- Kannada News Photo gallery Cricket photos Auqib Nabi Dominates Ranji Trophy, BCCI Hints at India Selection Soon
Auqib Nabi: ರಣಜಿ ಹೀರೋ ಆಕಿಬ್ ನಬಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ
Auqib Nabi: ಜಮ್ಮು ಮತ್ತು ಕಾಶ್ಮೀರ ತಂಡದ ಐತಿಹಾಸಿಕ ರಣಜಿ ಗೆಲುವಿನಲ್ಲಿ ವೇಗಿ ಆಕಿಬ್ ನಬಿ ಪ್ರಮುಖರು. ಈ ಆವೃತ್ತಿಯಲ್ಲಿ 60 ವಿಕೆಟ್ಗಳನ್ನು ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ನಬಿ ಪ್ರದರ್ಶನವನ್ನು ಶ್ಲಾಘಿಸಿದ್ದು, ಆಯ್ಕೆದಾರರು ಅವರನ್ನು ಗಮನಿಸಿದ್ದಾರೆ ಎಂದಿದ್ದಾರೆ. ಇಶಾನ್ ಕಿಶನ್ ಉದಾಹರಣೆ ನೀಡಿದ ಅವರು, ನಬಿಗೆ ಶೀಘ್ರದಲ್ಲೇ ಟೀಂ ಇಂಡಿಯಾ ಕರೆ ಬರಲಿದೆ, ಬಹುಶಃ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಬಹುದು ಎಂದು ಸೂಚಿಸಿದ್ದಾರೆ.
Updated on: Mar 03, 2026 | 7:27 PM

ಜಮ್ಮು ಮತ್ತು ಕಾಶ್ಮೀರ ತಂಡ ಮೊಟ್ಟ ಮೊದಲ ಬಾರಿಗೆ ರಣಜಿ ಫೈನಲ್ಗೇರಿ ಪ್ರಶಸ್ತಿ ಗೆಲ್ಲುವಲ್ಲು ಯಶಸ್ವಿಯಾಯಿತು. ಜೆಕೆ ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ತಂಡದ ವೇಗದ ಬೌಲರ್ ಆಕಿಬ್ ನಬಿ ಅವರ ಪಾತ್ರ ಪ್ರಮುಖವಾಗಿತ್ತು. ಇಡೀ ರಣಜಿ ಟ್ರೋಫಿಯಲ್ಲಿ ಎದುರಾಳಿ ತಂಡದ ಬ್ಯಾಟರ್ಗಳನ್ನು ಕಾಡಿದ ನಬಿ ಈ ಆವೃತ್ತಿಯಲ್ಲಿ ಬರೋಬ್ಬರಿ 60 ವಿಕೆಟ್ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದರು.

ದೇಶಿ ಕ್ರಿಕೆಟ್ನಲ್ಲಿ ವಿಕೆಟ್ಗಳ ಮೂಟೆ ಕಟ್ಟುತ್ತಿರುವ ಆಕಿಬ್ ನಬಿಯನ್ನು ಕೂಡಲೇ ಟೀಂ ಇಂಡಿಯಾಗೆ ಆಯ್ಕೆ ಮಾಡಬೇಕು ಎಂಬ ಕೂಗು ಜೋರಾಗಿದೆ. ಇದೀಗ ಈ ಕೂಗಿಗೆ ಸ್ಪಂಧಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ಆಯ್ಕೆದಾರರು ರಣಜಿ ಟ್ರೋಫಿಯಲ್ಲಿ ಪ್ರತಿಯೊಬ್ಬ ಆಟಗಾರನ ಪ್ರತಿಭೆಯನ್ನು ಪರೀಕ್ಷಿಸಿದ್ದಾರೆ. ಹೀಗಾಗಿ ಅದ್ಭುತ ಪ್ರದರ್ಶನ ನೀಡಿದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಅವರು ಸುಳಿವು ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೈಕಿಯಾ, ‘ಅಕಿಬ್ ನಬಿ ಅದ್ಭುತವಾಗಿ ಆಡಿದರು. ಅವರ ಮಾರಕ ಬೌಲಿಂಗ್ ಜಮ್ಮು ಮತ್ತು ಕಾಶ್ಮೀರದ ಯಶಸ್ಸಿಗೆ ಕಾರಣವಾಯಿತು. ಅವರು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ ಆಕಿಬ್ ನಬಿ ಅವರ ಹೆಸರು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದ್ದು, ಆಯ್ಕೆದಾರರು ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’.

‘ಬಿಸಿಸಿಐ ಪ್ರತಿಯೊಬ್ಬ ಆಟಗಾರನ ಪ್ರದರ್ಶನವನ್ನು ಗಮನಿಸುತ್ತದೆ ಮತ್ತು ಆಯ್ಕೆದಾರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಪ್ರತಿಭಾವಂತ ಆಟಗಾರರು ಹೊರಹೊಮ್ಮುತ್ತಿದ್ದು ದೇಶಕ್ಕಾಗಿ ಆಡುತ್ತಿದ್ದಾರೆ. ಉದಾಹರಣೆಗೆ ಇಶಾನ್ ಕಿಶನ್ ಅವರನ್ನೇ ತೆಗೆದುಕೊಳ್ಳಿ, ಎರಡು ವರ್ಷಗಳ ಕಾಲ ಭಾರತ ಕ್ರಿಕೆಟ್ನಿಂದ ದೂರವಿದ್ದ ಕಿಶನ್, ದೇಶಿ ಟೂರ್ನಿಯಲ್ಲಿ ಅಬ್ಬರಿಸಿದರು. ಹೀಗಾಗಿ ಅವರನ್ನು ತಕ್ಷಣವೇ ಭಾರತ ತಂಡಕ್ಕೆ ಆಯ್ಕೆ ಮಾಡಲಾಯಿತು.

ಕಳೆದ ಎರಡು ವರ್ಷಗಳಿಂದ ಆಕಿಬ್ ನಬಿ ಕೂಡ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಎರಡು ರಣಜಿ ಟ್ರೋಫಿ ಆವೃತ್ತಿಗಳಲ್ಲಿ 100 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ, ಆದ್ದರಿಂದ ಅವರು ಶೀಘ್ರದಲ್ಲೇ ಟೀಂ ಇಂಡಿಯಾವನ್ನು ಸೇರಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಆಕಿಬ್ ನಬಿ, ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಬಹುದು ಎಂದಿದ್ದಾರೆ.
