ವಿಶ್ವಕಪ್ ಇತಿಹಾಸದಲ್ಲೇ ಹೀಗೆ ಆಲೌಟಾದ ಮೊದಲ ತಂಡ ಆಸ್ಟ್ರೇಲಿಯಾ!
Australia vs Sri Lanka: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 181 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಶ್ರೀಲಂಕಾ ತಂಡ 18 ಓವರ್‌ಗಳಲ್ಲಿ ಚೇಸ್ ಮಾಡಿ 8 ವಿಕೆಟ್‌ಗಳ ಗೆಲುವು ದಾಖಲಿಸಿದೆ.
Updated on: Feb 17, 2026 | 7:43 AM

T20 World Cup 2026: ಟಿ20 ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಪಲ್ಲೆಕೆಲೆ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿಯು ಪವರ್ ಪ್ಲೇನಲ್ಲಿ ಕಲೆಹಾಕಿದ್ದು ಬರೋಬ್ಬರಿ 70 ರನ್ ಗಳು.

ಪವರ್ ಪ್ಲೇ ಬಳಿಕ ಕೂಡ ಆರ್ಭಟ ಮುಂದುವರೆಸಿದ ಈ ಜೋಡಿಯು 9ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 100 ರನ್ ಗಳ ಗಡಿದಾಟಿಸಿದರು. ಈ ಶತಕದ ಜೊತೆಯಾಟದ ಬಳಿಕ ಟ್ರಾವಿಸ್ ಹೆಡ್ (56) ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (54) ಕೂಡ ವಿಕೆಟ್ ಒಪ್ಪಿಸಿದರು.

ಈ ಎರಡು ವಿಕೆಟ್‌ಗಳ ಪತನದ ಬಳಿಕ ಆಸ್ಟ್ರೇಲಿಯಾ ತಂಡದ ಕುಸಿತ ಶುರುವಾಯಿತು. ಪರಿಣಾಮ ದ್ವಿತೀಯಾರ್ಧದ 10 ಓವರ್‌ಗಳಲ್ಲಿ ಕೇವಲ 71 ರನ್ ಗಳಿಸಿ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡಿತು. ಈ ಮೂಲಕ 181 ರನ್ ಗಳಿಸಿ ಆಲೌಟ್ ಆಗಿದ್ದರು.

ಇದರೊಂದಿಗೆ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ, ಆ ಬಳಿಕ ದಿಢೀರ್ ಕುಸಿತಕ್ಕೊಳಗಾಗಿ ಆಲೌಟ್ ಆದ ಮೊದಲ ತಂಡ ಎನಿಸಿಕೊಂಡಿತು. ಅಂದರೆ ಟಿ20 ವಿಶ್ವಕಪ್‌ನಲ್ಲಿ ಯಾವುದೇ ತಂಡ ಮೊದಲ ವಿಕೆಟ್‌ಗೆ 100ಕ್ಕೂ ಅಧಿಕ ರನ್ ಗಳಿಸಿದ ಬಳಿಕ ಆಲೌಟ್ ಆದ ನಿದರ್ಶನ ಇರಲಿಲ್ಲ.

ಆದರೆ ಶ್ರೀಲಂಕಾ ಬೌಲರ್‌ಗಳ ಕರಾರುವಾಕ್ಕಾದ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ 100 ರನ್ ಗಳಿಸಿ ಆ ಬಳಿಕ ಆಲೌಟ್ ಆದ ತಂಡ ಎನಿಸಿಕೊಂಡಿದೆ.
