ದ್ರಾವಿಡ್ ದಾಖಲೆ ಮುರಿದ ಜೋ ರೂಟ್: ಸಚಿನ್ ರೆಕಾರ್ಡ್ ಶೇಕಿಂಗ್..!
Joe Root Records: ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಹೊಸ ಇತಿಹಾಸ ನಿರ್ಮಿಸುವತ್ತ ಮುನ್ನುಗ್ಗುತ್ತಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಸಚಿನ್ ತೆಂಡೂಲ್ಕರ್ (15,921) ಅವರ ವಿಶ್ವ ದಾಖಲೆ ಮುರಿಯಲು ಜೋ ರೂಟ್ಗೆ ಬೇಕಿರುವುದು ಕೇವಲ 3790 ರನ್ಗಳು ಮಾತ್ರ. ಇದರ ಜೊತೆಗೆ ಅರ್ಧಶತಕದ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿದ್ದಾರೆ.
Updated on: Aug 25, 2024 | 8:55 AM

ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ದರ್ಬಾರ್ ಮುಂದುವರೆದಿದೆ. ಕಳೆದ ಕೆಲ ವರ್ಷಗಳಿಂದ ಭರ್ಜರಿ ಫಾರ್ಮ್ನಲ್ಲಿರುವ ರೂಟ್ ಮ್ಯಾಚೆಂಸ್ಟರ್ನಲ್ಲೂ ಅಬ್ಬರಿಸಿದ್ದಾರೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಜೋ ರೂಟ್ ಅಜೇಯ 61 ರನ್ ಬಾರಿಸಿದ್ದಾರೆ.

ಈ ಅರ್ಧಶತಕದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋ ರೂಟ್ ಮೂರನೇ ಸ್ಥಾನಕ್ಕೇರಿದ್ದಾರೆ. ಅದು ಸಹ ಟೆಸ್ಟ್ ಕ್ರಿಕೆಟ್ನ ದಂತಕಥೆ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಟೀಮ್ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳಲ್ಲಿ 286 ಇನಿಂಗ್ಸ್ ಆಡಿರುವ ರಾಹುಲ್ ದ್ರಾವಿಡ್ 63 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಫಿಫ್ಟಿ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇದೀಗ ದ್ರಾವಿಡ್ ಅವರನ್ನು ಹಿಂದಿಕ್ಕುವಲ್ಲಿ ರೂಟ್ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ಪರ 144 ಟೆಸ್ಟ್ ಪಂದ್ಯಗಳನ್ನಾಡಿರುವ ಜೋ ರೂಟ್ 263 ಇನಿಂಗ್ಸ್ಗಳ ಮೂಲಕ ಒಟ್ಟು 64 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್ನಲ್ಲಿ ಅತೀ ಹೆಚ್ಚು ಹಾಫ್ ಸೆಂಚುರಿ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್ನ ಶಿವನರೈನ್ ಚಂದ್ರಪಾಲ್ (66 ಅರ್ಧಶತಕ).

ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 200 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ ಬ್ಯಾಟ್ ಬೀಸಿದ 329 ಇನಿಂಗ್ಸ್ಗಳಿಂದ ಒಟ್ಟು 68 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ಫಿಫ್ಟಿ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.

ಇದೀಗ 64 ಅರ್ಧಶತಕಗಳೊಂದಿಗೆ 3ನೇ ಸ್ಥಾನಕ್ಕೇರಿರುವ ಜೋ ರೂಟ್ಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯಲು ಬೇಕಿರುವುದು ಕೇವಲ 5 ಅರ್ಧಶತಕಗಳು ಮಾತ್ರ. 33 ವರ್ಷದ ಜೋ ರೂಟ್ ಇನ್ನೊಂದಷ್ಟು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದು, ಹೀಗಾಗಿ ಈ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುವುದನ್ನು ಎದುರು ನೋಡಬಹುದು.

TV9 Kannada
Read More




