IPL 2023: RCB ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ ಗಂಭೀರ್..!
IPL 2023 Kannada: ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 61 ರನ್ ಬಾರಿಸಿ ಔಟಾದರು.
Updated on: Apr 11, 2023 | 5:30 PM

IPL 2023: RCB vs LSG: ಏಪ್ರಿಲ್ 10, 2023..ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 61 ರನ್ ಬಾರಿಸಿ ಔಟಾದರು. ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಮೂಲಕ 115 ರನ್ಗಳ ಜೊತೆಯಾಟವಾಡಿದರು.

ಈ ವೇಳೆ ಡುಪ್ಲೆಸಿಸ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ ಅಜೇಯ 76 ರನ್ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್ವೆಲ್ 29 ಎಸೆತಗಳಲ್ಲಿ 6 ಸಿಡಿಲಬ್ಬರದ ಸಿಕ್ಸ್ ಹಾಗೂ 3 ಫೋರ್ನೊಂದಿಗೆ 59 ರನ್ ಕಲೆಹಾಕಿದರು. ಪರಿಣಾಮ ಆರ್ಸಿಬಿ ತಂಡದ ಮೊತ್ತವು 212 ಕ್ಕೆ ಬಂದು ನಿಂತಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡಕ್ಕೆ ಆ ಬಳಿಕ ನೆರವಾಗಿದ್ದು ಮಾರ್ಕಸ್ ಸ್ಟೋಯಿನಿಸ್. ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಫೋರ್ನೊಂದಿಗೆ ಸ್ಟೋಯಿನಿಸ್ 65 ರನ್ ಬಾರಿಸಿದರು.

ಆ ನಂತರ ಬಂದ ನಿಕೋಲಸ್ ಪೂರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಪೂರನ್ ಅಂತಿಮವಾಗಿ 19 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 62 ರನ್ ಚಚ್ಚಿದರು. ಅಲ್ಲಿಗೆ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಕಡೆ ವಾಲಿತು.

ಇನ್ನು ಆಯುಷ್ ಬದೋನಿಯ 30 ರನ್ಗಳ ನೆರವಿನಿಂದ ಪಂದ್ಯವು ಅಂತಿಮ ಓವರ್ನತ್ತ ಸಾಗಿತು. ಕೊನೆಯ ಓವರ್ನಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್ ವುಡ್ ಬೌಲ್ಡ್ ಆದರು. ಇನ್ನು 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ 1 ರನ್. ಅಲ್ಲಿಗೆ ಸ್ಕೋರ್ ಸಮಗೊಂಡಿತು. ಆದರೆ 5ನೇ ಎಸೆತದಲ್ಲಿ ಉನಾದ್ಕಟ್ ಔಟ್ ಆಗುವುದರೊಂದಿಗೆ ಪಂದ್ಯವು ಮತ್ತೆ ರೋಚಕತೆಯತ್ತ ಸಾಗಿತು.

ಇತ್ತ ಸೂಪರ್ ಓವರ್ ನಿರೀಕ್ಷೆಯಲ್ಲಿ ಆರ್ಸಿಬಿ ತಂಡವು ಫೀಲ್ಡಿಂಗ್ ಸೆಟ್ ಮಾಡಿತು. ಆದರೆ ಅಂತಿಮ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡು ಹಿಡಿಯಲು ವಿಫಲರಾದ ಕಾರಣ ಅವೇಶ್ ಖಾನ್ 1 ಬೈ ರನ್ ಓಡಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್ನಿಂದ ಗೆಲುವು ದಾಖಲಿಸಿತು.

ಇಡೀ ಪ್ರೇಕ್ಷಕರನ್ನು ತುದಿಗಾಲಲ್ಲಿ ಕೂರಿಸಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಗಾಂಭೀರ್ಯತೆಗೆ ಒಳಗಾಗಿದ್ದರು. ಕೊನೆಯ ಎಸೆತದವರೆಗೂ ಫುಲ್ ಟೆನ್ಶನ್ನಲ್ಲಿ ಕಾಣಿಸಿಕೊಂಡ ಗಂಭೀರ್ ಲಕ್ನೋ ಗೆಲ್ಲುತ್ತಿದ್ದಂತೆ ಭರ್ಜರಿಯಾಗಿ ಸಂಭ್ರಮಿಸಿದರು.

ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. ಗಂಭೀರ್ ಅವರ ಈ ಅತಿರೇಕದ ವರ್ತನೆಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಬಗ್ಗೆ ಆರ್ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

TV9 Kannada
Read More




