- Kannada News Photo gallery Cricket photos IPL 2026: Spencer Johnson Chooses CSK Despite Lower Salary
PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!
IPL 2026 vs PSL 2026: ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆ ಪೈಪೋಟಿಗೆ ಇಳಿದಿರುವ ಪಾಕಿಸ್ತಾನ್ ಸೂಪರ್ ಲೀಗ್ಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ಈ ಆಘಾತ ನೀಡುತ್ತಿರುವುದು ಆಟಗಾರರು ಎಂಬುದು ವಿಶೇಷ. ಅಂದರೆ ಪಿಎಸ್ಎಲ್ಗೆ ಆಯ್ಕೆಯಾಗಿದ್ದ ಆಟಗಾರರು ಇತ್ತ ಐಪಿಎಲ್ನಲ್ಲಿ ಚಾನ್ಸ್ ಸಿಗುತ್ತಿದ್ದಂತೆ ಪಾಕಿಸ್ತಾನ್ ಸೂಪರ್ ಲೀಗ್ಗೆ ಕೈ ಕೊಡುತ್ತಿದ್ದಾರೆ.
Updated on: Mar 28, 2026 | 11:57 AM

ಪಾಕಿಸ್ತಾನ್ ಸೂಪರ್ ಲೀಗ್ (PSL 2026) ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2026) ಆಗಮಿಸುತ್ತಿರುವ ಆಟಗಾರರ ಪಟ್ಟಿ ಬೆಳೆಯುತ್ತಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯಾ ವೇಗಿ ಸ್ಪೆನ್ಸರ್ ಜಾನ್ಸನ್. ಸ್ಪೆನ್ಸರ್ ಈ ಬಾರಿಯ ಐಪಿಎಲ್ಗೆ ಆಯ್ಕೆಯಾಗಿರಲಿಲ್ಲ.

ಇತ್ತ ಐಪಿಎಲ್ನಲ್ಲಿ ಚಾನ್ಸ್ ಸಿಗದ ಕಾರಣ ಸ್ಪೆನ್ಸರ್ ಜಾನ್ಸನ್ ಪಾಕಿಸ್ತಾನ್ ಸೂಪರ್ ಲೀಗ್ಗೆ ಹೆಸರು ನೀಡಿದ್ದಾರೆ. ಅದರಂತೆ ಅವರನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ವೇಗಿಯನ್ನು ₹1.88 ಕೋಟಿ ರೂ.ಗೆ (PKR) ಖರೀದಿಸಿತ್ತು. ಆದರೆ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಸ್ಪೆನ್ಸರ್ ಜಾನ್ಸನ್ ಹಿಂದೆ ಸರಿದಿದ್ದಾರೆ.

ಹೀಗೆ ಹಿಂದೆ ಸರಿಯಲು ಮುಖ್ಯ ಕಾರಣ ಐಪಿಎಲ್ನಲ್ಲಿ ಸಿಕ್ಕ ಅವಕಾಶ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಎಲ್ಲಿಸ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದರ ಬೆನ್ನಲ್ಲೇ ಸಿಎಸ್ಕೆ ಸ್ಪೆನ್ಸರ್ ಜಾನ್ಸನ್ ಅವರನ್ನು ಸಂಪರ್ಕಿಸಿದೆ.

ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಆಫರ್ ಸಿಗುತ್ತಿದ್ದಂತೆ ಸ್ಪೆನ್ಸರ್ ಜಾನ್ಸನ್ ಪಾಕಿಸ್ತಾನ್ ಸೂಪರ್ ಲೀಗ್ಗೆ ಕೈ ಕೊಟ್ಟಿದ್ದಾರೆ. ಗಮನಾರ್ಹ ವಿಷಯವೆಂದರೆ, ಅವರು ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸಿಗುತ್ತಿದ್ದ ಹೆಚ್ಚಿನ ಸಂಭಾವನೆಯನ್ನು ಬಿಟ್ಟು, ಕಡಿಮೆ ಮೊತ್ತಕ್ಕೆ ಸಿಎಸ್ಕೆ ತಂಡಕ್ಕೆ ಬಂದಿರುವುದು.

ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸ್ಪೆನ್ಸರ್ ಜಾನ್ಸನ್ಗೆ 1.88 ಕೋಟಿ ರೂ. ನಿಗದಿ ಮಾಡಲಾಗಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಪರ 1.50 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಂದರೆ ಸುಮಾರು ₹38 ಲಕ್ಷ ಕಡಿಮೆ ಮೊತ್ತ ಪಡೆದರೂ ಸ್ಪೆನ್ಸರ್ ಜಾನ್ಸನ್ ಐಪಿಎಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್, ಸ್ಪೆನ್ಸರ್ ಜಾನ್ಸನ್.
