Corona Alert: ಒಂದು ವರ್ಷದ ಹಿಂದೆ ಇಡೀ ಜಗತ್ತಿನಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ಇಂದು ಭಾರತದಲ್ಲಿದೆ

Covid 19: ಇಂದಿನ (ಮೇ​ 6, 2021) ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ 35,66,398ಸಕ್ರಿಯ ಪ್ರಕರಣಗಳಿವೆ. ಇಷ್ಟರಲ್ಲಾಗಲೇ 2,30,168 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ 2020ರ ಮೇ​ 6ರ ವರದಿಯ ಪ್ರಕಾರ ಅವತ್ತು ಇಡೀ ವಿಶ್ವದಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 35,25,116 ಹಾಗೂ ಅಂದಿಗೆ ಮೃತರಾಗಿದ್ದ ಒಟ್ಟು ಸೋಂಕಿತರ ಸಂಖ್ಯೆ 2,43,540.

  • Updated On - 7:38 am, Fri, 7 May 21
Corona Alert: ಒಂದು ವರ್ಷದ ಹಿಂದೆ ಇಡೀ ಜಗತ್ತಿನಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಪ್ರಮಾಣ ಇಂದು ಭಾರತದಲ್ಲಿದೆ
ಸಾಂದರ್ಭಿಕ ಚಿತ್ರ

ಭಾರತವೀಗ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದೆ. ಇದನ್ನು ಸ್ವಯಂಕೃತ ಅಪರಾಧವೆನ್ನಬೇಕೋ, ವ್ಯವಸ್ಥೆಯ ತಪ್ಪಿಗೆ ಜನ ಅನುಭವಿಸುತ್ತಿರುವ ಶಿಕ್ಷೆ ಎನ್ನಬೇಕೋ ಅಥವಾ ಆಕಸ್ಮಿಕ ಆಘಾತ ಎನ್ನಬೇಕೋ ಎಂದು ಪರಾಂಬರಿಸಿದರೆ ಒಂದೊಂದು ಆಯಾಮವೂ ಒಂದೊಂದು ಬಗೆಯ ಸತ್ಯವನ್ನು ಹೊರಗೆಡುವುತ್ತದೆ. ಕೊರೊನಾ ಮೊದಲ ಅಲೆಯಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದಿದ್ದರೂ ಬೇರೆ ದೇಶಗಳಿಗಿಂತ ತುಸು ಸುಲಭವಾಗಿ ಹಾಗೂ ಯಶಸ್ವಿಯಾಗಿ ಸನ್ನಿವೇಶವನ್ನು ನಿಭಾಯಿಸಿದ ಭಾರತಕ್ಕೆ ಅದುವೇ ಮುಳುವಾದಂತಿದೆ. ಇಡೀ ವೈದ್ಯ ವೃಂದದ ಸಲಹೆ, ಸೂಚನೆಗಳಿದ್ದರೂ ಅವೆಲ್ಲವನ್ನೂ ನಿರ್ಲಕ್ಷಿಸಿ ಚುನಾವಣೆ, ಸಭೆ, ಸಮಾರಂಭಗಳನ್ನು ಆಯೋಜಿಸಿದ ರಾಜಕೀಯ ವ್ಯವಸ್ಥೆ. ಸರ್ಕಾರದ ನೀತಿ ನಿಯಮಗಳ ವಿರುದ್ಧದ ಆಕ್ರೋಶದ ನಡುವೆ ಕೊರೊನಾ ಇದೆ ಎಂಬುದನ್ನೇ ಮರೆತು ನಿರಂತರ ಹೋರಾಟ, ಪ್ರತಿಭಟನೆಯಲ್ಲಿ ತೊಡಗಿಕೊಂಡ ಜನರು. ಮೊದಲ ಅಲೆಯಲ್ಲೇ ಏನೂ ಆಗಿಲ್ಲ, ಕೊರೊನಾ ಎಲ್ಲಾ ಸುಳ್ಳು, ಇದು ದುಡ್ಡಿಗಾಗಿ ಸರ್ಕಾರ ಹಾಗೂ ಆಸ್ಪತ್ರೆಗಳು ಮಾಡುತ್ತಿರುವ ನಾಟಕ ಎಂಬ ಉಡಾಫೆ ಹೊತ್ತು ತಿರುಗಿದ ಮಂದಿ. ಭಾರತದವರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ, ಬೇರೆ ದೇಶಗಳಂತೆ ನಾವಲ್ಲ ಎಂಬ ಹುಂಬರ ಗುಂಪು ಹಾಗೂ ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂದರೂ ಲಸಿಕೆಯ ಬಗ್ಗೆ ವಿಶ್ವಾಸವಿಲ್ಲದೇ ಅದನ್ನೇ ಅನುಮಾನಿಸಿ, ರಾಜಕೀಯದ ಬಣ್ಣ ಬಳಿದು ಎರಡನೇ ಅಲೆ ಬರುವ ತನಕವೂ ಟೀಕೆಯಲ್ಲೇ ಮುಳುಗಿದ್ದವರು. ಹೀಗೆ ಈ ಎಲ್ಲಾ ಬೆಳವಣಿಗೆಗಳು ಒಂದಕ್ಕೊಂದು ಕೊಂಡಿಯಂತಾಗಿ ಇಂದಿನ ಪರಿಸ್ಥಿತಿಯಲ್ಲಿ ನಮ್ಮನ್ನು ಅಸಹಾಯಕರನ್ನಾಗಿಸಿ ಕಟ್ಟಿಹಾಕಿವೆ.

ನಿಮಗೆ ನೆನಪಿರಬಹುದು ಭಾರತದಲ್ಲಿ ಲಸಿಕೆ ತಯಾರಾಗುತ್ತಿದೆ ಎಂದಾಗ ಅದರ ಕಾರ್ಯಕ್ಷಮತೆಯ ಬಗ್ಗೆ ಅನುಮಾನವೆದ್ದಿತ್ತು. ಅಷ್ಟೇ ಅಲ್ಲದೇ ಲಸಿಕೆಯ ಉದ್ದೇಶದ ಬಗ್ಗೆಯೂ ಸಂಶಯ ಹುಟ್ಟುಹಾಕಿದ ಕೆಲವರು ಅದರಲ್ಲಿ ದನದ ಕೊಬ್ಬಿದೆ, ಹಂದಿ ರಕ್ತವಿದೆ, ಸಂತಾನ ಹರಣ ಮಾಡುವ ಅಂಶವಿದೆ ಎಂದೆಲ್ಲಾ ತಲೆಬುಡವಿಲ್ಲದೇ ಮಾತನಾಡಿ ಮುಗ್ಧ ಜನರ ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಘನ ಭಾರತ ಸರ್ಕಾರ ಕೂಡಾ ಲಸಿಕೆಯ ಬಗ್ಗೆ ಆರಂಭ ಶೂರತ್ವವನ್ನು ತೋರಿತೇ ವಿನಃ ನಂತರದ ದಿನಗಳಲ್ಲಿ ದೇಶಕ್ಕಾಗಿ ಹೆಚ್ಚಿನ ಲಸಿಕೆ ಉತ್ಪಾದಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಿರಲಿಲ್ಲ ಎನ್ನುವುದನ್ನು ಇತ್ತೀಚಿನ ಕೆಲ ಅಂಕಿ ಅಂಶಗಳು ತೋರ್ಪಡಿಸಿವೆ. ಇಲ್ಲಿ ನಾವು ಹೊರದೇಶಗಳಿಗೆ ಸಹಾಯ ಹಸ್ತ ಚಾಚಿದ್ದರ ಬಗ್ಗೆ ಪಶ್ಚಾತ್ತಾಪ ಪಡಬೇಕಾಗಿದ್ದೇನಿಲ್ಲ. ಆದರೆ, ಅದರ ಜತೆಗೆ ನಮ್ಮ ದೇಶಕ್ಕೆ ಬೇಕಾದಷ್ಟು ಲಸಿಕೆ ಉತ್ಪಾದಿಸುವತ್ತ ಗಮನ ಹರಿಸದೇ ಇದ್ದಿದ್ದನ್ನು ಪ್ರಶ್ನಿಸಬೇಕಿದೆ.

ಈ ಎಲ್ಲಾ ಅಪಸವ್ಯಗಳ ಜ್ವಾಲೆಗೆ ಮತ್ತಷ್ಟು ತುಪ್ಪ ಸುರಿಯುವಂತೆ ನಮ್ಮ ರಾಜಕೀಯ ನೇತಾರರು ಚುನಾವಣಾ ಸಂದರ್ಭದಲ್ಲಿ ನಡೆದುಕೊಂಡ ಬಗೆ ಇದೆಯಲ್ಲಾ ಅದು ನಿಸ್ಸಂದೇಹವಾಗಿ ಅಕ್ಷಮ್ಯ. ಮತದಾರರನ್ನು ಸೆಳೆಯುವ ಹುಮ್ಮಸ್ಸು ಹಾಗೂ ಗೆಲುವಿನ ಅಲೆಯಲ್ಲಿ ತೇಲುವ ಮದದಲ್ಲಿ ಸರ್ಕಾರ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಕೊರೊನಾ ಎರಡನೇ ಅಲೆಯನ್ನು ಕಡೆಗಣಿಸಿಬಿಟ್ಟವು. ಯಾವಾಗ ಆಡಳಿತ ವರ್ಗವೇ ಅಂಕೆ ಇಲ್ಲದಂತೆ ವರ್ತಿಸುತ್ತದೋ ಆಗ ಜನಸಾಮಾನ್ಯರಿಂದ ನಿಯಮ ಪಾಲನೆಯಂತಹ ಸನ್ನಡತೆಯನ್ನು ಅಪೇಕ್ಷಿಸುವುದು ಅಸಾಧ್ಯ. ಅತ್ತ ರಾಜಕೀಯ ನಾಯಕರು ತಮ್ಮ ಪ್ರಚಾರ ಕಾರ್ಯಗಳಿಗಾಗಿ ಜನರನ್ನು ಗುಂಪುಗೂಡಿಸಿಕೊಂಡು ಪ್ರಚಾರ ಮಾಡುತ್ತಿದ್ದರೆ ಅದೇ ಸಂದರ್ಭದಲ್ಲಿ ಕೊರೊನಾ ರಾಜಮಾರ್ಗವನ್ನು ಕಂಡುಕೊಂಡು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಾ ಬಂತು. ಲಸಿಕೆ ತೆಗೆದುಕೊಳ್ಳಿ, ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬಾಯಿಮಾತಿಗೆ ಹೇಳುತ್ತಾ ನಾವು ಇನ್ನೇನು ಕೊರೊನಾವನ್ನು ಬಹುತೇಕ ಮಣಿಸಿ ಆಗಿದೆ, ಭಾರತವೀಗ ಕೊರೊನಾವನ್ನು ಮಟ್ಟಹಾಕುವ ಕೊನೆಯ ಹಂತದಲ್ಲಿದೆ ಎಂದು ಯುದ್ಧೋನ್ಮಾದದ ಮಾತುಗಳನ್ನಾಡಿದ ಒಬ್ಬರೇ ಒಬ್ಬ ಜನಪ್ರತಿನಿಧಿ ಜನಸಾಮಾನ್ಯರಲ್ಲಿ ಕೊರೊನಾ ಬಗೆಗಿನ ಕಾಳಜಿಯನ್ನು ಕುಂಠಿತಗೊಳಿಸುತ್ತಿದ್ದೇವೆ ಎಂಬ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ.

ಆಳುವವರು ಮೈಮರೆತಾಗ ಎಚ್ಚರಿಸಬೇಕಾಗಿದ್ದ ನಾವೆಲ್ಲರೂ ಕೊರೊನಾ ಗೆದ್ದ ಭ್ರಮೆಯಲ್ಲಿದ್ದೆವು. ನಡುವಲ್ಲಿ ಯಾರಾದರೂ ಎಚ್ಚರಿಕೆಯ ಮಾತುಗಳನ್ನಾಡಿದರೂ ಜಾಣ ಕಿವುಡುತನದ ಮುಂದೆ ಅದು ಉಪಯೋಗಕ್ಕೆ ಬರಲಿಲ್ಲ. ಆರೋಗ್ಯದ ಬಗ್ಗೆ ಒಂದಿಡೀ ವರ್ಷ ಕೊರೊನಾ ಕಲಿಸಿದ್ದ ಪಾಠವನ್ನು ಅತೀ ಕಡಿಮೆ ಸಮಯದಲ್ಲಿ ಮರೆತುಬಿಟ್ಟೆವು. ಯಾರಾದರೂ ಟೀಕಿಸಿದಾಗ ಭಾರತದಂತಹ 135 ಕೋಟಿ ಜನಸಂಖ್ಯೆಯುಳ್ಳ ಬೃಹತ್ ರಾಷ್ಟ್ರವನ್ನು ನಿಭಾಯಿಸುವುದು ಮನೆ ನಡೆಸಿದಂತೆ ಅಲ್ಲ ಎಂಬ ವ್ಯಂಗ್ಯದ ಮಾತುಗಳು ಹೊರಬಿದ್ದವೇ ವಿನಃ ಅದೇ 135 ಕೋಟಿ ಜನರು ಒಮ್ಮೆಲೆ ಸಂಕಷ್ಟಕ್ಕೆ ಸಿಲುಕಿದರೆ ಬಚಾವು ಮಾಡುವುದು ಹೇಗೆ ಎಂಬ ಜವಾಬ್ದಾರಿಯ ಯೋಚನೆಗೆ ಒತ್ತು ನೀಡಲಿಲ್ಲ. ಹೀಗಾಗಿಯೇ ಇವತ್ತು ಆಕ್ಸಿಜನ್ ಇಲ್ಲ, ರೆಮ್​ಡಿಸಿವಿರ್ ಇಲ್ಲ, ಐಸಿಯು ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಬಡಬಡಾಯಿಸುತ್ತಿರುವುದಕ್ಕೆ ನಮ್ಮ ನಿರ್ಲಕ್ಷ್ಯ ಧೋರಣೆಯ ಕಾಣಿಕೆ ಇದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

ಎರಡನೇ ಅಲೆ ಉಲ್ಬಣಿಸಿದ ನಂತರ ಇಡೀ ದೇಶದಲ್ಲಿ ಸೂತಕದ ವಾತಾವರಣ ಏಕಾಏಕಿ ಸೃಷ್ಟಿಯಾಗಿದೆ. ಕಳೆದ ಬಾರಿ ಪೂರ್ವ ತಯಾರಿ ಇಲ್ಲದಿದ್ದರೂ ಪರಿಸ್ಥಿತಿ ಎದುರಿಸಿದ್ದ ದೇಶ ಈ ಬಾರಿ ನಿರ್ಲಕ್ಷ್ಯತನದ ಕಾರಣಕ್ಕಾಗಿ ಅಸಹಾಯಕತೆ ತೋರ್ಪಡಿಸುವ ಸ್ಥಿತಿ ಬಂದುಬಿಟ್ಟಿದೆ. ಇದರ ಮಧ್ಯದಲ್ಲಿ ಬೆಡ್ ಬ್ಲಾಕಿಂಗ್, ಅಕ್ರಮ ಆಕ್ಸಿಜನ್ ಮಾರಾಟ, ರೆಮ್​ಡಿಸಿವಿರ್ ದಂಧೆಯಂತಹ ಮೋಸದ ಜಾಲ ಹಬ್ಬಿಕೊಂಡಿರುವುದರಿಂದ ಎಷ್ಟೋ ಜನ ಅಸಹಾಯಕತೆಯಿಂದ ಪ್ರಾಣಬಿಡುತ್ತಿದ್ದಾರೆ. ಸತ್ತವರಿಗೆ ಅಂತ್ಯಸಂಸ್ಕಾರ ನಡೆಸುವುದಕ್ಕೂ ಹಣ ಚೆಲ್ಲಬೇಕಾದ, ಸ್ಮಶಾನದಿಂದ ಸ್ಮಶಾನಕ್ಕೆ ಅಲೆಯಬೇಕಾದ ಕರಾಳ ಪರಿಸ್ಥಿತಿ ನೋಡನೋಡುತ್ತಲೇ ಸೃಷ್ಟಿಯಾಗಿದೆ.

ಕಳೆದ ವರ್ಷ ಇಡೀ ಜಗತ್ತು ಹೊತ್ತಿದ್ದ ಭಾರ ಈಗ ಭಾರತದ ಬೆನ್ನಮೇಲಿದೆ
ಅಪಾಯದ ಹೊಸ್ತಿಲನ್ನು ಬಲಗಾಲಿಟ್ಟು ದಾಟಿಬಿಟ್ಟಿದ್ದೇವೆ. ಸುತ್ತಲೂ ಉಸಿರುಗಟ್ಟಿಸುವ ವಾತಾವರಣವೇ ಇರುವಾಗ ಬದುಕುವ ಒತ್ತಾಸೆಯನ್ನು ಹಿಡಿದಿಟ್ಟುಕೊಳ್ಳುವುದು ಸವಾಲು. ಆದರೆ, ನಮಗೀಗ ಇರುವ ಒಂದೇ ಒಂದು ದಾರಿಯೆಂದರೆ ಇನ್ನೊಂದು ಬಾಗಿಲನ್ನು ಹುಡುಕಿ ಅಪಾಯದಿಂದ ಪಾರಾಗಬೇಕಿರುವುದು. ಇಂದಿನ (ಮೇ​ 6, 2021) ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ 35,66,398ಸಕ್ರಿಯ ಪ್ರಕರಣಗಳಿವೆ. ಇಷ್ಟರಲ್ಲಾಗಲೇ 2,30,168 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಇಡೀ ಜಗತ್ತಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಪ್ರಮಾಣದ ಸಂಖ್ಯೆ ಬಹುತೇಕ ಇಂದಿನ ಭಾರತದ ಅಂಕಿ ಅಂಶಕ್ಕೆ ಸಮನಾಗಿತ್ತು. 2020ರ ಮೇ​ 6ರ ವರದಿಯ ಪ್ರಕಾರ ಅವತ್ತು ಇಡೀ ವಿಶ್ವದಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 35,25,116 ಹಾಗೂ ಅಂದಿಗೆ ಮೃತರಾಗಿದ್ದ ಒಟ್ಟು ಸೋಂಕಿತರ ಸಂಖ್ಯೆ 2,43,540. ಅಂದರೆ ಇಡೀ ಜಗತ್ತು ಒಂದು ವರ್ಷದ ಹಿಂದೆ ಅನುಭವಿಸಿದ್ದ ನೋವಿನ ಭಾರ ಪ್ರಸ್ತುತ ಭಾರತ ಅನುಭವಿಸುತ್ತಿದೆ. ಒಂದುವೇಳೆ ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಮಳೆಗಾಲಕ್ಕೂ ನಮ್ಮ ಸುತ್ತಲೂ ಹತ್ತಿರುವ ಚಿತೆಗಳು ಆರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಪ್ರಸ್ತುತ ಆಗುತ್ತಿರುವ ಬೆಳವಣಿಗೆಗಳಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ಕೊವಿಡ್​ ಲಸಿಕೆಗೆ ತಾತ್ಕಾಲಿಕ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿವೆ. ಅಮೆರಿಕಾ ಕೂಡ ಈ ಬೇಡಿಕೆಗೆ ಬೆಂಬಲ ಸೂಚಿಸಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲು ನಿರ್ಣಯ ಕೈಗೊಳ್ಳಲಾಗಿದ್ದು, ಸದರಿ ಬೇಡಿಕೆ ಈಡೇರಿದಲ್ಲಿ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಿಗೆ ಲಸಿಕೆ ಉತ್ಪಾದನೆ ಹೆಚ್ಚಿಸಿಕೊಳ್ಳಲು ಬಲ ದೊರೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಮೂರನೇ ಅಲೆ ಬಾರದಂತೆ ನೋಡಿಕೊಳ್ಳಲು, ಬಂದರೂ ಜೀವಹಾನಿಯಾಗದಂತೆ ಜನರನ್ನು ರಕ್ಷಿಸಿಕೊಳ್ಳಲು ಇರುವ ಭರವಸೆ ಲಸಿಕೆ ಆಗಿರುವುದರಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಹಾಗೂ ಏಕಕಾಲದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಾಗುತ್ತಿರುವ ವೈದ್ಯರು ಮತ್ತು ದಾದಿಯರ ಕೊರತೆಯನ್ನು ಸರಿದೂಗಿಸಲು ಸೂಕ್ತ ಕ್ರಮವನ್ನೂ ಕೈಗೊಳ್ಳುವ ಮೂಲಕ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವತ್ತ ಪ್ರಾಮುಖ್ಯತೆ ನೀಡಬೇಕಿದೆ.

ಇದನ್ನೂ ಓದಿ:
ಸಂಪೂರ್ಣ ಲಾಕ್​ಡೌನ್​ ಮಾಡಿದರೂ ರಾಜ್ಯದಲ್ಲಿ ಜೂನ್​ ವೇಳೆಗೆ 28 ಸಾವಿರ ಸಾವು, ಮಾಡದೇ ಇದ್ದರೆ ಪರಿಸ್ಥಿತಿ ಅಯೋಮಯ: ತಜ್ಞರ ವರದಿ 

ಕೊರೊನಾ ಲಸಿಕೆಗೆ ಪೇಟೆಂಟ್​ ಬೇಡ, ಯಾವ ಸಂಸ್ಥೆ ಬೇಕಿದ್ದರೂ ಅಂಗೀಕೃತ ಲಸಿಕೆ ಉತ್ಪಾದಿಸಲಿ; ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ

(Total number of active covid cases and death rate in India on May 6th 2021 is almost equal to the World statistics on May 6th 2020)