- Kannada News Photo gallery Cricket photos T20 World Cup 2026: Abhishek Sharma's Form Dip a Big Worry for Team India's Batting
IND vs PAK: 7 ಪಂದ್ಯ, ನಾಲ್ಕು ಸೊನ್ನೆ; ಏನಾಯ್ತು ಅಭಿಷೇಕ್ ಶರ್ಮಾ?
Abhishek Sharma's T20 World Cup Woes:2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದರೂ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ದೊಡ್ಡ ಚಿಂತೆಯಾಗಿದೆ. ವಿಶ್ವಕಪ್‌ಗೂ ಮುನ್ನ ಸ್ಫೋಟಕ ಬ್ಯಾಟಿಂಗ್‌ನಿಂದ ಭರವಸೆ ಮೂಡಿಸಿದ್ದ ಅಭಿಷೇಕ್, ಪ್ರಸ್ತುತ ಸತತವಾಗಿ ಸೊನ್ನೆ ರನ್‌ಗಳಿಗೆ ಔಟಾಗುತ್ತಿದ್ದಾರೆ. ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಬಾರಿ ಶೂನ್ಯಕ್ಕೆ ಔಟಾಗಿ ಹೊಸ ಅನಪೇಕ್ಷಿತ ದಾಖಲೆ ನಿರ್ಮಿಸಿದ್ದಾರೆ. ಇದು ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಗೆ ಕಳವಳ ತಂದಿದೆ.
Updated on: Feb 15, 2026 | 8:24 PM

2026 ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭವೇ ಸಿಕ್ಕಿದೆ. ಆಡಿರುವ ಮೊದಲೆರಡು ಪಂದ್ಯಗಳನ್ನು ಭಾರತ ತಂಡ ಗೆದ್ದುಕೊಂಡಿದೆ. ಇದೀಗ ಪಾಕಿಸ್ತಾನ ವಿರುದ್ಧವೂ ಗೆಲ್ಲುವ ಇರಾದೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಆದರೆ ತಂಡಕ್ಕೆ ದೊಡ್ಡ ಚಿಂತೆಯಾಗಿರುವುದು ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ತನ್ನ ಹೊಡಿಬಡಿ ಆಟದ ಮೂಲಕ ಹಲವು ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದ ಅಭಿಷೇಕ್ ಶರ್ಮಾ ಅವರಿಂದ ಟಿ20 ವಿಶ್ವಕಪ್‌ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಅಭಿಷೇಕ್ಗೆ ಆ ನಿರೀಕ್ಷೆಗಳನ್ನು ಪೂರೈಸುವುದಿರಲಿ, ರನ್ಗಳ ಖಾತೆ ತೆರೆಯುವುದಕ್ಕೂ ಸಾಧ್ಯವಾಗುತ್ತಿಲ್ಲ.

ಈ ಪಂದ್ಯಾವಳಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಅಮೆರಿಕ ವಿರುದ್ಧ ಆಡಿತ್ತು. ಆ ಪಂದ್ಯದಲ್ಲೂ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಅಂದರೆ ಅಭಿಷೇಕ್ ಸೊನ್ನೆ ರನ್ಗೆ ಔಟಾಗಿದ್ದರು. ಆ ಬಳಿಕ ಅನಾರೋಗ್ಯದಿಂದ ಅಭಿಷೇಕ್ ಎರಡನೇ ಪಂದ್ಯವನ್ನು ಆಡಿರಲಿಲ್ಲ. ಇದೀಗ ಪಾಕ್ ವಿರುದ್ಧದ ಮೂರನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಅಭಿಷೇಕ್, ಈ ಪಂದ್ಯದಲ್ಲೂ ಸೊನ್ನೆಗೆ ಔಟಾದರು.

ಮೇಲೆ ಹೇಳಿದಂತೆ ಅಭಿಷೇಕ್ ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅನೇಕ ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ಏಳು ಇನ್ನಿಂಗ್ಸ್‌ಗಳನ್ನಾಡಿರುವ ಅಭಿಷೇಕ್ ಶೂನ್ಯಕ್ಕೆ ಔಟಾಗುತ್ತಿರುವುದು ಇದು ನಾಲ್ಕನೇ ಬಾರಿ. ನ್ಯೂಜಿಲೆಂಡ್ ಸರಣಿಯಲ್ಲಿ ಎರಡು ಬಾರಿ ಖಾತೆ ತೆರೆಯಲು ವಿಫಲರಾಗಿದ್ದ ಅಭಿ, ಈಗ ವಿಶ್ವಕಪ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಕೋರ್ ಗಳಿಸುವಲ್ಲಿ ವಿಫಲರಾಗಿದ್ದಾರೆ.

ಇಷ್ಟೇ ಅಲ್ಲ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಅಭಿಷೇಕ್ ಈಗ ಎರಡನೇ ಸ್ಥಾನವನ್ನು ತಲುಪಿದ್ದಾರೆ. ಈ ವರ್ಷ ಅವರು ಈ ರೀತಿ ನಾಲ್ಕು ಬಾರಿ ಔಟಾಗಿದ್ದಾರೆ. ಈ ವಿಷಯದಲ್ಲಿ, ಅವರು ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿದ್ದಾರೆ.
