
ನವದೆಹಲಿ, ಸೆಪ್ಟೆಂಬರ್ 26: ಶುಕ್ರವಾರ ಸಂಜೆ ನವದೆಹಲಿಯಲ್ಲಿ ನಡೆದ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿ, ಜೆನ್-ಜಿ ಜೊತೆ ಆಧುನಿಕ ಭಜನೆಯನ್ನು ಎಂಜಾಯ್ ಮಾಡಿದ್ದರು. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದನ್ನು ಕಟುವಾಗಿ ಟೀಕಿಸಿರುವ ಕರ್ನಾಟಕದ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ಪ್ರಜಾಪ್ರಭುತ್ವದ ಮೇಲಿನ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಧಾನಿಯವರಿಗೆ ಸಮಯವಿಲ್ಲ, ಆದರೆ ಭಜನ್ ಕ್ಲಬ್ಬಿಂಗ್ನಲ್ಲಿ ಪಾಲ್ಗೊಳ್ಳಲು ಸಮಯವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಸಾಮಾಜಿಕ ಜಾಲತಾಣ ‘ಎಕ್ಸ್’ನ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯ ಚುನಾವಣಾ ಆಯುಕ್ತರ ಸುತ್ತಲಿನ ವಿವಾದಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ.
PM @narendramodi has time for “Bhajan Clubbing”, but no time to answer serious questions about the clubbing of democracy through the Election Commission.
For 13 years, there has been a familiar pattern: when difficult questions confront the government, the Prime Minister is… https://t.co/eAHAu158dx
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 26, 2026
“ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮಕ್ಕೆ ಹಾಜರಾಗಲು ಸಮಯವಿದೆ, ಆದರೆ ಚುನಾವಣಾ ಆಯೋಗದ ಮೂಲಕ ಪ್ರಜಾಪ್ರಭುತ್ವದ ಕ್ಲಬ್ಬಿಂಗ್ ಕುರಿತಾದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲು ಸಮಯವಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜತೆಗಿನ ಮಹಿಳೆಯ ಮಾರ್ಫ್ ಫೋಟೋ ಡಿಲೀಟ್ ಮಾಡಲು ಹೈಕೋರ್ಟ್ ಆದೇಶ; ಸಿಜೆಪಿ ನಾಯಕರಿಗೂ ನೋಟಿಸ್!
ಕಳೆದ 13 ವರ್ಷಗಳಿಂದಲೂ ಪ್ರಧಾನಿ ಮೋದಿ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. “ಕಳೆದ 13 ವರ್ಷಗಳಿಂದ ತಮ್ಮ ಸರ್ಕಾರಕ್ಕೆ ಯಾವುದೇ ಕಷ್ಟಕರ ಹಾಗೂ ಗಂಭೀರ ಪ್ರಶ್ನೆಗಳು ಎದುರಾದಾಗಲೆಲ್ಲಾ ಪ್ರಧಾನಿ ಮೋದಿಯವರಿಗೆ ಉತ್ತರ ನೀಡದೆ ಮೌನಕ್ಕೆ ಶರಣಾಗುವುದು ಅಭ್ಯಾಸವಾಗಿಬಿಟ್ಟಿದೆ. ಹಬ್ಬ, ಆಚರಣೆಗಳು ಮತ್ತು ಸಂಭ್ರಮದ ಸ್ಥಳಗಳಲ್ಲಿ ಅವರ ಉಪಸ್ಥಿತಿ ಇರುತ್ತದೆ, ಆದರೆ ಹೊಣೆಗಾರಿಕೆಯ ವಿಚಾರ ಬಂದಾಗ ಅವರ ಮೌನವೇ ಉತ್ತರವಾಗುತ್ತದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ: ಭಜನ್ ಕ್ಲಬ್ಬಿಂಗ್ನಲ್ಲಿ ಮೋದಿ; ಯುವಕರ ಜೊತೆ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ
ಶುಕ್ರವಾರ ಸಂಜೆ ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಪಾರ್ಕ್‌ನಲ್ಲಿ ಜನಸಂಘದ ನಾಯಕ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ಜೆನ್-ಜಿ ಯುವಜನರಿಗಾಗಿ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಗಾಯಕರ ಭಕ್ತಿಗೀತೆಗಳನ್ನು ಆಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ