Egypt Pyramids Secrets: ಪುರಾತನ ಪಿರಮಿಡ್‌ಗಳ ಕುರಿತಾದ ಅನಂತ ರಹಸ್ಯಗಳು.. ತಾಜಾ ಸಂಶೋಧನೆಯಲ್ಲಿ ಬಹಿರಂಗವಾದ ವಿಷಯ ಏನು?

ಇತ್ತೀಚೆಗೆ, ಎಂಜಿನಿಯರ್‌ಗಳು ಮತ್ತು ಭೂವಿಜ್ಞಾನಿಗಳು ಪ್ರಸ್ತಾಪಿಸಿದ ಸಿದ್ಧಾಂತವನ್ನು PLoS One ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ. ಪ್ರಾಚೀನ ಪಿರಮಿಡ್‌ನ ಮಧ್ಯಭಾಗದಿಂದ ಕಲ್ಲುಗಳನ್ನು ಹೇಗೆ ಎತ್ತಲಾಯಿತು ಎಂಬುದರ ಕುರಿತು ಸಂಶೋಧಕರು ಹೊಸ ಸಿದ್ಧಾಂತವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 300 ಕೆ.ಜಿ ತೂಕದ ಕಲ್ಲುಗಳನ್ನು ಗಾಳಿಗೆ ಎತ್ತಲು ಆ ಕಾಲದಲ್ಲಿ ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆಯನ್ನು ಬಳಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Egypt Pyramids Secrets: ಪುರಾತನ ಪಿರಮಿಡ್‌ಗಳ ಕುರಿತಾದ ಅನಂತ ರಹಸ್ಯಗಳು.. ತಾಜಾ ಸಂಶೋಧನೆಯಲ್ಲಿ ಬಹಿರಂಗವಾದ ವಿಷಯ ಏನು?
ಪುರಾತನ ಪಿರಮಿಡ್​​ಗಳ ಬಗ್ಗೆ ತಾಜಾ ರಹಸ್ಯಗಳು..
Follow us
|

Updated on:Aug 17, 2024 | 5:46 PM

ಈಜಿಪ್ಟಿನ ಪಿರಮಿಡ್.. ಈ ಹೆಸರು ಕೇಳಿದಾಕ್ಷಣ ನಮ್ಮ ಅರಿವಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳು. ಅದ್ಭುತ ರಚನೆಗಳಿಗೆ ನೆಲೆವೀಡು ಈ ಈಜಿಪ್ಟ್. ಈಗ ಬಿಡಿ ನಿರ್ಮಾಣ ತಂತ್ರಜ್ಞಾನ, ವಿಜ್ಞಾನ ವಿಪರೀತವೆನಿಸುವಷ್ಟು ಬೆಳೆದಿದೆ. ಇದರ ಸಮ್ಮುಖದಲ್ಲಿ ಇಂತಹ ನಿರ್ಮಾಣಗಳನ್ನು ಕೈಗೆತ್ತಿಕೊಂಡರೆ ಅದೇನು ಮಹಾ ಎಂಬ ಉದ್ಘಾರ ಹೊರಬೀಳುತ್ತದೆ. ಆದರೆ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ ಈ ಅದ್ಭುತ ರಚನೆಗಳು ಹೇಗೆ ನಿರ್ಮಾಣವಾದವು ಎಂಬುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ಕ್ರಿ.ಪೂ. 2886-2160 ರ ಕಾಲದಲ್ಲಿ ಆ ನಿರ್ಮಾಣವು ಅತ್ಯಂತ ಹಳೆಯ ಈಜಿಪ್ಟ್ ನಾಗರಿಕತೆಯನ್ನು ಪ್ರತಿನಿಧಿಸುತ್ತದೆ. ಈಜಿಪ್ಟ್‌ನಲ್ಲಿ 700ಕ್ಕೂ ಹೆಚ್ಚು ಪಿರಮಿಡ್‌ಗಳಿವೆ. ಈಜಿಪ್ಟಿನ ರಾಜರನ್ನು ಇವುಗಳಲ್ಲಿ ಸಮಾಧಿ ಮಾಡಲಾಗಿದೆ. ಈ ಪಿರಮಿಡ್‌ಗಳ ನಿರ್ಮಾಣಕ್ಕೆ ಸುಮಾರು ಸಾವಿರ ವರ್ಷಗಳು ಹಿಡಿಸಿರಬಹುದು ಎಂಬುದು ಇತಿಹಾಸಕಾರರ ಅಂದಾಜು ಲೆಕ್ಕಾಚಾರ. ಪಿರಮಿಡ್‌ಗಳಲ್ಲಿ, ಕೈರೋದ ಉಪನಗರವಾದ ಗಿಜಾ ಬಳಿ ನಿರ್ಮಿಸಲಾದ ಪಿರಮಿಡ್‌ಗಳು ದೊಡ್ಡದಾಗಿವೆ. ಪ್ರಸಿದ್ಧ ಗಿಜಾ ಸಂಕೀರ್ಣ ಸೇರಿದಂತೆ 31 ಪಿರಮಿಡ್‌ಗಳನ್ನು ಇಲ್ಲಿ ಹೇಗೆ ನಿರ್ಮಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಹಾಗಾಗಿ ಈಜಿಪ್ಟಿನ ಪಿರಮಿಡ್‌ಗಳ ಹಿಂದಿನ ರಹಸ್ಯಗಳನ್ನು ಬಿಚ್ಚಿಡಲು ಇತಿಹಾಸಕಾರರು ಮತ್ತು ಪ್ರಾಚೀನ ಸಂಶೋಧಕರು ಇನ್ನೂ ತಮ್ಮ ಸಂಶೋಧನೆಯನ್ನು ಮುಂದುವರೆಸಿದ್ದಾರೆ.

ಈಜಿಪ್ಟಿನ ಪಿರಮಿಡ್‌ಗಳನ್ನು ನಿರ್ಮಿಸಲು ಬಳಸಿದ ಕಲ್ಲುಗಳು ಎರಡರಿಂದ 30 ಟನ್‌ಗಳಷ್ಟು ತೂಕವನ್ನು ಹೊಂದಿದ್ದವು. ಪಿರಮಿಡ್ ನಿರ್ಮಾಣದ ಸಂದರ್ಭದಲ್ಲಿ ಯಾವುದೇ ತಂತ್ರಜ್ಞಾನವಿಲ್ಲದೆ ಪಿರಮಿಡ್ ಮೇಲೆ ಇಷ್ಟು ದೊಡ್ಡ ಕಲ್ಲುಗಳನ್ನು ಹೇಗೆ ರಾಶಿ ಹಾಕಲಾಯಿತು ಎಂಬುದು ಇನ್ನೂ ಬಿಡಿಸಲಾಗದ ರಹಸ್ಯವಾಗಿದೆ. ಗಿಜಾದ ಗ್ರೇಟ್ ಪಿರಮಿಡ್ ಪ್ರಪಂಚದ ಅದ್ಭುತಗಳಲ್ಲಿ ಮೊದಲ ಬಾರಿಗೆ ಸೇರಿತು. ಆ ಅವಧಿಯಲ್ಲಿ ಇದು ಭೂಮಿಯ ಮೇಲೆ ನಿರ್ಮಿಸಲಾದ ಅತ್ಯಂತ ಎತ್ತರದ ರಚನೆಯಾಗಿದೆ. ಈಜಿಪ್ಟ್‌ನಲ್ಲಿರುವ ಎಲ್ಲಾ ಪಿರಮಿಡ್‌ಗಳಲ್ಲಿ ಇದು ದೊಡ್ಡದಾಗಿದೆ. ಇದರ ಎತ್ತರ 481 ಅಡಿ. ಈ ಕಲ್ಲುಗಳನ್ನು ಸುಮಾರು 800 ಕಿಲೋಮೀಟರ್ ದೂರದಲ್ಲಿರುವ ಕ್ವಾರಿಯಿಂದ ಇಲ್ಲಿಗೆ ತರಲಾಗಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಗಿಜಾದ ಗ್ರೇಟ್ ಪಿರಮಿಡ್ ನಿರ್ಮಾಣದಲ್ಲಿ ಸುಮಾರು 20 ರಿಂದ 30 ಸಾವಿರ ಗುಲಾಮರನ್ನು ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ನಿರ್ಮಿಸಲು ಸುಮಾರು 10 ರಿಂದ 20 ವರ್ಷ ತೆಗೆದುಕೊಂಡಿರಬಹುದು. ಇದು ಅಡಿಪಾಯ ಪ್ರದೇಶದಲ್ಲಿ ಸುಮಾರು ಆರು ಲಕ್ಷ ಚದರ ಅಡಿಗಳಲ್ಲಿ ಹರಡಿದೆ. ‘ದಿ ಗ್ರೇಟ್ ಸಿಂಹನಾರಿ’ 73 ಮೀಟರ್ ಉದ್ದ ಮತ್ತು 20 ಮೀಟರ್ ಎತ್ತರದ ಪ್ರತಿಮೆಯಾಗಿದೆ. ಇದನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಇದು ವಿಶ್ವದ ಅತಿದೊಡ್ಡ ಏಕಶಿಲೆಯ ಪ್ರತಿಮೆ ಎಂದು ಹೇಳಲಾಗುತ್ತದೆ. ಆದರೆ ಈ ವಿಗ್ರಹವನ್ನು ಯಾರಿಗಾಗಿ ನಿರ್ಮಿಸಲಾಗಿದೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ.

ಇಲ್ಲಿ ಇನ್ನೊಂದು ಅಚ್ಚರಿಯ ವಿಷಯವಿದೆ.. ಮೃತ ದೇಹಗಳನ್ನು ಸಂರಕ್ಷಿಸಲು ಈಜಿಪ್ಟ್‌ನಲ್ಲಿ ಪಿರಮಿಡ್‌ಗಳನ್ನು ನಿರ್ಮಿಸಲಾಗಿದೆ. ಆದರೆ ನೆಲಮಾಳಿಗೆಯಲ್ಲಿ ಇದುವರೆಗೆ ರಾಜ ಮಮ್ಮಿ/ರಾಣಿ ಮಮ್ಮಿ ಪತ್ತೆಯಾಗಿಲ್ಲ. ಗಿಜಾ ಪಿರಮಿಡ್‌ಗಳ ಒಳಗಿನ ತಾಪಮಾನವು ಯಾವಾಗಲೂ ನಿಯಂತ್ರಣದಲ್ಲಿರುತ್ತದೆ. ಹೊರಗೆ ಎಷ್ಟೇ ಬಿಸಿಯಿರಲಿ, ಚಳಿಯಿರಲಿ, ಒಳಗಿನ ತಾಪಮಾನ ಕೇವಲ 20 ಡಿಗ್ರಿ ಸೆಲ್ಸಿಯಸ್. ಈ ತಾಪಮಾನವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂಬುದು ಸಹ ರಹಸ್ಯವಾಗಿದೆ.

ಮೂಲ ಈಜಿಪ್ಟಿನ ಪಿರಮಿಡ್‌ಗಳನ್ನು ಹೇಗೆ ನಿರ್ಮಿಸಲಾಯಿತು ಎಂಬುದರ ಕುರಿತು ಅನೇಕ ಪ್ರತಿಪಾದನೆಗಳಿವೆ. 4 ಸಾವಿರ ವರ್ಷಗಳ ಹಿಂದೆಯೇ ಪಿರಮಿಡ್ ನಿರ್ಮಾಣಕ್ಕೆ ಕೈ ಹಾಕಿರಬಹುದು ಎಂಬ ವಿಷಯದ ಕುರಿತು ಹೊಸ ವಿಶ್ಲೇಷಣೆಗಳು ಮುನ್ನೆಲೆಗೆ ಬರುತ್ತಿವೆ. ಈ ಕ್ರಮದಲ್ಲಿ, ಸಂಶೋಧಕರು ಇತ್ತೀಚೆಗೆ ಹೊಸ ವಿಶ್ಲೇಷಣೆಯನ್ನು ಮಾಡಿದ್ದಾರೆ. ಪ್ರಾಚೀನ ಈಜಿಪ್ಟಿನವರು 4,000 ವರ್ಷಗಳ ಹಿಂದೆ ಬೃಹತ್ ಪಿರಮಿಡ್‌ಗಳನ್ನು ಹೇಗೆ ನಿರ್ಮಿಸಿದರು ಎಂಬುದನ್ನು ವಿಶ್ಲೇಷಿಸಲು ಈಜಿಪ್​ ಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ.

ಇತ್ತೀಚೆಗೆ, ಎಂಜಿನಿಯರ್‌ಗಳು ಮತ್ತು ಭೂವಿಜ್ಞಾನಿಗಳು ಪ್ರಸ್ತಾಪಿಸಿದ ಸಿದ್ಧಾಂತವನ್ನು PLoS One ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ. ಪ್ರಾಚೀನ ಪಿರಮಿಡ್‌ನ ಮಧ್ಯಭಾಗದಿಂದ ಕಲ್ಲುಗಳನ್ನು ಹೇಗೆ ಎತ್ತಲಾಯಿತು ಎಂಬುದರ ಕುರಿತು ಸಂಶೋಧಕರು ಹೊಸ ಸಿದ್ಧಾಂತವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 300 ಕೆ.ಜಿ ತೂಕದ ಕಲ್ಲುಗಳನ್ನು ಗಾಳಿಗೆ ಎತ್ತಲು ಆ ಕಾಲದಲ್ಲಿ ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆಯನ್ನು ಬಳಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Egypt’s Pyramids -Endless Mysteries: ನೈಸರ್ಗಿಕ ಸಂಪನ್ಮೂಲಗಳ ಸಹಾಯದಿಂದ..

ದೊಡ್ಡ ಪಿರಮಿಡ್‌ಗಳನ್ನು ನಿರ್ಮಿಸಲು ರಾಂಪ್‌ಗಳು, ಕ್ರೇನ್‌ಗಳು, ವಿಂಚ್‌ಗಳು ಮತ್ತು ಪಿವೋಟ್‌ಗಳಂತಹ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಪ್ರಮುಖ ಸಂಶೋಧಕ ಲ್ಯಾಂಡ್‌ರೂ ಹೇಳಿದ್ದಾರೆ. ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪಿರಮಿಡ್ ಕಲ್ಲುಗಳನ್ನು ಮೇಲಕ್ಕೆ ಎತ್ತಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಈ ಉದ್ದೇಶಕ್ಕಾಗಿ ನೀರು ಚಾಲಿತ ಎಲಿವೇಟರ್‌ಗಳನ್ನು ಬಳಸಿರಬಹುದೆಂದು ಸಂಶೋಧಕರು ಭಾವಿಸಿದ್ದಾರೆ. ಆದರೆ ಈ ಹೊಸ ಪ್ರಸ್ತಾಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತರರು ವಾದಿಸುತ್ತಾರೆ. ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಈಜಿಪ್ಟ್ ಪುರಾತತ್ವ ಶಾಸ್ತ್ರದ ನಿವೃತ್ತ ಹಿರಿಯ ಉಪನ್ಯಾಸಕ ಡಾ. ಡೇವಿಡ್ ಜೆಫ್ರೀಸ್, ಪ್ರಾಚೀನ ಈಜಿಪ್ಟಿನವರು ಬೃಹತ್ ಬ್ಲಾಕ್‌ಗಳನ್ನು ಸಾಗಿಸಲು ಗಣಿಗಾರಿಕೆಯಲ್ಲಿ ಉಪಯೋಗಿಸುವ ಹೋಲೇಜ್ ಉಪಕರಣಗಳನ್ನು Haulage equipment ಬಳಸುತ್ತಿದ್ದರು ಎಂದು ವಿಸ್ತೃತವಾಗಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.

Egypt’s Pyramids -Endless Mysteries: ಜಲಶಕ್ತಿಯಿಂದ ಪಿರಮಿಡ್‌ಗಳ ನಿರ್ಮಾಣ?

ಈ ಹಿಂದೆಯೂ ಇಂತಹ ಹಲವು ಪ್ರಸ್ತಾವನೆಗಳು ಬೆಳಕಿಗೆ ಬಂದಿವೆ. ಪಿರಮಿಡ್‌ಗಳನ್ನು ನಿರ್ಮಿಸಲು ಅಗತ್ಯವಾದ ಕಲ್ಲು ಮತ್ತು ಇತರ ವಸ್ತುಗಳನ್ನು ಸಾಗಿಸಲು ಹತ್ತಿರದ ಜಲಮಾರ್ಗವನ್ನು ಬಳಸಲಾಗುತ್ತಿತ್ತು ಎಂದು ವಿಜ್ಞಾನಿಗಳು ನಂಬುತ್ತಾರೆ. ಪುರಾತನ ನೈಲ್ ನದಿಯ ತಳದ ಪಕ್ಕದಲ್ಲಿ ಪಿರಮಿಡ್‌ಗಳನ್ನು ನಿರ್ಮಿಸಲಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಆದರೆ ಕಾಲ ಕಳೆದಂತೆ ನದಿ ಪಾತ್ರ ಬತ್ತಿ ಮರುಭೂಮಿಯಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸಂಶೋಧಕರು. ಈ ನದಿಯು 4700 ರಿಂದ 3700 ವರ್ಷಗಳ ಹಿಂದೆ ನಿರ್ಮಿಸಲಾದ ಪಿರಮಿಡ್‌ಗಳ ಪಕ್ಕದಲ್ಲಿ ಹರಿಯುತ್ತಿತ್ತು ಎಂದು ಅಂದಾಜಿಸಲಾಗಿದೆ. ಪಿರಮಿಡ್‌ಗಳು ಇರುವ ಸ್ಥಳದ ಸಮೀಪ ನದಿ ಪಾತ್ರದ ಕಾರಣ ಪಿರಮಿಡ್‌ಗಳ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳನ್ನು ನದಿಯ ಮೂಲಕ ಸಾಗಿಸಲಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಸಮಯದಲ್ಲಿ ಸಂಶೋಧಕರು ಈಜಿಪ್ಟಿನವರು ಭಾರವಾದ ಬಂಡೆಗಳನ್ನು ಸಾಗಿಸಲು ಮಾನವ ಶ್ರಮಕ್ಕಿಂತ ಹೆಚ್ಚಾಗಿ ನೀರಿನ ಶಕ್ತಿಯನ್ನು ಬಳಸಿದ್ದಾರೆ ಎಂದು ಪ್ರಸ್ತಾಪ ಮಂಡಿಸಿದ್ದಾರೆ.

Egypt’s Pyramids -Endless Mysteries: ಪಿರಮಿಡ್‌ಗಳ ಹಿಂದೆ ಹಲವು ನಂಬಿಕೆಗಳು..

ಪಿರಮಿಡ್‌ಗಳ ಆಕಾರದ ಬಗ್ಗೆ ಅನೇಕ ನಂಬಿಕೆಗಳಿವೆ. ಈಜಿಪ್ಟಿನ ನಂಬಿಕೆಯ ಪ್ರಕಾರ, ರಾತ್ರಿಯ ಆಕಾಶದಲ್ಲಿ ಕಂಡುಬರುವ ದಟ್ಟವಾದ ಕಪ್ಪು ಪ್ರದೇಶವು ಭೂಮಿ ಮತ್ತು ಸ್ವರ್ಗದ ನಡುವಿನ ತಡೆಗೋಡೆಯಂತಿದೆ. ಪಿರಮಿಡ್‌ನ ತುದಿಯ ತೆಳುವಾದ ಅಂಚನ್ನು ಆ ದಟ್ಟವಾದ ಗೋಡೆಗೆ ನಿಖರವಾಗಿ ತೋರಿಸಲಾಗಿದೆ. ಪಿರಮಿಡ್‌ನ ಮಧ್ಯಭಾಗದಲ್ಲಿ ಸಂರಕ್ಷಿಸಲ್ಪಟ್ಟಿರುವ ಗಣ್ಯರ ದೇಹಗಳಿಂದ, ಅವರ ಆತ್ಮಗಳು ಪಿರಮಿಡ್‌ನ ಮೂಲಕ ಚಲಿಸುತ್ತವೆ ಮತ್ತು ಕಿರಿದಾದ ತುದಿಯಿಂದ ಹೊರಬರುತ್ತವೆ, ತಡೆಗೋಡೆಯನ್ನು ಭೇದಿಸಿ ಮತ್ತು ದೇವರುಗಳನ್ನು ತಲುಪಲು ಸ್ವರ್ಗವನ್ನು ಪ್ರವೇಶಿಸುತ್ತವೆ ಎಂದು ನಂಬಲಾಗಿದೆ. ಸತ್ತವರ ಸಂಕೇತವೆಂದು ಪರಿಗಣಿಸಿ ಸೂರ್ಯ ಮುಳುಗುವ ನೈಲ್ ನದಿಯ ದಡದಲ್ಲಿ ಎಲ್ಲಾ ಪಿರಮಿಡ್‌ಗಳನ್ನು ನಿರ್ಮಿಸಲಾಗಿದೆ.

Egypt’s Pyramids -Endless Mysteries: ಸುಡಾನ್ ದೇಶದಲ್ಲಿ ಬೃಹತ್ ಪಿರಮಿಡ್‌ಗಳಿವೆ

ಪಿರಮಿಡ್‌ಗಳು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಈಜಿಪ್ಟ್ ದೇಶ. ಆದರೆ ಸುಡಾನ್ 255 ಪಿರಮಿಡ್‌ಗಳನ್ನು ಹೊಂದಿದೆ, ಈಜಿಪ್ಟ್‌ಗೆ ಹೋಲಿಸಿದರೆ ನುಬಿಯಾ ಪ್ರದೇಶದಲ್ಲಿನ ಪಿರಮಿಡ್‌ಗಳ ಸಂಖ್ಯೆ ದ್ವಿಗುಣವಾಗಿದೆ. ಈಜಿಪ್ಟ್ ಅನ್ನು ಆಳುತ್ತಿದ್ದ ನುಬಿಯನ್ ಫೇರೋಗಳು ಸುಡಾನ್ ಪ್ರದೇಶಕ್ಕೆ ವಲಸೆ ಬಂದು ಅಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದರು ಮತ್ತು ಅಲ್ಲಿನ ಸಂಸ್ಕೃತಿ ಇಲ್ಲಿ ಹರಡಿತು ಎಂದು ಇತಿಹಾಸಕಾರರು ಹೇಳುತ್ತಾರೆ.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

Egypt’s Pyramids -Endless Mysteries: ಅನ್ಯಗ್ರಹ ಜೀವಿಗಳಿಂದ ನಿರ್ಮಾಣ..?

ಈಜಿಪ್ಟ್‌ನ ಪಿರಮಿಡ್‌ಗಳ ಕುರಿತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಈ ಹಿಂದೆ ವಿವಾದಾಸ್ಪದ ಕಾಮೆಂಟ್‌ಗಳನ್ನು ಮಾಡಿದ್ದರು. ಪಿರಮಿಡ್‌ಗಳನ್ನು ಏಲಿಯನ್‌ಗಳು ನಿರ್ಮಿಸಿವೆ ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದರು. ಈ ಪಿರಮಿಡ್‌ಗಳು 3,800 ವರ್ಷಗಳಷ್ಟು ಹಳೆಯವು ಎಂದು ಅವರು ಹೇಳಿದ್ದರು. ಎಲೋನ್ ಮಸ್ಕ್ ಮಾಡಿದ ಈ ಕಾಮೆಂಟ್‌ಗಳ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಚರ್ಚೆ ನಡೆದವು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಈಜಿಪ್ಟ್ ಸಚಿವೆ ರಾನಿಯಾ ಅಲ್ ಮಶಾತ್ ಅವರು ತಮ್ಮ ದೇಶಕ್ಕೆ ಬಂದು ಪಿರಮಿಡ್‌ಗಳು ಮತ್ತು ನಿರ್ಮಾಪಕರ ಗೋರಿಗಳನ್ನು ನೋಡುವಂತೆ ಮಸ್ಕ್​​​ರನ್ನು ಕೇಳಿಕೊಂಡರು. ಆದರೆ ಹಾಸ್ಯಕ್ಕಾಗಿ ಪಿರಮಿಡ್‌ಗಳನ್ನು ಏಲಿಯನ್‌ಗಳು ನಿರ್ಮಿಸಿದ್ದವು ಎಂದು ಎಲೋನ್ ಮಸ್ಕ್ ಕಾಮೆಂಟ್‌ ಮಾಡಿರಬಹುದು ಎಂದು ಕೆಲವರು ವ್ಯಾಖ್ಯಾನಿಸಿದರು.

Egypt’s Pyramids -Endless Mysteries: ಪುರಾತನ ಪಿರಮಿಡ್​​ಗಳ ಬಗ್ಗೆ ತಾಜಾ ಚರ್ಚೆಗಳು!

ಇತ್ತೀಚೆಗೆ, ಪಿರಮಿಡ್‌ಗಳ ಕುರಿತು ನಡೆಯುತ್ತಿರುವ ಸಂಶೋಧನೆಯಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯು ಬಹಿರಂಗವಾಗಿದೆ. ಇತ್ತೀಚೆಗೆ, ಸಂಶೋಧಕರು ಇಂಡೋನೇಷ್ಯಾದ ಗುನುಂಗ್ ಪಡಂಗ್ ಪಿರಮಿಡ್ ಅನ್ನು ಕ್ರಿಸ್ತ ಪೂರ್ವ ಸುಮಾರು 25 ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಅಂದಾಜಿಸಿದ್ದಾರೆ. ಇದು ನಿಜಕ್ಕೂ ಮಾನವ ನಿರ್ಮಿತ ಪಿರಮಿಡ್ ಆಗಿದೆಯೇ ಎಂಬ ಅನುಮಾನವಿದೆ ಎಂದು ಅವರು ಹೇಳಿದ್ದರು. ಇಲ್ಲಿಯವರೆಗೆ, ಸುಮಾರು 2630 BC ಯಲ್ಲಿ ಈಜಿಪ್ಟ್‌ನಲ್ಲಿ ನಿರ್ಮಿಸಲಾದ ಡಿಜೋಸರ್ ಪಿರಮಿಡ್, ವಿಶ್ವದ ಅತ್ಯಂತ ಹಳೆಯ ಪಿರಮಿಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ. ಆದರೆ ಇಂಡೋನೇಷ್ಯಾದ ಪಿರಮಿಡ್ ಅದಕ್ಕಿಂತ ಹಲವು ವರ್ಷಗಳಷ್ಟು ಹಳೆಯದು ಎಂದು ಆ ದೇಶದ ಇಂಡೋನೇಷಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್‌ನ ಸಂಶೋಧಕರು ಬಹಿರಂಗಪಡಿಸಿರುವುದು ಈಗ ಚರ್ಚೆಯ ವಿಷಯವಾಗಿದೆ. ಲಾವಾ ಪರ್ವತದಿಂದ ನೈಸರ್ಗಿಕವಾಗಿ ರೂಪುಗೊಂಡ ಪರಿಮಿಡ್‌ನಂತೆ ಇದನ್ನು ನಿರ್ಮಿಸಲಾಗಿದೆ ಎಂದು ಅವರು ಅಂದಾಜಿಸಿದ್ದಾರೆ.

ಇನ್ನಷ್ಟು ಪ್ರೀಮಿಯಂ ಲೇಖನಗಳಿಗಾಗಿ ಇಲ್ಲಿ  ಕ್ಲಿಕ್  ಮಾಡಿ

Published On - 5:45 pm, Sat, 17 August 24