರಿತ ಸ್ವಯಂ ಉದ್ಯೋಗ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು.
- ನೋಂದಣಿ ಮತ್ತು ಪ್ರಯೋಜನಗಳನ್ನು ಸಹ ಕುಟುಂಬದ ಒಬ್ಬ ಸದಸ್ಯರಿಗೆ ನಿರ್ಬಂಧಿಸಲಾಗುತ್ತದೆ.
- ಈ ಉಪಕ್ರಮವು ನಿರ್ದಿಷ್ಟ ಪ್ರದೇಶದ ಮೇಲೆ ಕೇಂದ್ರೀಕೃತವಾಗಿಲ್ಲ, ಏಕೆಂದರೆ ಇದು ಗ್ರಾಮೀಣ ಮತ್ತು ನಗರ ಭಾರತದ ಕುಶಲಕರ್ಮಿಗಳಿಗೆ ಸಹಾಯವನ್ನು ಒದಗಿಸುತ್ತದೆ.
ಇದನ್ನೂ ಓದಿ: ಸೆ. 17, ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆ ಲೋಕಾರ್ಪಣೆ; ಏನಿದು ಸ್ಕೀಮ್?
ಕುಶಲಕರ್ಮಿಗಳು ಐದು ದಿನಗಳ ತರಬೇತಿ ಅವಧಿಯ ನಂತರ ಕೌಶಲ್ಯ ಪರಿಶೀಲನೆ ಪೂರ್ತಿಗೊಳಿಸುತ್ತಾರೆ. ನಂತರ ಅವರಿಗೆ 15 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳವರೆಗೆ ಸುಧಾರಿತ ತರಬೇತಿ ಅವಧಿಯನ್ನು ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅವರು ದಿನಕ್ಕೆ ₹ 500 ಸ್ಟೈಫಂಡ್ ಪಡೆಯುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ