42 ರನ್ಗಳು… ಪಾಕ್ ವಿರುದ್ಧ ‘ಪವರ್’ಫುಲ್ ದಾಖಲೆ ಬರೆದ ಇಶಾನ್ ಕಿಶನ್
India vs Pakistan: ಪಾಕಿಸ್ತಾನ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ಇಶಾನ್ ಕಿಶನ್ ಭರ್ಜರಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಸಹ ಪವರ್ಪ್ಲೇನಲ್ಲೇ ಅತ್ಯಧಿಕ ರನ್ ಕಲೆಹಾಕುವ ಮೂಲ. ಅಂದರೆ ಪಾಕ್ ವಿರುದ್ಧ ಪವರ್ಪ್ಲೇನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ದಾಖಲೆ ಇದೀಗ ಇಶಾನ್ ಕಿಶನ್ ಪಾಲಾಗಿದೆ.
Updated on: Feb 16, 2026 | 8:05 AM

ಟಿ20 ವಿಶ್ವಕಪ್ನ 27ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದ ಮೂಲಕ ಇಶಾನ್ ಕಿಶನ್ (Ishan Kishan) ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಶುಭ್ಮನ್ ಗಿಲ್ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಮತ್ತೊಂದೆಡೆ ಇಶಾನ್ ಕಿಶನ್ ಆರ್ಭಟಿಸಿದ್ದರು. ಪರಿಣಾಮ ಪವರ್ಪ್ಲೇನಲ್ಲೇ ರನ್ಗಳ ಸುರಿಮಳೆಯಾಯಿತು.

ಇಶಾನ್ ಕಿಶನ್ರ ಈ ಅಬ್ಬರದೊಂದಿಗೆ ಟೀಮ್ ಇಂಡಿಯಾ ಪವರ್ಪ್ಲೇನಲ್ಲಿ 52 ರನ್ಗಳಿಸಲು ಸಾಧ್ಯವಾಯಿತು. ವಿಶೇಷ ಎಂದರೆ ಈ 52 ರನ್ಗಳಲ್ಲಿ 42 ರನ್ ಚಚ್ಚಿದ್ದು ಇಶಾನ್. ಈ ಮೂಲಕ ಪಾಕಿಸ್ತಾನ್ ವಿರುದ್ಧ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಚಚ್ಚಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಇಶಾನ್ ಕಿಶನ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಶುಭ್ಮನ್ ಗಿಲ್ ಹೆಸರಿನಲ್ಲಿತ್ತು. 2025ರ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಶುಭ್ಮನ್ ಗಿಲ್ ಪವರ್ಪ್ಲೇನಲ್ಲಿ 35 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಪಾಕ್ ವಿರುದ್ಧ ಪವರ್ಪ್ಲೇನಲ್ಲೇ 42 ರನ್ ಸಿಡಿಸುವ ಇಶಾನ್ ಕಿಶನ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 40 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 10 ಫೋರ್ ಹಾಗೂ 3 ಸಿಕ್ಸರ್ನೊಂದಿಗೆ 77 ರನ್ ಬಾರಿಸಿದ್ದರು. ಈ ಮೂಲಕ ಪಾಕ್ ವಿರುದ್ಧದ ಟಿ20 ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಗೌತಮ್ ಗಂಭೀರ್ ಹೆಸರಿನಲ್ಲಿತ್ತು. ಗಂಭೀರ್ 2007 ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ 75 ರನ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಸಹ ಮುರಿಯುವಲ್ಲಿ ಇಶಾನ್ ಕಿಶನ್ ಯಶಸ್ವಿಯಾಗಿದ್ದಾರೆ.
