ಕ್ಷಮೆ ಮುಗಿದ ಅಧ್ಯಾಯ ಅಲ್ಲ: ಎರಡನೇ ಬಾರಿ ‘ಅದೇ’ ಜೋಕ್​ ಮಾಡಿದ ರಮೇಶ್​ ಕುಮಾರ್​ ಕಾಂಗ್ರೆಸ್​ ಪಕ್ಷಕ್ಕೆ ಕಪ್ಪು ಚುಕ್ಕೆ

ಕ್ಷಮೆ ಮುಗಿದ ಅಧ್ಯಾಯ ಅಲ್ಲ: ಎರಡನೇ ಬಾರಿ 'ಅದೇ' ಜೋಕ್​ ಮಾಡಿದ ರಮೇಶ್​ ಕುಮಾರ್​ ಕಾಂಗ್ರೆಸ್​ ಪಕ್ಷಕ್ಕೆ ಕಪ್ಪು ಚುಕ್ಕೆ
ಕೆಆರ್​ ರಮೇಶ್​ ಕುಮಾರ್​

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಗುರುವಾರ ರೇಪ್ ಬಗ್ಗೆ​ ಅತ್ಯಂತ ಕೀಳು ಮಟ್ಟದ ಜೋಕ್​ ಮಾಡಿದ ರಮೇಶ್​​ ಕುಮಾರ್​ ಹೆಂಗಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ಬಾರಿ ಈ ರೀತಿ ಮಾತನಾಡಿದ ರಮೇಶ್​ ಕುಮಾರ್, ನೈತಿಕವಾಗಿ​ ಅಕ್ಷಮ್ಯ ಅಪರಾಧ ಮಾಡಿದ್ದಾರೆ.

bhaskar hegde

| Edited By: Apurva Kumar Balegere

Dec 17, 2021 | 4:40 PM

ಆಗ ಸಿದ್ಧರಾಮಯ್ಯ​ (Siddaramaiah) ಕರ್ನಾಟಕದ ಮುಖ್ಯಮಂತ್ರಿ. ಬಿಜೆಪಿ ಪ್ರಧಾನ ವಿರೋಧ ಪಕ್ಷದಲ್ಲಿ ಕುಳಿತಿತ್ತು. ಮಾಜಿ ಸಭಾಧ್ಯಕ್ಷ ರಮೇಶ್​ ಕುಮಾರ್ (Ramesh Kumar)​ ಇನ್ನು ಮಂತ್ರಿ ಆಗಿರಲಿಲ್ಲ. ಸದನ ನಡೆಯುತ್ತಿದ್ದಾಗಲೆಲ್ಲ ಪ್ರತಿದಿನ ಒಂದು ಅಥವಾ ಎರಡು ಬಾರಿ ಯಾವುದಾದರೂ ಚರ್ಚೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡುತ್ತಿದ್ದರು. ಟಿವಿ ಚಾನೆಲ್​ಗಳಲ್ಲಿ ಆ ದಿನ ರಾತ್ರಿಯೇ ಪ್ರಮುಖ ಸುದ್ದಿಗಳ ಮಧ್ಯೆ ಅವರ ಹೇಳಿಕೆ ಪ್ರಸಾರವಾಗುತ್ತಿತ್ತು. ಮರುದಿನ ಅವರ ಹೇಳಿಕೆ ಅತ್ಯಂತ ಪ್ರಮುಖ ವಿಷಯವಾಗಿ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿತ್ತು. ಅವರ ಮಾತಿನ ಲಹರಿಯೇ ಹಾಗೆ- ಒಮ್ಮೆ ನಗು ಉಕ್ಕಿಸುವ ಹಾಸ್ಯ; ಇನ್ನೊಮ್ಮೆ ಮನ ಕಲಕಬಹುದಾದ ಘಟನೆಗಳ ವಿವರಣೆ; ಮಗದೊಮ್ಮೆ ನೇರ ಮಾತಿನ ಮೂಲಕ ಬಿಜೆಪಿಯ ಐಡಿಯಾಲಜಿಯ ತಲೆ ಮೇಲೆ ಕುಟ್ಟುವ ಮಾತು- ಈ ರೀತಿಯ ಮಾತಿನ ವರಸೆ ಮೂಲಕ ವಿರೋಧ ಪಕ್ಷ ಬಿಜೆಪಿಗೆ (BJP) ಚಾಟಿ ಏಟು ನೀಡುತ್ತ ಸದಸ್ಯರಿಂದ ಮೇಜು ಕುಟ್ಟಿಸಿಕೊಂಡು, “ರಮೇಶ್​ ಕುಮಾರ್​ ಭೇಷ್​ ಭೇಷ್, ಬಹಳ ಬುದ್ಧಿವಂತ,”​ ಎಂದು ಹೊಗಳಿಸಿಕೊಳ್ಳುತ್ತಿದ್ದರು.

ಒಂದು ಬಾರಿ ಮಾಜೀ ಮುಖ್ಯಮಂತ್ರಿ ಹಾಗೂ ಅಂದಿನ ವಿರೋಧ ಪಕ್ಷದ ನಾಯಕರಾದ ಜಗದೀಶ್​ ಶೆಟ್ಟರ್​ ಮಾತನಾಡುತ್ತಿದ್ದರು. ಆಗ ಮಧ್ಯ ಪ್ರವೇಶಿಸಿದ ರಮೇಶ್​ ಕುಮಾರ್​ ತಮ್ಮದೇ ರೀತಿಯಲ್ಲಿ ವಾದ ಮಂಡಿಸಿ, ಒಂದು ರಾಜ್ಯ ಅಥವಾ ದೇಶದಲ್ಲಿ ವಿರೋಧ ಪಕ್ಷ ಹೇಗೆ ವರ್ತಿಸುತ್ತೆ? ಅದು ಹೇಗೆ ರಾಜಕೀಯ ಸಾಮಾಜಿಕ ನಿಲುವು ತೆಗೆದುಕೊಳ್ಳುತ್ತೆ? ಎಂಬ ಪ್ರಶ್ನೆ ಎತ್ತುತ್ತ ವಿರೋಧ ಪಕ್ಷದ ನಡೆಯ ಮೇಲೆ ಒಂದು ರಾಜ್ಯ, ದೇಶ ಭವಿಷ್ಯ ನಿಂತಿರುತ್ತೆ ಎಂದು ಹೇಳುತ್ತ ತಮ್ಮ ಮಾತು ಮುಗಿಸಿದರು. ಅಷ್ಟೇ ಅಲ್ಲ, ವಿರೋಧ ಪಕ್ಷದ ಬಾಯಿ ಮುಚ್ಚಿಸಿದ್ದರು. ​ಆಮೇಲೆ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರಕಾರ ಬಂತು. ಆಗ ಅವರು ಸಭಾಧ್ಯಕ್ಷರಾದರು. ಅವರ ನಡೆ ನುಡಿ ಮತ್ತೆ ಮುನ್ನೆಲೆಗೆ ಬಂತು. ಕೊನೆಗೆ 16 ಸದಸ್ಯರ ಕುರಿತಾಗಿ ಅವರು ಕೊಟ್ಟ ತೀರ್ಪನ್ನು, ಸರ್ವೋಚ್ಛ ನ್ಯಾಯಾಲಯ ಭಾಗಶಃ ಎತ್ತಿಹಿಡಿದಾಗ ಜನ ಮತ್ತೆ ಮೂಗಿನ ಮೇಲೆ ಬೆರಳಿಟ್ಟರು. ಎಂತಹ ಸಭಾಧ್ಯಕ್ಷರು ಎಂದು ಹೊಗಳಿದರು. ಎಲ್ಲರಿಗೂ ರಮೇಶ್​ ಕುಮಾರ್ ಅವರು,​ ರಾಮನ ನೈತಿಕತೆಯ ಪ್ರತಿರೂಪವಾಗಿ ಕಂಡರು.

ಈಗ ಅದೇ ರಮೇಶ್​ ಕುಮಾರ ಮತ್ತೆ ಸುದ್ದಿಯಲ್ಲಿದ್ದಾರೆ. ರೇಪ್​ ಕುರಿತಾಗಿ ಅವರಾಡಿದ ಮಾತು ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಂದಿನಂತೆ, ಬಿಜೆಪಿ ಅತ್ಯಂತ ಕಠೋರವಾಗಿ ಖಂಡಿಸಿದರೆ, ಕಾಂಗ್ರೆಸ್​ ಅದನ್ನು ತಿರಸ್ಕರಿಸಿ, ನಾವು ಇದಕ್ಕೆ ಸಹಮತ ವ್ಯಕ್ತಪಡಿಸೋಲ್ಲ ಎಂದು ಹೇಳುತ್ತ, ಈ ಚರ್ಚೆ ಇಲ್ಲಿಗೆ ನಿಲ್ಲಿಸಿ. ನಾವು ಮುಂದಕ್ಕೆ ಹೋಗೋಣ ಎಂಬ ವರಸೆ ಬೀಸಿದ್ದಾರೆ. ರಾಜಕೀಯವಾಗಿ ಈ ಎರಡು ಪಕ್ಷಗಳು ಅವರ ಮೂಗಿನ ನೇರಕ್ಕೆ ನಡೆದುಕೊಳ್ಳುವುದು ನಡೆದು ಬಂದಿದೆ. ಭೃಷ್ಠಾಚಾರದ ವಿಷಯದಲ್ಲಿ ಈ ರಾಜಕೀಯ ಪಕ್ಷಗಳು ಇದನ್ನೇ ಮಾಡಿಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿದೆ. ಈಗ ಅತ್ಯಂತ ಹೇಯ ಕೃತ್ಯ ರೇಪ್​ ಬಗ್ಗೆ ಕೂಡ ಇದೇ ನೀತಿ ಅನುಸರಿಸಲು ಮುಂದಾಗಿವೆ. ಅದರಲ್ಲಿಯೂ ಮುಖ್ಯವಾಗಿ ವಿರೋಧ ಪಕ್ಷ ಕಾಂಗ್ರೆಸ್​, ರಮೇಶ್​ ಕುಮಾರ್​ ಮೇಲೆ ಯಾವ ಕ್ರಮ ತೆಗೆದುಕೊಳ್ಳದೇ ಮುಂದಕ್ಕೆ ಹೋಗುತ್ತಿರುವುದನ್ನು ನೋಡಿದರೆ ಒಂದು ವಿರೋಧ ಪಕ್ಷವಾಗಿ, ಕಾಂಗ್ರೆಸ್​ ಎಂತಹ ಸಂದೇಶ ಕಳಿಸಿದೆ ಎಂಬುದು ನಿಚ್ಚಳ. ಇದೇ ರಮೇಶ್​ ಕುಮಾರ್​ ಅವರು ಶೆಟ್ಟರ್​ ಅವರಿಗೆ ಏನು ಹೇಳಿದ್ದರು? ವಿರೋಧ ಪಕ್ಷದ ನಡೆ, ಒಂದು ರಾಜ್ಯದ ಅಥವಾ ದೇಶದ ಭವಿಷ್ಯ ನಿರ್ಧರಿಸುತ್ತದೆ ಎಂದು ಅಲ್ಲವೇ? ಅವರಿಗೆ ತಾವು ಆಡಿದ ಮಾತು ಮರೆತು ಹೋಗಿರಬಹುದು. ಅದನ್ನು ಬರೆದ ಪತ್ರಕರ್ತರಿಗೆ ಮರೆಯಲ್ಲ. ಈಗ ವಿರೋಧ ಪಕ್ಷದಲ್ಲಿ ಕುಳಿತು ಹೇಳಿಕೆ ಕೊಟ್ಟು ಮರು ದಿನ ಕ್ಷಮೆ ಕೇಳಿದರೆ ಎಲ್ಲ ಮುಗಿಯುತ್ತೆ ಎಂದು ತಿಳಿದಿದ್ದಾರೆ. ಅದಕ್ಕೆ ಸರಿಯಾಗಿ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ, ಡಿ.ಕೆ. ಶಿವಕುಮಾರ್​ ಅವರ ಟ್ವೀಟ್​ ನೋಡಿದರಂತೂ ಎಂತವರ ಕಲ್ಲು ಮನಸ್ಸಾದರೂ ಕರಗಬೇಕು. ಹಾಗಿದೆ. ಇದೇ ಅಲ್ಲವೇ ಮತದಾರರ ಮನಸ್ಸು ಗೆಲ್ಲಲು ಇದೇ ತಂತ್ರಗಾರಿಕೆ ಮಾಡೋದು. ಇಷ್ಟು ಮಾಡಿ ಈ ವಿಷಯ ಮುಚ್ಚಿ ಹಾಕಿದರೆ ಸಾಕಲ್ಲವೇ? ಈ ವಿಚಾರದಲ್ಲಿ ಡಿಕೆಶಿ ಅವರ ಮುಂದಿರುವ ಸವಾಲೇ ಅದು.

ಆದರೆ ವಿಷಯ ಅಷ್ಟು ಸರಳವಾಗಿಲ್ಲ. ಯಾಕೆ? ರಮೇಶ್ ಕುಮಾರ್ ಕ್ಷಮೆ ಕೇಳಿದ ಮೇಲೆ, ಡಿಕೆಶಿ ಟ್ವೀಟ್​ ಮಾಡಿದ ಮೇಲೆ ಮುಗೀತು. ಆದರೆ, ಇದು ಅಷ್ಟು ಸರಳವಾಗಿಲ್ಲ. ಈ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ. ಈ ಹಿಂದೆ 2019 ರಲ್ಲಿ ​ ಅವರು ಇದೇ ರೀತಿಯ ಮಾತನ್ನು ಹೇಳಿದ್ದರು ಮತ್ತು ಮರು ದಿನ ಕ್ಷಮೆ ಕೇಳಿದ್ದರು. ಮತ್ತೆ ಮತ್ತೆ ಅದೇ ಹೇಳಿಕೆ. ಮತ್ತೆ ಕ್ಷಮೆ. ಆದ್ದರಿಂದಲೇ, ಅವರ ಮಾತಿನ ಹಿಂದೆ off-the-cuff ಮಾತಿನ ವರಸೆ ಇರಲಿಲ್ಲ. ಒಂದು ವಿರೋಧ ಪಕ್ಷದ ನಡೆ ನುಡಿ ಒಂದು ರಾಜ್ಯದ ಭವಿಷ್ಯವನ್ನು ನಿರ್ಧರಿಸುವುದೇ ಆದಲ್ಲಿ, ಈ ರೀತಿಯ ಮಾತನ್ನು ಎರಡು ಬಾರಿ ಆಡಿದ ರಮೇಶ್​ ಕುಮಾರ್,​ ರಾಜ್ಯದ ಭವಿಷ್ಯ ಹೇಗೆ ರೂಪಿಸುತ್ತಾರೆ? ಇಂತಹ ನಡುವಳಿಕೆಯನ್ನು ಎಲ್ಲರೂ ಒಪ್ಪಿಕೊಳ್ಳುವ ನಡುವಳಿಕೆಯನ್ನಾಗಿ ಮಾಡಿಬಿಡುವ ಸಾಧ್ಯತೆ ಇಲ್ಲ ಎಂಬುದನ್ನು ತಳ್ಳಿ ಹಾಕಲು ಆಗದು. ಇದೇ ಕಾರಣಕ್ಕೆ ರಮೇಶ್​ ಕುಮಾರ್​ ಮೇಲೆ ಕಾಂಗ್ರೆಸ್​ ಪಕ್ಷ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೊಮ್ಮೆ ಆಗಿಲ್ಲ ಎಂದುಕೊಂಡರೆ, ಕೆಪಿಸಿಸಿ ಅಧ್ಯಕ್ಷರು ಹೆಂಗಸರ ಬಗ್ಗೆ ಆಡಿದ ಮನ ಮಿಡಿವ ಟ್ವೀಟ್​ನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಅದು ಮತ್ತೊಂದು ರಾಜಕೀಯ ವರಸೆ ಮತ್ತು ಠೊಳ್ಳು ಮಾತು ಎಂದು ಜನ ಹೇಳುವುದು ನಿಶ್ಚಿತ. ರಮೇಶ್​ ಕುಮಾರ್​ ಮೇಲೆ ಕ್ರಮ ಆಗದಿದ್ದರೆ, ಭೃಷ್ಠಾಚಾರದ ವಿಚಾರದಲ್ಲಿ ಸಮಷ್ಠಿಗೆ ಹೇಗೆ ಸಹ್ಯತೆ ಮತ್ತು ಒಪ್ಪಿಕೊಳ್ಳುವ ವಿಧೇಯತೆ ಬಂದಿದೆಯೋ, ರೇಪ್ ಕುರಿತು ಜೋಕ್​ ಮಾಡುವವರ​ ವಿಚಾರದಲ್ಲಿಯೂ ಅದೇ ರೀತಿಯ ಸಹ್ಯತೆ ಬಂದರೆ ಆಶ್ಚರ್ಯ ಇಲ್ಲ. ಅದಕ್ಕೆ ಇನ್ನೊಂದು ಕಾರಣ: ಸಾಮಾನ್ಯವಾಗಿ left-to-the-centre ಇರುವ ಚಿಂತಕರು ತೆಗೆದುಕೊಳ್ಳುವ ನಿಲುವು. ಸಮಾಜದಲ್ಲಿ ಇವರ ಹೇಳಿಕೆಗಳಗೆ ಬಹಳ ಮಹತ್ವ ಇದೆ. ಸಾಮಾನ್ಯವಾಗಿ, ಇಂತಹ ಹೇಳಿಕೆಗಳಿಗೆ, ಬೆಳವಣಿಗೆಗಳಿಗೆ ಖಡಾಖಂಡಿತವಾಗಿ ಸ್ಪಂದಿಸುವ ಈ ಚಾವಡಿಯ ಚಿಂತಕರು, ಈ ಸಂದರ್ಭದಲ್ಲಿ ಧ್ವನಿ ಎತ್ತಿದರೆ ಎಲ್ಲಿ ಬಿಜೆಪಿಗೆ ಸಹಾಯವಾಗುತ್ತೋ ಎಂದು ಮಾತೆತ್ತದೇ ವಾಟ್ಸಾಪ್​ ಗುಂಪಿನಲ್ಲಿ ಸಾರ್ವಜನಿಕೆ ವಲಯದಲ್ಲಿ ಸುಮ್ಮನೇ ಇರೋದು ದುರಂತವಾದರೂ ಸತ್ಯ. ಈ ಚಿಂತಕರ ಚಾವಡಿ ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ, ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಜಾಸ್ತಿ ಇದೆ.

ಕೊನೆಯ ಗುಟುಕು: ಟಿಮ್​ ಪೇನ್​ ಆಸ್ಟ್ರೇಲಿಯಾದ ಕ್ರಕಿಟ್​ ಟೀಂ ನಾಯಕರಾಗಿದ್ದವರು. ಅವರು ಓರ್ವ ಹೆಂಗಸಿಗೆ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ಮೆಸೇಜ್​ ಕಳಿಸಿದ್ದರು ಎಂಬ ವಿಚಾರ ಹೊರಗೆ ಬಂದಿದ್ದೇ ಅವರನ್ನು ನಾಯಕತ್ವದಿಂದ ಇಳಿಸಲಾಯಿತು. ಅವರು ಈಗ ಪುನರ್ವಸತಿ ಕೇಂದ್ರಕ್ಕೆ ತೆರಳಿದ್ದಾರೆ. ರಮೇಶ್​ ಕುಮಾರ್​ ಅಂತಹ ತಪ್ಪು ಮಾಡಿಲ್ಲ, ನಿಜ. ಆದರೆ, ರಮೇಶ್​ ಕುಮಾರ್​ ಓರ್ವ ಪ್ರಜಾ ಪ್ರತಿನಿಧಿ. ಅವರು ಕ್ರಿಕೆಟ್​ ಟೀಂ ನಾಯಕ ಅಲ್ಲ, ಅವರಿಗೆ ಇನ್ನೂ ಹೆಚ್ಚಿನ ನೈತಿಕ ಜವಾಬ್ದಾರಿ ಇದೆ. ಮಾಜೀ ಸಭಾಧ್ಯಕ್ಷರು ಬರೀ ಸಾರ್ವಜನಿಕ ಪರಿಶೀಲನೆಗೆ ಮಾತ್ರ ಅಲ್ಲ, ದಂಡನೆಗೂ ಅರ್ಹರು.

ಇದನ್ನೂ ಓದಿ

ರಮೇಶ್​ ಕುಮಾರ್​ ರೇಪ್​ ಕುರಿತಾದ ಹೇಳಿಕೆ: ಕಾಂಗ್ರೆಸ್​ ಪಕ್ಷದಿಂದ ಕೂಡಲೇ ಅವರನ್ನು ವಜಾ ಮಾಡಿ, ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸ್ಮೃತಿ ಇರಾನಿ

KR Ramesh Kumar: ರೇಪ್ ಆಸ್ವಾದಿಸುವ ಹೇಳಿಕೆ: ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ಕೆಆರ್​ ರಮೇಶ್​ ಕುಮಾರ್, ಇಂದು ಸದನದಲ್ಲಿ ಹೇಳಿದ್ದೇನು?

(Opinion on why Congress party should take stringent action against KR Ramesh Kumar who cracked rape joke in legislative assembly)

Follow us on

Most Read Stories

Click on your DTH Provider to Add TV9 Kannada