‘ಬ್ರಿಕ್ಸ್ ಯಾರ ವಿರುದ್ಧದ ಒಕ್ಕೂಟವೂ ಅಲ್ಲ’; ಪಾಶ್ಚಿಮಾತ್ಯ ದೇಶಗಳಿಗೆ ಪ್ರಧಾನಿ ಮೋದಿ ಸಂದೇಶ

ನವದೆಹಲಿಯ 'ಭಾರತ ಮಂಟಪ'ದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ (BRICS) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶಿ ನಿಯೋಗಗಳನ್ನು ಪ್ರೀತಿಯಿಂದ ಸ್ವಾಗತಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಕ್ಷಣದ ಸುಧಾರಣೆಗಳಾಗಬೇಕು ಎಂದು ಅವರು ಇದೇ ವೇಳೆ ಬಲವಾಗಿ ಆಗ್ರಹಿಸಿದರು. ಜಾಗತಿಕ ಅಧಿಕಾರವು ಕೆಲವೇ ದೇಶಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದನ್ನು ತಡೆದು, ಪ್ರತಿಯೊಂದು ರಾಷ್ಟ್ರಕ್ಕೂ ಧ್ವನಿ ಎತ್ತುವ ಹಕ್ಕು ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಇದಕ್ಕಾಗಿ ಪ್ರಾತಿನಿಧ್ಯ, ಸ್ಪಂದನೆ ಮತ್ತು ನಿಯಮ ರಚನೆ ಎಂಬ 3 ಸಿದ್ಧಾಂತಗಳ ಮೇಲೆ ಗಮನಹರಿಸಬೇಕು ಎಂದು ಮೋದಿ ಹೇಳಿದರು.

ಬ್ರಿಕ್ಸ್ ಯಾರ ವಿರುದ್ಧದ ಒಕ್ಕೂಟವೂ ಅಲ್ಲ; ಪಾಶ್ಚಿಮಾತ್ಯ ದೇಶಗಳಿಗೆ ಪ್ರಧಾನಿ ಮೋದಿ ಸಂದೇಶ
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
Image Credit source: PTI

Updated on: Sep 12, 2026 | 4:16 PM

ನವದೆಹಲಿ, ಸೆಪ್ಟೆಂಬರ್ 12: “ಬ್ರಿಕ್ಸ್ (BRICS) ಎಂಬುದು ಯಾವುದೇ ನಿರ್ದಿಷ್ಟ ದೇಶ ಅಥವಾ ಗುಂಪಿನ ವಿರುದ್ಧ ಇರುವ ಒಕ್ಕೂಟವಲ್ಲ. ಜಾಗತಿಕ ದಕ್ಷಿಣದ ದೇಶಗಳು ನಿಯಮಗಳನ್ನು ಅನುಸರಿಸುವವರಾಗದೆ, ಜಾಗತಿಕ ನಿಯಮಗಳನ್ನು ರೂಪಿಸುವ ಶಕ್ತಿ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಆಡಳಿತ ಶೈಲಿಯಲ್ಲಿ ಮಹತ್ವದ ಬದಲಾವಣೆ ತರಲು 10 ಅಂಶಗಳ ಕಾರ್ಯತಂತ್ರದ ರೋಡ್‌ಮ್ಯಾಪ್ ಅನ್ನು ಪ್ರಸ್ತಾಪಿಸಿದರು.

“ಜಾಗತಿಕ ಭವಿಷ್ಯವನ್ನು ನಾವೆಲ್ಲರೂ ಹಂಚಿಕೊಳ್ಳುವುದಾದರೆ, ಅದನ್ನು ವಿನ್ಯಾಸಗೊಳಿಸುವ ಮತ್ತು ರೂಪಿಸುವ ಹಕ್ಕು ಕೂಡ ಎಲ್ಲ ದೇಶಗಳಿಗೂ ಸಮಾನವಾಗಿ ಸಿಗಬೇಕು. ಭಾರತವು ಈ ಪರಿವರ್ತನೆಯ ನಾಯಕತ್ವ ವಹಿಸಲು ಸಂಪೂರ್ಣ ಸಜ್ಜಾಗಿದೆ.” ಎಂದು ಮೋದಿ ಘೋಷಿಸಿದರು.

“ಭಾರತಕ್ಕೆ ನಿಮ್ಮನ್ನೆಲ್ಲ ಸ್ವಾಗತಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ‘ಜನಕೇಂದ್ರಿತ’ ಮತ್ತು ‘ಮಾನವೀಯತೆಗೆ ಪ್ರಥಮ ಆದ್ಯತೆ’ ಎಂಬ ಪರಿಕಲ್ಪನೆಯ ಮೇಲೆ ಆಧಾರಿತವಾಗಿದೆ. ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಮ್ಮ ಪ್ರಮುಖ ಆದ್ಯತೆಗಳಾಗಿವೆ. ಈ ಆಶಯಗಳೊಂದಿಗೆ ನಾವು ಬ್ರಿಕ್ಸ್ ಶೃಂಗಸಭೆಯನ್ನು ಸಾಮಾನ್ಯ ಜನರೊಂದಿಗೆ ಬೆಸೆಯಲು ವಿಶೇಷ ಒತ್ತು ನೀಡಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ನಾವು ಯಾರ ವಿರುದ್ಧವೂ ಇಲ್ಲ:

ಬ್ರಿಕ್ಸ್ ರಾಷ್ಟ್ರಗಳು ಪರಸ್ಪರರ ದೃಷ್ಟಿಕೋನಗಳನ್ನು ಗೌರವಿಸುತ್ತವೆ ಮತ್ತು ಸರ್ವಸಮ್ಮತಿಯಿಂದ ಮುಂದೆ ಸಾಗುತ್ತವೆ ಎಂದು ಪುನರುಚ್ಚರಿಸಿದ ಪ್ರಧಾನಿ ಮೋದಿ, “ನಾವು ಯಾರ ವಿರುದ್ಧವೂ ಇಲ್ಲ, ಬದಲಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು ನಾವು ಪ್ರಯತ್ನಿಸುತ್ತೇವೆ” ಎಂದು ಪಾಶ್ಚಿಮಾತ್ಯ ದೇಶಗಳಿಗೆ ಸಂದೇಶ ರವಾನಿಸಿದ್ದಾರೆ.


ಜಾಗತಿಕ ಆಡಳಿತ ಶೈಲಿಯಲ್ಲಿ ಸುಧಾರಣೆ:

ಮುಂಬರುವ 20 ವರ್ಷಗಳ ಕಾಲಾವಧಿಯಲ್ಲಿ ಪ್ರಪಂಚದ ‘ಅಧಿಕಾರ ಮತ್ತು ವಿಶೇಷ ಸೌಲಭ್ಯಗಳ ಪಿರಮಿಡ್’ ವ್ಯವಸ್ಥೆಯನ್ನು ಬದಲಾಯಿಸಿ, ಅದನ್ನು ಪ್ರತಿಯೊಂದು ದೇಶಕ್ಕೂ ಸಮಾನ ಪಾಲುದಾರಿಕೆ ನೀಡುವ ವೇದಿಕೆಯನ್ನಾಗಿ ಪರಿವರ್ತಿಸಬೇಕು ಎಂದು ಅವರು ಯುಎನ್ಎಸ್‌ಸಿ ಸುಧಾರಣೆಗೆ ಆಗ್ರಹಿಸಿದರು.

ನಿರಂತರ ಕಾರ್ಯಾಚರಣೆ ಮತ್ತು ಅನುಷ್ಠಾನ ವ್ಯವಸ್ಥೆ:

ಶೃಂಗಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಹಾಗೂ ಯೋಜನೆಗಳನ್ನು ಸತತವಾಗಿ ಹಿಂಬಾಲಿಸಿ ಜಾರಿಗೆ ತರಲು ‘ಬ್ರಿಕ್ಸ್ ಕಂಟಿನ್ಯೂಟಿ ಆ್ಯಂಡ್ ಇಂಪ್ಲಿಮೆಂಟೇಶನ್ ಮೆಕಾನಿಸಂ’ ಅನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಒಕ್ಕೂಟದ ಸಾಂಸ್ಥಿಕ ವೇಗವು ಎಲ್ಲೂ ಕುಂಠಿತಗೊಳ್ಳಬಾರದು ಮತ್ತು ಜಾಗತಿಕ ದಕ್ಷಿಣದ ದೇಶಗಳು ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸಹಕಾರ ಮತ್ತಷ್ಟು ಹೆಚ್ಚಾಗಬೇಕು ಎಂದು ಮೋದಿ ಕರೆ ನೀಡಿದರು.

ಇದನ್ನೂ ಓದಿ: ಪುಟಿನ್​ಗೆ ಅಪ್ಪುಗೆಯ ಸ್ವಾಗತ ನೀಡಿದ ಪ್ರಧಾನಿ ಮೋದಿ; ತಮಿಳಿನ ತಿರುಕ್ಕುರಳ್ ಕೃತಿಯ ರಷ್ಯನ್ ಅನುವಾದ ಉಡುಗೊರೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸುಧಾರಣೆ ಬಿಗಿಗೊಳಿಸಿ:

ಯುಎನ್ಎಸ್‌ಸಿ ಸುಧಾರಣೆಯನ್ನು ಇನ್ನು ಮುಂದೆ ಮುಂದೂಡಲು ಸಾಧ್ಯವಿಲ್ಲ. ಇದಕ್ಕೆ ನಿರ್ದಿಷ್ಟ ಕಾಲಮಿತಿ ಮತ್ತು ಸ್ಪಷ್ಟ ಫಲಿತಾಂಶದ ಅಗತ್ಯವಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಹಕ್ಕಿನ ಸ್ವರೂಪವು ಇಂದಿನ ಆರ್ಥಿಕ ವಾಸ್ತವಕ್ಕೆ ಅನುಗುಣವಾಗಿ ಬದಲಾಗಬೇಕು ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು.

ನಾವಿಕರಿಗಾಗಿ ತುರ್ತು ನೆರವು ಜಾಲ:

ಅಮೆರಿಕ-ಇರಾನ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಸೇರಿದಂತೆ ಸಮುದ್ರ ಮಾರ್ಗಗಳಲ್ಲಿ ಸರಕು ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಕಳವಳ ವ್ಯಕ್ತಪಡಿಸಿದ ಮೋದಿ, ಜಾಗತಿಕ ವ್ಯಾಪಾರಕ್ಕೆ ನೆರವಾಗುವ ನಾವಿಕರ ಭದ್ರತೆಗಾಗಿ ‘ಸಮುದ್ರ ನಾವಿಕರ ತುರ್ತು ನೆರವು ಜಾಲ’ವನ್ನು ರೂಪಿಸಲು ಕರೆ ನೀಡಿದರು.

ಕೃತಕ ಬುದ್ಧಿಮತ್ತೆ (AI), ಸೈಬರ್ ಸ್ಪೇಸ್, ಬಾಹ್ಯಾಕಾಶ ಮತ್ತು ಬಯೋ-ಟೆಕ್ನಾಲಜಿಯಂತಹ ಭವಿಷ್ಯದ ತಂತ್ರಜ್ಞಾನಗಳ ನಿಯಮ ರೂಪಿಸುವಲ್ಲಿ ಗ್ಲೋಬಲ್ ಸೌತ್ ದೇಶಗಳು ಸಕ್ರಿಯವಾಗಿ ಭಾಗವಹಿಸಬೇಕು. ಬ್ರಿಕ್ಸ್ ವೇದಿಕೆಯ ಮೂಲಕ ಯುವ ರಾಜತಾಂತ್ರಿಕರಿಗೆ ಸೂಕ್ತ ತರಬೇತಿ ಹಾಗೂ ಶಕ್ತಿ ನೀಡಿ, ಬೆಳೆಸಲು ಭಾರತ ಸಿದ್ಧವಿದೆ ಎಂದು ಅವರು ಘೋಷಿಸಿದರು.

ಭಾರತದ ಅಧ್ಯಕ್ಷತೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎಲ್ಲಾ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ, ಜಾಗತಿಕ ವೇದಿಕೆಯಲ್ಲಿ ಬ್ರಿಕ್ಸ್ ತನ್ನದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿದ್ದು, ಈಗ ತಲುಪಿರುವ ಒಮ್ಮತದ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ ಎಂದು ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us