ಪ್ರಧಾನಿ ಮೋದಿ ಜತೆಗಿನ ಮಹಿಳೆಯ ಮಾರ್ಫ್ ಫೋಟೋ ಡಿಲೀಟ್ ಮಾಡಲು ಹೈಕೋರ್ಟ್ ಆದೇಶ; ಸಿಜೆಪಿ ನಾಯಕರಿಗೂ ನೋಟಿಸ್!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಹಿಳೆಯೊಬ್ಬರ ಫೋಟೋವನ್ನು ಅಸಭ್ಯವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್, ಆಕ್ಷೇಪಾರ್ಹ ಫೋಟೋಗಳು ಮತ್ತು ಲಿಂಕ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ 'ಮೆಟಾ' ಸಂಸ್ಥೆಗೆ ಇಂದು ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಗಿರೀಶ ಕಥ್‌ಪಾಲಿಯಾ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ. ಸಂತ್ರಸ್ತ ಮಹಿಳೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್, ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ರತ್ನಾ ಸಿಂಗ್ ಅವರಿಗೂ ಹೈಕೋರ್ಟ್ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ನವದೆಹಲಿ, ಸೆಪ್ಟೆಂಬರ್ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಅಸಭ್ಯ ಡೀಪ್‌ಫೇಕ್ ಫೋಟೋಗಳನ್ನು ಪ್ರತಿಭಟನೆ ವೇಳೆ ಬಳಸಲಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ರಾಜಕೀಯ ಕಾರ್ಯಕರ್ತರಾದ ಸೌರವ್ ದಾಸ್, ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ ಮತ್ತು ರತ್ನಾ ಸಿಂಗ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸಂತ್ರಸ್ತೆಯ ವಿರುದ್ಧ ನಡೆದ ‘ಸಾರ್ವಜನಿಕ ಚಾರಿತ್ರ್ಯ ವಧೆ ಹಾಗೂ ಸೈಬರ್ ದಾಳಿ’ಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಎಲ್ಲ ಸಾಮಾಜಿಕ ಜಾಲತಾಣ ಮಧ್ಯವರ್ತಿಗಳಿಗೆ ಸಂಬಂಧಿಸಿದ ಅಸಭ್ಯ ಪೋಸ್ಟ್‌ಗಳನ್ನು 24 ಗಂಟೆಗಳ ಒಳಗೆ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ಸಂಪೂರ್ಣವಾಗಿ ಡಿಲೀಟ್ ಮಾಡಲು ಆದೇಶಿಸಿದೆ. ಜೊತೆಗೆ ಅರ್ಜಿದಾರ ಮಹಿಳೆಗೆ ತಕ್ಷಣವೇ ಪೊಲೀಸ್ ರಕ್ಷಣೆ ಒದಗಿಸುವಂತೆ ನಿರ್ದೇಶಿಸಿದೆ.
ಕೊಲೆ ಹಾಗೂ ಅತ್ಯಾಚಾರ ಬೆದರಿಕೆಗಳನ್ನು ಎದುರಿಸುತ್ತಿರುವ ಸಂತ್ರಸ್ತೆಯ ಭದ್ರತೆಯ ಕುರಿತು ಆತಂಕ ವ್ಯಕ್ತಪಡಿಸಿದ ಪೀಠವು, ಆಕೆಗೆ ಸಂಪೂರ್ಣ ರಕ್ಷಣೆ ನೀಡುವಂತೆ ಮತ್ತು ಮುಂದಿನ ಕಿರುಕುಳಗಳನ್ನು ತಡೆಯಲು ಸತತ ನಿಗಾವಹಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದೆ.
ಇದನ್ನೂ ಓದಿ: ಎಸ್ಐಆರ್ ವಿವಾದ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಎಸ್‌ಐಟಿ ತನಿಖೆಗೆ ಆಗ್ರಹ
ದೆಹಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖಾ ಸ್ಥಿತಿ ವರದಿಯನ್ನು 2 ವಾರಗಳಲ್ಲಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಲಾಗಿದೆ. ಅಲ್ಲಿಯವರೆಗೆ ಸಂತ್ರಸ್ತೆ ಮಹಿಳೆಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲು ನಿರ್ದೇಶಿಸಲಾಗಿದೆ. ಹೈಕೋರ್ಟ್ ಆದೇಶದಂತೆ ಮೆಟಾ ಸಂಸ್ಥೆಯು (ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ) ತನ್ನ ಎಲ್ಲ ವೇದಿಕೆಗಳು ಹಾಗೂ ಸಂಬಂಧಿತ ವೆಬ್‌ಸೈಟ್‌ಗಳಿಂದ ಎಐ-ನಿರ್ಮಿತ ಮಾರ್ಫ್ ಮಾಡಿದ ಎಲ್ಲ ಫೋಟೋಗಳು ಮತ್ತು ಲಿಂಕ್‌ಗಳನ್ನು 24 ಗಂಟೆಯ ಒಳಗೆ ಡಿಲೀಟ್ ಮಾಡಬೇಕಾಗಿದೆ.
ಹೈಕೋರ್ಟ್ ಕಠಿಣ ನಿಲುವು:
ಈ ಪ್ರಕರಣದ ಗಂಭೀರತೆಯನ್ನು ಎತ್ತಿಹಿಡಿದ ನ್ಯಾಯಪೀಠವು, ಸಮ್ಮತಿಯಿಲ್ಲದೆ ಮಹಿಳೆಯ ಫೋಟೋವನ್ನು ದುರುಪಯೋಗಪಡಿಸಿಕೊಂಡಿರುವುದು ವ್ಯಕ್ತಿಯ ಆತ್ಮಗೌರವಕ್ಕೆ ಮಾತ್ರವಲ್ಲದೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೂ ಧಕ್ಕೆ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದೆ. “ಈ ಪ್ರಕರಣವು ಕೇವಲ ಒಬ್ಬ ಮಹಿಳೆಗೆ ಸೀಮಿತವಾದುದಲ್ಲ, ಇದು ನೇರವಾಗಿ ದೇಶದ ಪ್ರಧಾನಮಂತ್ರಿಯವರಿಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಈ ತನಿಖೆಯನ್ನು ಅತ್ಯಂತ ಜವಾಬ್ದಾರಿ ಹಾಗೂ ಸೂಕ್ಷ್ಮತೆಯಿಂದ ನಿರ್ವಹಿಸಬೇಕು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಹಿಳೆಯ ದೂರಿನಲ್ಲಿ ಏನಿದೆ?:
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜೊತೆ ಇರುವ ಕಾರ್ಯಕರ್ತರು ಮಹಿಳೆಯ ಖಾಸಗಿ ಫೋಟೋವನ್ನು ಅವರ ಅನುಮತಿಯಿಲ್ಲದೆ ಪಡೆದು, ಎಐ ಫೇಸ್-ಸ್ವಾಪಿಂಗ್ ತಂತ್ರಜ್ಞಾನದ ಮೂಲಕ ಪ್ರಧಾನಿ ಮೋದಿಯವರೊಂದಿಗೆ ಅಸಭ್ಯವಾಗಿ ಎಡಿಟ್ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಈ ಎಡಿಟ್ ಮಾಡಿದ ಫೋಟೋಗಳನ್ನು ಬೃಹತ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಲ್ಲಿ ಮುದ್ರಿಸಿ ಜಂತರ್ ಮಂತರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಪ್ರದರ್ಶಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ
ಪ್ರಕರಣದ ಹಿನ್ನೆಲೆ:
ಜಂತರ್ ಮಂತರ್ ಪ್ರತಿಭಟನೆ ವೇಳೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಫೇಸ್-ಸ್ವಾಪಿಂಗ್ ತಂತ್ರಜ್ಞಾನವನ್ನು ಬಳಸಿ ತನ್ನ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋದೊಂದಿಗೆ ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಮಾರ್ಫ್ ಮಾಡಿದ ಫೋಟೋವನ್ನು ಪ್ರತಿಭಟನೆಯಲ್ಲಿ ದೊಡ್ಡ ಬ್ಯಾನರ್‌ಗಳು ಹಾಗೂ ಪೋಸ್ಟರ್‌ಗಳಲ್ಲಿ ಬಳಸಲಾಗಿದ್ದು, ಅಸಭ್ಯ ಘೋಷಣೆಗಳನ್ನು ಕೂಗಲಾಗಿತ್ತು. ಅಲ್ಲದೆ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ವೀಡಿಯೊಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ. ಹೈಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




