ವೆಸ್ಟ್​ ಬೆಂಗಾಲ್ ಅಥವಾ ಪಶ್ಚಿಮ ಬಂಗಾಳವಲ್ಲ, ಇನ್ಮುಂದೆ ಪಶ್ಚಿಂಬಂಗಾ, ರಾಜ್ಯದ ಮರುನಾಮಕರಣಕ್ಕೆ ಶೀಘ್ರವೇ ಹೊಸ ಮಸೂದೆ

ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಇನ್ಮುಂದೆ 'ಪಶ್ಚಿಂಬಂಗಾ' ಎಂದು ಮರುನಾಮಕರಣ ಮಾಡಲು ಬಿಜೆಪಿ ಸರ್ಕಾರ ಶೀಘ್ರದಲ್ಲೇ ಮಸೂದೆ ಮಂಡಿಸಲಿದೆ. ರಾಜ್ಯದ ಐತಿಹಾಸಿಕ ಅಸ್ಮಿತೆಯನ್ನು ಮರಳಿ ತರುವುದು ಇದರ ಮುಖ್ಯ ಉದ್ದೇಶ. 'ಬಾಂಗ್ಲಾ' ಅಥವಾ 'ಬಂಗಾ' ಎಂಬ ಹಿಂದಿನ ಪ್ರಸ್ತಾವನೆಗಳನ್ನು ತಿರಸ್ಕರಿಸಿ, ಕೇಂದ್ರದ ಅನುಮೋದನೆಯೊಂದಿಗೆ ರಾಜ್ಯದ ವಿಶಿಷ್ಟ ಪರಂಪರೆಯನ್ನು ಉಳಿಸುವ ಹೆಜ್ಜೆ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ವೆಸ್ಟ್​ ಬೆಂಗಾಲ್ ಅಥವಾ ಪಶ್ಚಿಮ ಬಂಗಾಳವಲ್ಲ, ಇನ್ಮುಂದೆ ಪಶ್ಚಿಂಬಂಗಾ,  ರಾಜ್ಯದ ಮರುನಾಮಕರಣಕ್ಕೆ ಶೀಘ್ರವೇ ಹೊಸ ಮಸೂದೆ
ಸುವೇಂದು ಅಧಿಕಾರಿ
Image Credit source: PTI

Updated on: Oct 08, 2026 | 9:59 AM

ಕೋಲ್ಕತ್ತಾ,ಅಕ್ಟೋಬರ್ 08: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಇಂಗ್ಲಿಷ್ ಹಾಗೂ ಇತರ ಎಲ್ಲಾ ಭಾಷೆಗಳಲ್ಲೂ ಅಧಿಕೃತವಾಗಿ ‘ಪಶ್ಚಿಂಬಂಗಾ’ (Paschimbanga) ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಹತ್ವದ ಮಸೂದೆಯನ್ನು ಮಂಡಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಉತ್ತರ ಬಂಗಾಳದ ಜಲ್ಪೈಗುರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಸ್ತಾವನೆಯು ಕೇವಲ ಒಬ್ಬ ವ್ಯಕ್ತಿ ಅಥವಾ ಪಕ್ಷದ ಬೇಡಿಕೆಯಲ್ಲ, ಬದಲಿಗೆ ರಾಜ್ಯದ ಐತಿಹಾಸಿಕ ಅಸ್ಮಿತೆಯನ್ನು ಉಳಿಸುವ ಪ್ರಯತ್ನವಾಗಿದೆ ಎಂದರು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಆಚಾರ್ಯ ದೇಬಪ್ರಸಾದ್ ಘೋಷ್ ಅವರಂತಹ ಮಹಾನ್ ನಾಯಕರ ಆಶಯದಂತೆ ಪಶ್ಚಿಮ ಬಂಗಾಳದ ವಿಶಿಷ್ಟ ಇತಿಹಾಸವನ್ನು ಜೀವಂತವಾಗಿಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಜೂನ್ 20, 1947 ರಂದು ಪಶ್ಚಿಮ ಬಂಗಾಳ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಇತಿಹಾಸವನ್ನು ಯಾರೂ ಮರೆಯಬಾರದು ಎಂದು ಭಟ್ಟಾಚಾರ್ಯ ಪ್ರತಿಪಾದಿಸಿದರು.

ಬಾಂಗ್ಲಾ’ ಅಥವಾ ‘ಬಂಗಾ’ ಹೆಸರುಗಳಿಗೆ ತಿರಸ್ಕಾರ:

ಹಿಂದಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ರಾಜ್ಯಕ್ಕೆ ಕೇವಲ ‘ಬಾಂಗ್ಲಾ’ ಅಥವಾ ‘ಬಂಗಾ’ ಎಂದು ಹೆಸರಿಡಲು ಮುಂದಾಗಿದ್ದನ್ನು ಅವರು ತಳ್ಳಿಹಾಕಿದ್ದರು. ಬಂಗಾಳಿ ಅಥವಾ ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ರಾಜ್ಯದ ಹೆಸರು ಅಧಿಕೃತವಾಗಿ ‘ಪಶ್ಚಿಂಬಂಗಾ’ ಎಂದೇ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಮತ್ತಷ್ಟು ಓದಿ:
ಬಂಗಾಳದಲ್ಲಿ 252 ಅಕ್ರಮ ಮದರಸಾಗಳಿಗೆ ಬೀಗ: ಬಾಂಗ್ಲಾ ಉಗ್ರರ ಆಶ್ರಯ ತಾಣ ಎಂದ ಸಚಿವ ದಿಲೀಪ್ ಘೋಷ್

ಟಿಎಂಸಿ ಸರ್ಕಾರದ ಬೇಡಿಕೆ:

ಮಮತಾ ಬ್ಯಾನರ್ಜಿ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯದ ಹೆಸರನ್ನು ‘ಬಾಂಗ್ಲಾ’ಎಂದು ಬದಲಾಯಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಇಂಗ್ಲಿಷ್ ವರ್ಣಮಾಲೆಯ ಪ್ರಕಾರ ‘West Bengal’ (W ಅಕ್ಷರ) ಕೊನೆಯಲ್ಲಿ ಬರುವುದರಿಂದ, ರಾಜ್ಯದ ಪ್ರತಿನಿಧಿಗಳಿಗೆ ಮಾತನಾಡಲು ಕಡೆಗೆ ಅವಕಾಶ ಸಿಗುತ್ತದೆ ಎಂಬುದು ಅವರ ವಾದವಾಗಿತ್ತು.

ಕೇಂದ್ರದ ತಡೆ:

‘ಬಾಂಗ್ಲಾ’ ಎಂಬ ಹೆಸರು ನೆರೆ ರಾಷ್ಟ್ರ ಬಾಂಗ್ಲಾದೇಶದ ಹೆಸರನ್ನು ಹೋಲುವುದರಿಂದ ಅಂತಾರಾಷ್ಟ್ರೀಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯವು ಆ ಮಸೂದೆಗೆ ಅನುಮೋದನೆ ನೀಡಿರಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:57 am, Thu, 8 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us